ಜಮಖಂಡಿ: ಮಳೆ ಕೊರತೆಯಿಂದ ಕೃಷಿಭೂಮಿಯ ಬೆಳೆ ಬಿರು ಬಿಸಿಲಿಗೆ ಒಣಗಿವೆ. ಜಾನುವಾರಗಳು ಹಸಿರು ಮೇವಿಲ್ಲದೆ, ಬಕಪಕ್ಷಿಗಳು ಆಹಾರ, ನೀರಿಲ್ಲದೆ ಪರದಾಡುತ್ತಿವೆ.
ಮುಂಗಾರು ಹಂಗಾಮಿನಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದಿರುವುದರಿಂದ ಮುಂಗಾರು ಪ್ರಾರಂಭವಾಗಿ ಒಂದು ತಿಂಗಳ ನಂತರ ಕಡಿಮೆ ಮಳೆಯಾದರೂ ಮಳೆ ನಂಬಿ ಬಿತ್ತನೆ ಮಾಡಿದ ರೈತರಿಗೆ ಮುಂದೆಯೂ ಸಮರ್ಪಕ ಮಳೆಯಾಗದೆ ಬೆಳೆಗಳೆಲ್ಲ ಕಾಳು ಕಟ್ಟುವ ಮೊದಲೇ ಒಣಗಿವೆ. ಹಿಂಗಾರು ತೇವಾಂಶದ ಕೊರತೆಯಿಂದ ಬಿತ್ತನೆಯಾಗದೆ ರೈತಾಪಿ ವರ್ಗ ಮಳೆಯ ದಾರಿ ಕಾಯುತ್ತಿದೆ.
ಪ್ರತಿವರ್ಷ ಅಕ್ಟೋಬರ್‌ವರೆಗೆ ಸಾಮಾನ್ಯವಾಗಿ 515 ಎಂ.ಎಂ ಮಳೆಯಾಗುತ್ತಿತ್ತು. ಈ ಬಾರಿ 317ಎಂ.ಎಂ ಮಳೆಯಾಗಿದೆ. ಬಿಸಿಲಿನ ಹೊಡೆತಕ್ಕೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಾದ ಗೋವಿನ ಜೋಳ 8,790 ಹೆಕ್ಟೇರ್, ತೊಗರಿ 1,115 ಹೆಕ್ಟೇರ್, ಹೆಸರು 7 ಹೆಕ್ಟೇರ್, ಉದ್ದು 182 ಹೆಕ್ಟೇರ್, ಸೂರ್ಯಕಾಂತಿ 200 ಹೆಕ್ಟೇರ್, ಸೋಯಾಬೀನ್ 27 ಹೆಕ್ಟೇರ್, ಕಬ್ಬು 18,699 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 28,420 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
ಅಂದಾಜು ₹46.61 ಕೋಟಿ ಹಾನಿಯಾಗಿದೆ. ಹಿಂಗಾರು ಹಂಗಾಮಿನ ಬಿತ್ತನೆ 13,365 ಹೆಕ್ಟೇರ್ ಆಗಿದ್ದು, ಇಲಾಖೆಯಲ್ಲಿ 1,484 ಕ್ವಿಂಟಲ್ ಬೀಜಗಳ ದಾಸ್ತಾನಿದ್ದು, ಅದರಲ್ಲಿ 974 ಕ್ವಿಂಟಲ್ ಮಾರಾಟವಾಗಿದೆ.
ತಾಲ್ಲೂಕಿನಲ್ಲಿ ಜಾನುವಾರು, ಕುರಿಗಳಿಗೆ ಪ್ರಸ್ತುತ 40,768 ಟನ್ ಮೇವು ಲಭ್ಯವಿದ್ದು, ಎರಡರಿಂದ ಮೂರು ತಿಂಗಳಲ್ಲಿ ಖಾಲಿಯಾಗುತ್ತವೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಈಗಾಗಲೇ ಕೆಲ ರೈತರಿಗೆ ಮೇವು ಖಾಲಿಯಾಗಿದ್ದು, ಅಂಥವರ ಗೋವಿಗೆ ಗೋಶಾಲೆ ಪ್ರಾರಂಭ ಮಾಡಿದರೆ ಅನುಕೂಲವಾಗುತ್ತದೆ.
ಕುಡಿಯುವ ನೀರಿಗೂ ತತ್ವಾರ: ಮುಂಗಾರಿನಲ್ಲಿ ಮಹಾರಾಷ್ಟ್ರದ ಕೃಷ್ಣಾ ಕೊಳದಲ್ಲಿ ಮಳೆಯಾಗಿ ನೂರಾರು ಟಿಎಂಸಿ ನೀರು ಹರಿದು ಸಮುದ್ರ ಪಾಲಾಗುತ್ತದೆ. ಆದರೆ ಸರ್ಕಾರ ತಾಲ್ಲೂಕಿನ ಕೆರೆ ಕಟ್ಟೆಗಳಲ್ಲಿ ಪ್ರತಿವರ್ಷ ಕೃಷ್ಣಾ ನದಿಯಿಂದ ನೀರು ತುಂಬಿದರೆ ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿ ತೆರೆದ ಬಾವಿಗೆ ನೀರಾಗುತ್ತವೆ. ಆದರೆ ಮಳೆಯೂ ಇಲ್ಲದೆ ನೀರು ತುಂಬದ ಕಾರಣ ಪ್ರಾಣಿ ಪಕ್ಷಿಗಳು ಪರದಾಡುವಂತಾಗಿದೆ. ಕೊಳವೆ ಬಾವಿ, ತೆರೆದ ಬಾವಿ ಬತ್ತುತ್ತಿದ್ದು ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಳೆಯಾಗದಿರುವುದರಿಂದ ರೈತರಿಗೆ ಯಾವುದೇ ಕಾಳು ಕಡಿಗಳು ಬಂದಿಲ್ಲ. ಈ ವರ್ಷ ಕುಟುಂಬ ನಡೆಸುವದೇ ಸವಾಲಾಗಿ ಪರಿಣಮಿಸಿದೆ. ಕೆಲ ಕುಟುಂಬಗಳು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದರೂ ಜಾನುವಾರಗಳಿಗೆ ಮೇವಿಲ್ಲದೆ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ರೈತ ಬೀರಪ್ಪ ಎಣ್ಣಿ.
ಕುರಿಗಳಿಗೆ ಹಾಕಲು ಮೇವು ಸಂಗ್ರಹವಾಗಿಲ್ಲ, ಪ್ರತಿವರ್ಷ ಗುಡ್ಡ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಮೇವು ಸಿಗುತ್ತಿತ್ತು. ಅದನ್ನೇ ನಂಬಿಕೊಂಡು ಕುರಿಗಳನ್ನು ಸಾಕಿದ್ದೇವೆ. ಈ ಭಾರಿ ಎಲ್ಲೂ ಮೇವಿಲ್ಲ. ಕುರಿಗಳನ್ನು ಸಾಕುವುದೇ ಕಷ್ಟವಾಗಿದೆ ಎನ್ನುತ್ತಾರೆ ಕೊಣ್ಣೂರಿನ ಕುರಿಗಾಹಿ ಜಯಗೊಂಡ ದಡ್ಡಿನ್ನವರ.
ಸರ್ಕಾರ ಕೂಡಲೇ ಬೆಳೆ ನಷ್ಟದ ಪರಿಹಾರವನ್ನು ನೀಡಬೇಕು. ತೀವ್ರ ಬರಗಾಲ ಇರುವುದರಿಂದ ಗೋಶಾಲೆ ಪ್ರಾರಂಭ ಮಾಡಬೇಕು
–ರಾಜು ನದಾಫ್ ರೈತ ಮುಖಂಡ
ವಿದ್ಯುತ್ ಕಣ್ಣಾಮುಚ್ಚಾಲೆ
‘ಕೃಷ್ಣಾ ನದಿ ತೀರದ ಹಾಗೂ ಕೆಲ ಕಾಲುವೆಗಳ ಪಕ್ಕದ ರೈತರು ನೀರು ಎತ್ತಿ ಅಲ್ಪಸ್ವಲ್ಪ ಬೆಳೆಗಳನ್ನು ಕಾಪಾಡಿಕೊಳ್ಳಬೇಕೆಂದರೆ ವಿದ್ಯುತ್ ಕಣ್ಣಾಮುಚಾಲೆಯಿಂದ ಅದು ಸಾಧ್ಯವಾಗುತ್ತಿಲ್ಲ. ಹೆಸ್ಕಾಂ ನೀಡುವ ಕಡಿಮೆ ವೋಲ್ಟೇಜ್ ವಿದ್ಯುತ್‌ನಿಂದ ಮೋಟರ್‌ಗಳು ಸುಟ್ಟು ಹೋಗುತ್ತಿವೆ. ಮರಳಿ ಮೋಟರ್ ತರಿಸಲು ಆಗದ ಪರಿಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ರೈತ ವಿಠ್ಠಲ ಅರಕೇರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.