ಪುಟ್ಟ ಗ್ರಾಮದ ಮಾದರಿ ಶಾಲೆ!

7
ಮದನಮಟ್ಟಿ; ಮಕ್ಕಳ ಕಲಿಕೆಗೆ ಅಕ್ಕರೆಯ ವಾತಾವರಣ

ಪುಟ್ಟ ಗ್ರಾಮದ ಮಾದರಿ ಶಾಲೆ!

Published:
Updated:
Deccan Herald

ರಬಕವಿ ಬನಹಟ್ಟಿ: ಬೇರೆ ಕಡೆಯಲ್ಲಿ ಸರ್ಕಾರಿ ಶಾಲೆ ಬೆಳಿಗ್ಗೆ 10 ಗಂಟೆಗೆ ಆರಂಭವಾದರೆ ಸಮೀಪದ ಮದನಮಟ್ಟಿಯ ಶಾಲೆ ಮಾತ್ರ ಬೆಳಿಗ್ಗೆ 9 ಗಂಟೆಗೆ ಮಕ್ಕಳ ಕಲರವ ಜೀವ ಪಡೆಯುತ್ತದೆ.

ದಿನದ ಈ ಹೆಚ್ಚುವರಿ ಒಂದು ಗಂಟೆಯ ಅವಧಿಯಲ್ಲಿ ಮಕ್ಕಳು ವೇದಿಕೆಯ ಮೇಲೆ ನಿಂತು ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಶಾಂತಿ ಮಂತ್ರ, ದಿನದ ಸುದ್ದಿ ಸಮಾಚಾರ, ರಸ ಪ್ರಶ್ನೆ ಕೇಳುವುದು, ಕನ್ನಡ, ಹಿಂದಿ, ಇಂಗ್ಲಿಷ್‌ ಪಾಠ ಓದುವುದು, ವಚನ ಓದಿ ಅದರ ಸಾರಾಂಶ ತಿಳಿಯುತ್ತಾರೆ. ಕನ್ನಡ ವ್ಯಾಕರಣಾಂಶಗಳನ್ನು ಕೇಳುವುದು, ಗಾದೆ ಮಾತು ವಿಸ್ತರಿಸಿ ಹೇಳುವುದು ಹೀಗೆ ಪ್ರತಿ ದಿನ 30 ವಿದ್ಯಾರ್ಥಿಗಳು ವೇದಿಕೆಯ ಮೇಲೆ ಬಂದು ದೈನಂದಿನ ಚಟುವಟಿಕೆ ನಡೆಸಿಕೊಡುತ್ತಾರೆ.

ಮುಂಜಾನೆಯ ಈ ವಿಶೇಷ ದಿನಚರಿಯ ವೀಕ್ಷಣೆಗೆ ಪಾಲಕರಲ್ಲಿಯೇ ಒಬ್ಬರು ವೀಕ್ಷಕರಾಗಿ ಬರುತ್ತಾರೆ. ಜೊತೆಗೆ ನಿತ್ಯದ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಕೊಡುವ ಕೆಲಸ ಮಾಡುತ್ತಾರೆ. ಅದರ ಫಲ  ಸಮುದಾಯದ ಹೆಮ್ಮೆಯೇ ನಮ್ಮೂರ ಶಾಲೆ ಎಂಬುದು ಸ್ಥಳೀಯರ ಮನದಲ್ಲಿ ಹಾಸುಹೊಕ್ಕಾಗಿದೆ. ವಿಶೇಷವೆಂದರೆ ಮದನಟ್ಟಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ನಂದೆಪ್ಪನವರ 33ರವರೆಗೆ ಮಗ್ಗಿ ಹೇಳುವುದು ಶಾಲೆಯ ಶೈಕ್ಷಣಿಕ ಗುಣಮಟ್ಚದ ಖಾತರಿಯನ್ನು ಬಿಂಬಿಸುತ್ತದೆ. 

ಮದನಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 243 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ‍ಪುಟ್ಟ ಗ್ರಾಮದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ.

ಸಮುದಾಯದ ಸಹಭಾಗಿತ್ವ: ಶಾಲೆ ಸುಂದರವಾದ ಹಸಿರು ಪರಿಸರದಿಂದ ಕೂಡಿದೆ. ಶಾಲೆಯ ಸುತ್ತ ಮುತ್ತ ಗಿಡ ಮರಗಳನ್ನು ಹಚ್ಚಲಾಗಿದೆ. ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ, ಐದರಿಂದ ಎಂಟನೆ ತರಗತಿವರೆಗಿನ ಮಕ್ಕಳಿಗೆ ಪ್ರೊಜೆಕ್ಟರ್ ಬಳಸಿ ಪಾಠ ಹೇಳಲಾಗುತ್ತಿದೆ. ಎಲ್ಲ ತರಗತಿ ಕೊಠಡಿಗಳಿಗೂ ಅತ್ಯಾಧುನಿಕ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಶಾಲೆಗೆ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದಕ್ಕೆ ಗ್ರಾಮಸ್ಥರೇ ಧನಸಹಾಯ ಮಾಡಿದ್ದಾರೆ. ಶಾಲೆ ಒಟ್ಟು 18 ಗಣಕ ಯಂತ್ರಗಳನ್ನು,  ಗ್ರಂಥಾಲಯ ಕೂಡ ಹೊಂದಿದೆ.  ಈ ಶಾಲೆಗೆ ಇನ್ಫೊಸಿಸ್ ಸಂಸ್ಥೆ ಐದು ಕಂಪ್ಯೂಟರ್‌ಗಳನ್ನು ಕಾಣಿಕೆಯಾಗಿ ನೀಡಿದೆ. ಶಿಕ್ಷಕರಿಗಾಗಿ ಬಯೊಮೆಟ್ರಿಕ್‌ ವ್ಯವಸ್ಥೆ  ಅಳವಡಿಸಲಾಗಿದೆ.

ಪ್ರಶಸ್ತಿಗಳ ಸುರಿಮಳೆ: ಈ ಶಾಲೆ ಸತತ ಎರಡು ವರ್ಷ ಕಾಲ ಅಜೀಮ್ ಪ್ರೇಮಜಿ ಫೌಂಡೇಷನ್‌ನಿಂದ ಕಲಿಕಾ ಖಾತ್ರಿ ಪ್ರಶಸ್ತಿ ಪಡೆದಿದೆ. ಕರ್ನಾಟಕ ಶಾಲಾ ಗುಣ ಮಟ್ಟದ ಮೌಲ್ಯಾಂಕನ ಸಂಸ್ಥೆ ನಡೆಸಿಸ ಸಮೀಕ್ಷೆಯಲ್ಲಿ ಈ ಶಾಲೆ ಮೂರು ಬಾರಿ ‘ಎ’ ಶ್ರೇಣಿ, ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಪಡೆದಿದೆ. ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್‌ಎಂಎಂಎಸ್‌ ಪ್ರತಿಭಾನ್ವೇಷಣೆಯ ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !