ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ₹20 ಸಾವಿರ ದಂಡ

ತುಮ್ಮರಮಟ್ಟಿ: ಶೀಲಶಂಕಿಸಿ ಜಂಬೆಯಿಂದ ಹೊಡೆದು ಪತ್ನಿಯ ಕೊಲೆ
Last Updated 16 ಡಿಸೆಂಬರ್ 2019, 14:02 IST
ಅಕ್ಷರ ಗಾತ್ರ

ಬಾಗಲಕೋಟೆ: ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ ವ್ಯಕ್ತಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿದೆ.

ಬೀಳಗಿ ತಾಲ್ಲೂಕಿನ ತುಮ್ಮರಮಟ್ಟಿ ಗ್ರಾಮದ ಮಲ್ಲಪ್ಪ ನಾಗಪ್ಪ ಯರಗಟ್ಟಿ (ಐಹೊಳೆ) ಶಿಕ್ಷೆಗೊಳಗಾದವನು. ಜಂಬೆಯಿಂದ ಪತ್ನಿ ಪದ್ಮಾ ಅವರ ಕತ್ತಿನ ಬಲಭಾಗಕ್ಕೆ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಬೀಳಗಿ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್ ನಂದಿಕೇಶ್ವರ ಬಿ.ಕುಮಾರ 2013ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ:

ತವರು ಮನೆಯ ಆಸ್ತಿಯಲ್ಲಿ ಪಾಲು ಬೇಕು ಎಂದು ಮಲ್ಲಪ್ಪ ಯರಗಟ್ಟಿಯ ಅಕ್ಕ ಶಂಕರವ್ವ ತಮ್ಮನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರಿಂದ ಅಕ್ಕನ ಮೇಲೆ ಮಲ್ಲಪ್ಪ ಕೋಪಗೊಂಡಿದ್ದನು. ಶಂಕರವ್ವ ತುಮ್ಮರಮಟ್ಟಿಗೆ ಬಂದಾಗಲೆಲ್ಲಾ, ಆಕೆಯೊಂದಿಗೆ ತನ್ನ ಪತ್ನಿ ಪದ್ಮಾ ಮಾತನಾಡುತ್ತಿದ್ದದ್ದು ಮಲ್ಲಪ್ಪನಲ್ಲಿ ಅಸಮಾಧಾನ ಮೂಡಿಸಿತ್ತು. ನಂತರ ಪದ್ಮಾ ತವರು ಮನೆಗೆ ಹೋಗಿದ್ದು, ತನ್ನ ತಾಯಿ ಕರೆಯಲು ಹೋದರೂ ಆಕೆ ಬರಲಿಲ್ಲ ಎಂದು ಆಕ್ರೋಶಗೊಂಡಿದ್ದ ಮಲ್ಲಪ್ಪ ಆಕೆಯ ಶೀಲದ ಬಗ್ಗೆ ಸಂಶಯಗೊಂಡು ಕೊಲೆ ಮಾಡಲು ನಿರ್ಧರಿಸಿದ್ದನು.

2013ರ ಏಪ್ರಿಲ್ 30ರಂದು ಪದ್ಮಾ ತವರಿಗೆ ತೆರಳಿ ಅಲ್ಲಿ ಅಪ್ಪನ ಹೊಲಕ್ಕೆ ಹೋಗಿದ್ದ ಆಕೆಯನ್ನು ಭೇಟಿ ಮಾಡಿ ಮಾತಿಗೆಳೆದ ಮಲ್ಲಪ್ಪ, ಇದೇ ವೇಳೆ ದೊಡ್ಡ ಜಂಬೆಯಿಂದ ಆಕೆಯ ಕುತ್ತಿಗೆಯ ಬಲಬದಿಗೆ ಹೊಡೆದಿದ್ದು, ಕುಸಿದುಬಿದ್ದ ಆಕೆಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಕೃತ್ಯ ನಡೆದ ಸ್ಥಳದಿಂದ ಬೈಕ್‌ನಲ್ಲಿ ಪರಾರಿಯಾಗಿದ್ದ ಮಲ್ಲಪ್ಪ ದಾರಿ ಮಧ್ಯೆ ಅದೇ ಜಂಬೆಯಿಂದ ತನ್ನ ಹೊಟ್ಟೆ ಹಾಗೂ ತಲೆಗೆ ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದನು. ಪದ್ಮಾ ಪೋಷಕರು ನೀಡಿದ ದೂರು ಆಧರಿಸಿ ಬೀಳಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT