ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಬಿಕ್ಕಟ್ಟು ಯಥಾಸ್ಥಿತಿ

Last Updated 10 ಜೂನ್ 2018, 4:43 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಕಾಂಗ್ರೆಸ್‌ ಪಾಳಯದಲ್ಲಿ ಸಚಿವಾಕಾಂಕ್ಷಿಗಳು ಸೃಷ್ಟಿಸಿರುವ ಬಿಕ್ಕಟ್ಟು ಇನ್ನೂ ತಣಿದಿಲ್ಲ. ಪಕ್ಷದ ನಾಯಕತ್ವದ ವಿರುದ್ಧ ತೊಡೆ ತಟ್ಟಲು ಮುಂದಾಗಿರುವ ಅತೃಪ್ತ ಶಾಸಕರು ಮತ್ತು ಬೆಂಬಲಿಗರು ಪಟ್ಟು ಸಡಿಲಿಸುವ ಸೂಚನೆಗಳೂ ಕಾಣುತ್ತಿಲ್ಲ.

ಸಂಪುಟ ವಿಸ್ತರಣೆ ಬೆನ್ನಲ್ಲೇ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿರುವ 17ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರ ನೇತೃತ್ವ ವಹಿಸಿರುವ ಎಂ.ಬಿ. ಪಾಟೀಲ ಅವರನ್ನು ಶನಿವಾರ ನವದೆಹಲಿಗೆ ಕರೆಸಿಕೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಭಿನ್ನಮತೀಯ ಚಟುವಟಿಕೆ ತಕ್ಷಣವೇ ನಿಲ್ಲಿಸುವಂತೆ ತಾಕೀತು ಮಾಡಿದ್ದಾಗಿ ವಿಶ್ವಾಸಾರ್ಹ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

‘ನಿಮ್ಮೆಲ್ಲರ ದೂರು ದುಮ್ಮಾನ ನಮ್ಮ ಗಮನಕ್ಕೆ ಬಂದಿವೆ. ಪರಿಹರಿಸುವ ತನಕ ತಾಳ್ಮೆಯಿಂದ ಕಾಯಿರಿ. ಪಕ್ಷದ ತೀರ್ಮಾನವನ್ನು ಗೌರವಿಸಿ’ ಎಂಬ ಸ್ಪಷ್ಟ ಸಂದೇಶವನ್ನು ಬಂಡಾಯದ ಹಾದಿ ತುಳಿದಿರುವ ಶಾಸಕರಿಗೆ ವರಿಷ್ಠರು ರವಾನಿಸಿದ್ದಾರೆ.

ಆದರೆ, ರಾಹುಲ್‌ ಜೊತೆಗಿನ ಚರ್ಚೆಯ ಬಳಿಕ ಮಾತನಾಡಿದ ಎಂ.ಬಿ. ಪಾಟೀಲರ ಮಾತಿನ ವೈಖರಿ, ಹಾವಭಾವ, ‘ಭೇಟಿ ನಿರೀಕ್ಷಿತ ಫಲ ನೀಡಿಲ್ಲ’ ಎಂಬಂತಿತ್ತು. ಎಲ್ಲ ವಿವರಗಳನ್ನು ಶಾಸಕ ಮಿತ್ರರೊಂದಿಗೆ ಹಂಚಿಕೊಂಡು ಮುಂದಿನ ನಡೆಯನ್ನು ತೀರ್ಮಾನಿಸುವುದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ರಾಹುಲ್‌ ಬಳಿ ನಾನು ಏನು ಹೇಳಿದ್ದೇನೆ, ಅವರು ಏನು ಕೇಳಿದರು, ಅದಕ್ಕೆ ಏನು ಉತ್ತರ ಕೊಟ್ಟೆ ಎಂಬುದನ್ನೆಲ್ಲ ಸ್ನೇಹಿತರಿಗೆ ವಿವರಿಸುತ್ತೇನೆ. ನಾನು, ಸತೀಶ್ ಜಾರಕಿಹೊಳಿ, ಡಾ. ಸುಧಾಕರ್, ಎಂಟಿಬಿ ನಾಗರಾಜ್, ಇನ್ನೂ ಅನೇಕ ಗೆಳೆಯರೆಲ್ಲ ಸಮಾನರು. ನಾವೆಲ್ಲ ಕೂಡಿ ಸದ್ಯವೇ ಮುಂದಿನ ಹೆಜ್ಜೆ ನಿರ್ಧರಿಸುತ್ತೇವೆ’ ಎಂದರು.

ಒಂದಾದ ಲಿಂಗಾಯತ– ವೀರಶೈವರು!: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದ ಲಿಂಗಾಯತ– ವೀರಶೈವರು ಸಮುದಾಯದ ನಾಯಕರೂ ಈಗ ಒಂದಾಗಿದ್ದು, ‘ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ’ ಎಂದು ಕಿಡಿಕಾರಿದ್ದಾರೆ. ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಮಠಾಧೀಶರು ಬೆದರಿಕೆ ಹಾಕಿರುವುದೂ ಕಾಂಗ್ರೆಸ್ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿದೆ.

ಸಚಿವ ಸ್ಥಾನ ಬೇಡಿಕೆ: ‘ಜಿಲ್ಲೆಯ ಇನ್ನಿಬ್ಬರು ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಬೀದರ್‌ ಜಿಲ್ಲೆಯ ಶಾಸಕರಾದ ಈಶ್ವರ ಖಂಡ್ರೆ, ರಹೀಂ ಖಾನ್‌, ಬಿ. ನಾರಾಯಣರಾವ್‌ ಆಗ್ರಹಿಸಿದ್ದಾರೆ.

13ಕ್ಕೆ ಸಾಮೂಹಿಕ ರಾಜೀನಾಮೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ದಾವಣಗೆರೆ ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು ಜೂನ್‌ 13ಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.

ಪರಮೇಶ್ವರ ಚರ್ಚೆ: ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ಮತ್ತು ಅವರ ಬೆಂಬಲಿಗರ ಆಕ್ರೋಶ ತಣಿಸುವ ನಿಟ್ಟಿನಲ್ಲಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ಇತರ ನಾಯಕರ ಜತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಶನಿವಾರ ಚರ್ಚೆ ನಡೆಸಿದರು.

‘ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಸಾಮಾನ್ಯ. ಸಚಿವ ಸ್ಥಾನ ಆಕಾಂಕ್ಷಿಗಳ ಮನವೊಲಿಕೆ ಯತ್ನ ನಡೆಯುತ್ತಿದೆ. ಅವಕಾಶ ಸಿಗದೇ ಇದ್ದಾಗ ಅತೃಪ್ತಿ ವ್ಯಕ್ತಪಡಿಸುವುದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪರಮೇಶ್ವರ ಹೇಳಿದರು.

ಶೀಘ್ರವೇ ಸಂಪುಟ ವಿಸ್ತರಣೆಯಾಗಲಿದ್ದು, ಹೆಚ್ಚುವರಿ ಖಾತೆಗಳನ್ನು ನೂತನ ಸಚಿವರಿಗೆ ಬಿಟ್ಟುಕೊಡಲಾಗುವುದು. ಹೀಗಾಗಿ, ಆಕಾಂಕ್ಷಿಗಳು ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕು ಎಂದೂ ಮನವಿ ಮಾಡಿದರು.

ಶಾಸಕರಾದ ರಾಮಲಿಂಗಾರೆಡ್ಡಿ, ವಿ.ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ಅವರ ಬೆಂಬಲಿಗರು ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಅಸಮಾಧಾನಗೊಂಡಿರುವಹಿರಿಯ ಶಾಸಕ ಎಚ್.ಕೆ. ಪಾಟೀಲಅವರ ಮನೆಗೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಅವರ ಮನವೊಲಿಸುವ ಯತ್ನ ಮಾಡಿದರು.

**

‘ದಮ್ಮಯ್ಯ ಅಂತೀನಿ. ನೋ ರಿಯಾಕ್ಷನ್. ನನ್ನನ್ನ ಏನೂ ಕೇಳ್ಬೇಡಿ. ನನಗೇನೂ ಗೊತ್ತಿಲ್ಲ, ನಾನು ಇನ್ನೂ ಮೂರು ದಿನ ಬಾದಾಮಿಯಲ್ಲೇ ಇರ್ತೇನೆ.

– ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

**

ರಾಹುಲ್‌ ಭೇಟಿಯಿಂದ ತೃಪ್ತಿ ಗಿಪ್ತಿ ಅಂತ ಏನೂ ಇಲ್ಲ. ಎಲ್ಲವನ್ನೂ ಹೇಳೋದಿತ್ತು ಹೇಳಿದ್ದೇನೆ ಅಷ್ಟೇ. ಅವರು (ರಾಹುಲ್) ಕೇಳಿಸಿಕೊಂಡಿದ್ದಾರೆ ಅಷ್ಟೇ.

– ಎಂ.ಬಿ. ಪಾಟೀಲ, ಸಚಿವಾಕಾಂಕ್ಷಿ ಶಾಸಕರ ಮುಖಂಡ

**

‘ನಾಲ್ಕು ಗೋಡೆಗಳ ಮಧ್ಯೆ ಪರಿಹಾರ ಮೂಡಲಿದೆ’

‘ಕಾಂಗ್ರೆಸ್ ಅಧ್ಯಕ್ಷರ ಮುಂದೆ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಆದಕಾರಣ ಅವರು ಯಾವುದೇ ಆಶ್ವಾಸನೆ ನೀಡುವ ಪ್ರಶ್ನೆಯೇ ಏಳುವುದಿಲ್ಲ. ನನ್ನ ಅನಿಸಿಕೆ, ಶಾಸಕ ಮಿತ್ರರ ಭಾವನೆ, ರಾಜ್ಯ ರಾಜಕೀಯದ ಪರಿಸ್ಥಿತಿ ಎಲ್ಲವನ್ನೂ ವಿವರಿಸಿದ್ದೇನೆ. ನಾನು ಹೇಳಿರುವ ಬಹಳಷ್ಟು ವಿಚಾರಗಳಿಂದ ಅವರಿಗೂ ವಾಸ್ತವ ಗೊತ್ತಾಗಿದೆ’ ಎಂದು ಎಂ.ಬಿ. ಪಾಟೀಲ ಹೇಳಿದರು.

‘ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಬಹುದಾ?’ ಎಂಬ ಪ್ರಶ್ನೆಗೆ, ‘ನಾನು ಕೇಳಿದ್ದರೆ ಅಲ್ವೇನ್ರೀ ಮಾಡೋದೂ. ನಾಲ್ಕು ಗೋಡೆಗಳ ಮಧ್ಯೆ ಬಿಕ್ಕಟ್ಟಿಗೆ ಪರಿಹಾರ ಮೂಡಲಿದೆ. ನಾನು ಕೇಳದೆಯೇ ಅವರು ಪ್ರಾಮಿಸ್ ಮಾಡಬೇಕಾ. ಕೇಳಿಯೇ ಇಲ್ಲ ಅಂದ್ರೆ ಪ್ರಾಮಿಸ್ ಮಾಡೋ ಪ್ರಶ್ನೆ ಎಲ್ಲಿಂದ ಬರ್ತದೆ’ ಎಂದರು.

ರಾಹುಲ್ ಗಾಂಧಿಯವರನ್ನು ಪಾಟೀಲ ಭೇಟಿ ಮಾಡಿದಾಗ ಅಹ್ಮದ್ ಪಟೇಲ್ ಕೂಡಾ ಇದ್ದರು. ಆಸ್ಕರ್ ಫರ್ನಾಂಡಿಸ್ ಮತ್ತು ಪಟೇಲ್ ಅವರೇ ಭೇಟಿಯ ಸಮಯಾವಕಾಶ ಮಾಡಿಕೊಟ್ಟರು ಎಂದು ಪಾಟೀಲ ತಿಳಿಸಿದರು.

**

40 ಶಾಸಕರ ಸಭೆ

‘ನಾವು 40 ಜನ ಶಾಸಕರು ಜೊತೆಗಿದ್ದೇವೆ. ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ ಶಾಸಕ ಬೈರತಿ ಬಸವರಾಜು ಹೇಳಿದರು.

‘ಅತೃಪ್ತರು ಎಂದು ಹೇಳಿಕೊಳ್ಳುವವರ ಹಿಂದೆ ಯಾರೂ ಇಲ್ಲ. ಇದೇ 11ರಂದು ನಾವು ಸಭೆ ಸೇರಿ ಸ್ಪಷ್ಟ ಸಂದೇಶ ರವಾನಿಸಲಿದ್ದೇವೆ. ಸರ್ಕಾರ ಸುಗಮವಾಗಿ ನಡೆಯಬೇಕು ಎನ್ನುವುದು ನಮ್ಮ ಅಭಿಲಾಷೆ’ ಎಂದರು.

**

ವರಿಷ್ಠರಿಂದ ‘2+2+1’ ಸೂತ್ರ?

ಸಚಿವಾಕಾಂಕ್ಷಿಗಳ ಬಂಡಾಯ ಶಮನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ‘2+2+1’ ವರ್ಷದ ಸೂತ್ರ ಮುಂದಿಡುವ ಸಾಧ್ಯತೆ ಬಗ್ಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸುಳಿವು ನೀಡಿದ್ದಾರೆ.

ಸಚಿವರ ಕಾರ್ಯಕ್ಷಮತೆ ಪರಿಗಣಿಸಿ ನಂತರದ ಅವಧಿಗೆ ಹೊಸಬರಿಗೆ ಅವಕಾಶ ನೀಡಲಾಗುವುದು. ಖಾಲಿ ಇರುವ ಆರು ಸಚಿವ ಸ್ಥಾನ ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

**

‘ಸಾರಿಗೆ’ ಖಾತೆಗೆ ಜಿ.ಟಿ. ದೇವೇಗೌಡ ಪಟ್ಟು

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಕ್ಯಾತೆ ಆರಂಭವಾಗಿದ್ದರೆ, ಕೊಟ್ಟಿರುವ ಖಾತೆಯೇ ತಮ್ಮ ‘ವ್ಯಕ್ತಿತ್ವ’ಕ್ಕೆ ಹೊಂದುತ್ತಿಲ್ಲ ಎಂದು ಜೆಡಿಎಸ್‌ ನಾಯಕರು ರಗಳೆ ಶುರು ಮಾಡಿದ್ದಾರೆ.

‘ಉನ್ನತ ಶಿಕ್ಷಣ ಖಾತೆ ಬೇಡ, ಸಾರಿಗೆ ಖಾತೆಯೇ ಬೇಕು’ ಎಂದು ಜೆಡಿಎಸ್‌ನ ಜಿ.ಟಿ. ದೇವೇಗೌಡ ಪಟ್ಟು ಹಿಡಿದಿದ್ದಾರೆ. ಪಕ್ಷದ ವರಿಷ್ಠ ದೇವೇಗೌಡರ ಬೀಗರಾದ ಡಿ.ಸಿ. ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅವರಿಂದ ಕಿತ್ತುಕೊಳ್ಳುವುದು ಹೇಗೆ ಎಂಬುದು ವರಿಷ್ಠರಿಗೆ ತಲೆನೋವು ತಂದಿದೆ.

ಸಣ್ಣ ನೀರಾವರಿ ತಮ್ಮ ವ್ಯಕ್ತಿತ್ವಕ್ಕೆ ‘ಸಣ್ಣ’ದಾಯಿತು ಎಂದು ತಮ್ಮ ಆಪ್ತರಲ್ಲಿ ರಾಗ ಎಳೆದಿದ್ದ, ಸಿ.ಎಸ್‌. ಪುಟ್ಟರಾಜು ಈಗ ‘ನನಗೇನೂ ಅಸಮಾಧಾನವಿಲ್ಲ’ ಎಂದು ಹೇಳಿದ್ದಾರೆ. ‘ಎಲ್ಲರ ಮನವೊಲಿಸಲಾಗುವುದು. ಇನ್ನೆರಡು ದಿನದಲ್ಲಿ ಎಲ್ಲವೂ ಸರಿಹೋಗಲಿದೆ’ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT