ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ದಿನಾಚರಣೆ- ಬೆಲ್ಲದ ಹಬ್ಬ- ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ

ಕೃಷಿ ಇಲಾಖೆ, ಬಿ.ವಿ.ವಿ ಸಂಘದ ಎಂಬಿಎ ಕಾಲೇಜು ಸಹಯೋಗ
Last Updated 21 ಡಿಸೆಂಬರ್ 2021, 12:35 IST
ಅಕ್ಷರ ಗಾತ್ರ

ಬಾಗಲಕೋಟೆ: ರೈತ ದಿನಾಚರಣೆ ಅಂಗವಾಗಿ ಡಿಸೆಂಬರ್ 23 ರಂದು ನಗರದಲ್ಲಿ ಬೆಲ್ಲದ ಹಬ್ಬ ಆಯೋಜಿಸಲಾಗಿದೆ. ಈ ವೇಳೆ ಬೆಲ್ಲದ ಮೌಲ್ಯವರ್ಧಿಸಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವ್ಯಾಪ್ತಿಯಲ್ಲಿ 1 ಲಕ್ಷ ಎಕರೆಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಬೆಲ್ಲ ಉತ್ಪಾದನೆಯಲ್ಲಿ ಮಹಾಲಿಂಗಪುರ ದೇಶದಲ್ಲಿಯೇ ಹೆಸರಾಗಿದೆ. ಬೆಲ್ಲದಿಂದ ಸಿದ್ಧಪಡಿಸಿದ ವಿವಿಧ ಆಹಾರ ಪದಾರ್ಥಗಳ ತಯಾರಿಕೆ, ಉತ್ಪನ್ನಗಳನ್ನು ಪ್ಯಾಕ್ ಮಾಡಿ ಬ್ರ್ಯಾಂಡ್ ರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಬೆಲ್ಲದ ಹಬ್ಬ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇಲ್ಲಿನ ವಿದ್ಯಾಗಿರಿಯಲ್ಲಿರುವ ಬಿ.ವಿ.ವಿ ಸಂಘದ ಎಂಬಿಎ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬೆಲ್ಲ, ಸಿರಿಧಾನ್ಯ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಬಳಸಿ ತಯಾರಿಸಿದ ತಿನಿಸುಗಳ ಪ್ರದರ್ಶನ ಕೂಡ ನಡೆಯಲಿದೆ ಎಂದರು.

ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತ ಅಭಿಯಾನದಡಿ ’ಒಂದು ಜಿಲ್ಲೆ ಒಂದು ಉತ್ಪನ್ನ‘ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಅಭಿವೃದ್ಧಿಗೆ ವೇದಿಕೆಯಾಗಲಿದೆ. ಈ ಯೋಜನೆಯಡಿ ಈಗಾಗಲೇ 22 ಮಂದಿ ಆಸಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ನೇರ ಮಾರಾಟ ವ್ಯವಸ್ಥೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ, ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಬಾಬಾಸಾಹೇಬ್ ಬೋರಸೆ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಹೇಮಲತಾ ಪೋದ್ದಾರ, ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಮೇಟಿ ಉಪನ್ಯಾಸ ನೀಡಲಿದ್ದಾರೆ ಎಂದರು.

ಎಂ.ಬಿ.ಎ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ.ಅಳ್ಳಗಿ ಮಾತನಾಡಿ, ಎಂಬಿಎ ವಿದ್ಯಾರ್ಥಿಗಳು ಬೆಲ್ಲದಿಂದ ವಿವಿಧ ಆಹಾರ ಉತ್ಪನ್ನಗಳ ತಯಾರಿಸಿ ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ 40 ತಂಡಗಳ ರಚಿಸಲಾಗಿದೆ. ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರೈತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಮೌನೇಶ್ವರಿ ಕಮ್ಮಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಬಿ.ಹಳ್ಳೊಳ್ಳಿ, ಗೀತಾ ಹಿರೇಮಠ, ಎಂ.ಬಿ.ಎ ಕಾಲೇಜಿನ ಅಶೋಕ ಉಟಗಿ, ವಿಜಯಲಕ್ಷ್ಮೀ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT