ಬಾಗಲಕೋಟೆ: ಮಾಹಿತಿ ಹಕ್ಕು ಕಾಯಿದೆ ಕುರಿತು ಅಧಿಕಾರಿಗಳು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಎಂದು ಕಲಬುರಗಿ ಪೀಠ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ದಾಖಪ್ಪನವರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಬಹುತೇಕ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ಕೆಲಸದ ಒತ್ತಡದಲ್ಲಿ ಮಾಹಿತಿ ಹಕ್ಕು ಕಾಯಿದೆ ಕುರಿತು ಅಧ್ಯಯನ ಮಾಡದೇ, ತಮ್ಮ ಅಧೀನ ಸಿಬ್ಬಂದಿ ಹೇಳುವ ಮಾತಿನ ಆಧಾರದ ಮೇಲೆ ಅರ್ಜಿದಾರನಿಗೆ ಮಾಹಿತಿ ನೀಡಿ ಅನಗತ್ಯವಾದ ಗೊಂದಲ ಮಾಡಿಕೊಂಡಿರುವುದು ಕಾಣಬಹುದಾಗಿದೆ. ಸಂಪೂರ್ಣವಾಗಿ ಅರಿತುಕೊಂಡಲ್ಲಿ ಯಾವುದೇ ಸಮಸ್ಯೆ ಉದ್ಬವಿಸುವುದಿಲ್ಲ ಎಂದು ತಿಳಿಸಿದರು.
ಮಾಹಿತಿ ಕೇಳುವ ಅರ್ಜಿದಾರನಿಗೆ, ಕಾನೂನು ಅಡಿಯಲ್ಲಿ ಬರುವಂತಹ ವಿಷಯಗಳಿದ್ದಲ್ಲಿ 30 ದಿನದೊಳಗೆ ನೋಂದಾಯಿತ ಅಂಚೆ ಮೂಲಕ ಮಾಹಿತಿ ನೀಡಬೇಕು. ವೈಯಕ್ತಿಕ ವಿಷಯಗಳಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದರೂ ಮಾಹಿತಿ ನೀಡಲು ಬರುವುದಿಲ್ಲ. ಮಾಹಿತಿ ನೀಡುವ ಮುನ್ನ, ಯಾವ ಕಲಂ ಏನು ಹೇಳುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರಿತು ಮಾಹಿತಿ ನೀಡಬೇಕು. ಹೆದರುವ ಅವಶ್ಯಕತೆ ಇಲ್ಲ ಎಂದರು.
ಕಚೇರಿಯಲ್ಲಿ ಕಡತಗಳನ್ನು ಸರಿಯಾಗಿ ನಿರ್ವಹಿಸಿದಲ್ಲಿ ಅರ್ಜಿದಾರನಿಗೆ ಮಾಹಿತಿ ನೀಡುವ ಕೆಲಸ ಸುಲಭವಾಗುವುದರಿಂದ ಕಡತಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಕಚೇರಿಯಲ್ಲಿ ಸಿಬ್ಬಂದಿ ನಡುವೆ ಒಗ್ಗಟ್ಟು ಇಲ್ಲದಿದ್ದಾಗ ಮಾಹಿತಿ ಕೇಳುವ ಅರ್ಜಿದಾರರ ಸಂಖ್ಯೆಯು ಹೆಚ್ಚಾಗಿ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.