ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವೈದ್ಯರ ಕೊರತೆ: ಶಿವಾನಂದ ಪಾಟೀಲ

ನವನಗರ ಜಿಲ್ಲಾಸ್ಪತ್ರೆ ಆವರಣ: ನೂತನ ತಾಯಿ–ಮಕ್ಕಳ ಆಸ್ಪತ್ರೆ ಲೋಕಾರ್ಪಣೆ
Last Updated 2 ಅಕ್ಟೋಬರ್ 2018, 14:38 IST
ಅಕ್ಷರ ಗಾತ್ರ

ಬಾಗಲಕೋಟೆ: ‘ರಾಜ್ಯದಲ್ಲಿ ಪ್ರತಿ ವರ್ಷ ಎಂಟು ಸಾವಿರ ಮಂದಿ ವೈದ್ಯಕೀಯ ಪದವಿ ಮುಗಿಸಿದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಆರಂಭವಾದ ತಾಯಿ, ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ‘ವೈದ್ಯಕೀಯ ಪದವಿ ಮುಗಿಸಿದ ಪ್ರತಿಯೊಬ್ಬರೂ ಎರಡು ವರ್ಷ ಕಾಲ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಕಾನೂನು ಜಾರಿಗೊಳಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ ಇರುವುದಿಲ್ಲ’ ಎಂದರು.

‘ಹುಬ್ಬಳ್ಳಿ ಹಾಗೂ ಕಲಬುರ್ಗಿಯಲ್ಲಿರುವ ಸರ್ಕಾರಿ ಪ್ರಯೋಗಾಲಯಗಳನ್ನು ಉನ್ನತೀಕರಣಗೊಳಿಸಲು ಕೇಂದ್ರದ ನೆರವು ಪಡೆಯಲಾಗುತ್ತಿದೆ ಎಂದ ಅವರು, ‘ಆಯುಷ್ಮಾನ್‌ ಭಾರತ ಹಾಗೂ ಆರೋಗ್ಯ ಕರ್ನಾಟಕ’ ಸೇರಿಸಿ 1600 ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ₹ 5 ಲಕ್ಷದ ವರೆಗೆ ವಿಮೆ ನೀಡಲಾಗುತ್ತದೆ’ ಎಂದರು.

‘ಜಿಲ್ಲೆಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಹಾಗೂ ಬಾಗಲಕೋಟೆಯಲ್ಲಿನ 50 ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿನ ಖಾಲಿ ಇರುವ ವೈದ್ಯರನ್ನು ಎರಡು ತಿಂಗಳಲ್ಲಿ ಭರ್ತಿ ಮಾಡಲಾಗುತ್ತದೆ ಎಂದ ಅವರು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಟ್ಟಡದ ಕೆಲಸವನ್ನು ಈ ವರ್ಷದ ಅಂತ್ಯದವರೆಗೆ ಮುಗಿಸಲಾಗುತ್ತದೆ’ ಎಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಜಿಲ್ಲಾ ಆಸ್ಪತ್ರೆಯಲ್ಲಿ ಮೊದಲು ಕೇವಲ 90 ಹಾಸಿಗೆಗಳ ವ್ಯವಸ್ಥೆ ಇದ್ದು, ತಾವೂ ಶಾಸಕರಾದ ಮೇಲೆ ಅದನ್ನು 250 ಹಾಸಿಗೆಗಳಿಗೆ ಏರಿಸಿದ್ದಾಗಿ ಹೇಳಿದರು. ಸದ್ಯ 400 ಹಾಸಿಗೆಗಳಿಗೆ ಹೆಚ್ಚಳಗೊಳಿಸಲಾಗುತ್ತಿದೆ. ರೋಗಿಗಳನ್ನು ಗುಣಮುಖರನ್ನಾಗಿ ಮಾಡಲು ವೈದ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.

‘ಹಳೆ ಬಾಗಲಕೋಟೆಯಲ್ಲಿನ 50 ಹಾಸಿಗೆಗಳ ಆಸ್ಪತ್ರೆಗೆ ಬೇಕಿರುವ ವೈದ್ಯರನ್ನು ನೀಡುವುದಾಗಿ ಸಚಿವರು ಹೇಳಿದ್ದು, ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬೇಕಾದ ಕ್ರಮಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಶಸ್ತ್ರ ಚಿಕಿತ್ಸಕರ ಜವಾಬ್ದಾರಿ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪಂಚಾಯ್ತಿ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸುಜಾತಾ ಸಿಂಗಾಡೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹಾಂತೇಶ ಉದಪುಡಿ, ಬಸವರಾಜ ಖೋತ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೆದ್ ಅಖ್ತರ್, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ್, ಉಪವಿಭಾಗಾಧಿಕಾರಿ ಎಚ್.ಜಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT