ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಭದ್ರತೆಗೆ ಎಲ್ಲರೂ ಕೈಜೋಡಿಸಿ: ಶಾಸಕ ವೀರಣ್ಣ ಚರಂತಿಮಠ ಮನವಿ

ಮೇದಾರ ಸಮುದಾಯದ ಜಿಲ್ಲಾ ಮಟ್ಟದ ಸಮಾವೇಶ
Last Updated 21 ಜನವರಿ 2020, 16:09 IST
ಅಕ್ಷರ ಗಾತ್ರ

ಬಾಗಲಕೋಟೆ: ದೇಶದಲ್ಲಿ ನೆಲೆಸಿರುವ ಎಲ್ಲ ಧರ್ಮೀಯರಲ್ಲೂ ದೇಶವೇ ದೇವರು ಎಂಬ ಭಾವನೆ ಮೂಡಬೇಕಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಇಲ್ಲಿನ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಕೇತೇಶ್ವರ ಜ್ಯೋತಿ ಯಾತ್ರೆಗೆ ಸ್ವಾಗತ ಹಾಗೂ ಮೇದಾರ ಜನಾಂಗದ ಜಿಲ್ಲಾ ಮಟ್ಟದ ಪ್ರಥಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಕಾನೂನು ಜಾರಿಗೊಳಿಸುತ್ತಿದೆ. ಅದಕ್ಕೆ ಮೇದಾರ ಸಮಾಜ ಸೇರಿದಂತೆ ದೇಶದಲ್ಲಿರುವ ಎಲ್ಲ ಸಣ್ಣ ಪುಟ್ಟ ಸಮಾಜಗಳು ಬೆಂಬಲ ನೀಡಬೇಕಿದೆ ಎಂದರು.

ಶರಣ ಮೇದಾರ ಕೇತಯ್ಯನವರ ಕಾಯಕ, ದಾಸೋಹ ನಿಷ್ಠೆ ನಮಗೆಲ್ಲ ಅನುಕರಣೀಯ. ಮೇದಾರ ಜನಾಂಗದ ಕಾಯಕ ಎಲ್ಲರಿಗೂ ಮಾದರಿಯಾಗಿದ್ದು, ಮೇದಾರ ಸಮಾಜವು ಶಿಕ್ಷಣ, ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.

ಮೇದಾರ ಕೇತೇಶ್ವರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಪಾಟೀಲ ಮಾತನಾಡಿ, ಮೇದಾರ ಕೇತಯ್ಯನವರ ಕಾಯಕ, ದಾಸೋಹ ಪರಂಪರೆಯನ್ನು ಅಣ್ಣ ಬಸವಣ್ಣ ಮೆಚ್ಚಿಕೊಂಡು ಅನುಭವ ಮಂಟಪದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದರು ಎಂದರು.

ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿ 58 ಸಮಾಜಗಳಿವೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ವಾಲ್ಮೀಕಿ ಸಮಾಜದ ನಂತರ ಮೇದಾರ ಸಮುದಾಯ ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಸಮುದಾಯವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇರುವ ಏಕೈಕ ಬುಡಕಟ್ಟು ಜನಾಂಗ ನಮ್ಮದು. ಬಿದಿರು ಮರದಿಂದ ಬದುಕು ರೂಪಿಸಿಕೊಂಡಿರುವ ಸಣ್ಣ ಸಮಾಜಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಇಳಕಲ್ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, 12 ಶತಮಾನದ ಶರಣರಲ್ಲಿ ಮೇದಾರ ಕೇತಯ್ಯನವರು ಅಗ್ರಗಣ್ಯ ಸ್ಥಾನ ಪಡೆದಿದ್ದರು. ಕಾಯಕ ನಿಷ್ಠೆಯಿಂದ ಬಸವಣ್ಣನವರಿಗೆ ಪ್ರೀತಿ ಪಾತ್ರರಾಗಿದ್ದ ಸಮಾಜಕ್ಕೆ ಮೋಸ, ವಂಚನೆ ಎನ್ನುವ ಶಬ್ಧಗಳೇ ಗೊತ್ತಿಲ್ಲ ಎಂದರು.

ಕಮತಗಿಯ ವೀರೇಶ್ವರ ಸ್ವಾಮೀಜಿ ಹಾಗೂ ಚಿತ್ರದುರ್ಗ ಜಿಲ್ಲೆಯ ಮೇದಾರ ಗುರು ಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ಸರೋಜಾ ಪಾಟೀಲ, ಬಸವರಾಜ ದಾವಣಗೆರೆ, ಅಯ್ಯಪ್ಪ ಮೇದಾರ, ರಮೇಶ ಬುರುಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT