ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮ | ಲಾಕ್‌ಡೌನ್ ಪರಿಣಾಮ, ಹಣ್ಣು ವ್ಯಾಪಾರಕ್ಕಿಳಿದ ಆಟೊ ಚಾಲಕ

ಉದ್ಯೋಗ ಇಲ್ಲದೇ ಬದುಕು ಸಾಗಿಸಲು ಪರದಾಟ
Last Updated 20 ಮೇ 2020, 20:00 IST
ಅಕ್ಷರ ಗಾತ್ರ

ಕೂಡಲಸಂಗಮ: ಆಟೊ ಓಡಿಸುತ್ತಿದ್ದ ಗ್ರಾಮದಸಂಗಮೇಶ ನಾಗನೂರ ಲಾಕ್‌ಡೌನ್ ಪರಿಣಾಮ ಉದ್ಯೋಗ ಇಲ್ಲದೇ ಬದುಕಿನ ಬಂಡಿ ನಡೆಸಲು ಹಣ್ಣುಗಳ ಮಾರಾಟಕ್ಕೆ ಮುಂದಾಗಿದ್ದಾರೆ.

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ನಾಗರಾಳದ ಸಂಗಮೇಶ ನಾಗನೂರು ಕುಟುಂಬದೊಂದಿಗೆ ಎರಡು ವರ್ಷಗಳ ಹಿಂದೆ ಕೂಡಲಸಂಗಮಕ್ಕೆ ಬಂದು, ಇಲ್ಲಿನ ಮಹೇಶ್ವರ ನಗರದ ಖಾಲಿ ಜಾಗದಲ್ಲಿ ತಗಡಿನ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದಾರೆ. ಸಾಲ ಮಾಡಿ ಆಟೊ ತೆಗೆದುಕೊಂಡು ಕೂಡಲಸಂಗಮದಿಂದ ಓಡಿಸುತ್ತಾ ಬದುಕು ಕಟ್ಟಿಕೊಂಡಿದ್ದರು.

ಆಟೋ ಓಡಿಸುತ್ತಿದ್ದಾಗ ನಿತ್ಯ ಖರ್ಚು ಕಳೆದು ₹300 ರಿಂದ ₹400 ಉಳಿಯುತ್ತಿತ್ತು. ಅರ್ಧ ಹಣ ಆಟೊ ಸಾಲಕ್ಕೆ, ಉಳಿದ ಹಣ ಜೀವನ ಸಾಗಿಸಲು ಬಳಸುತಿದ್ದೆ. ಇದ್ದ ಸೀಮಿತ ಆದಾಯದಲ್ಲಿಯೇ ಹೆಂಡತಿ, ಮಗ ಹಾಗೂ ತಂದೆಯೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದೆ.

ಆದರೆ ಕೋವಿಡ್–19 ಲಾಕ್‌ಡೌನ್ ಪರಿಣಾಮ ಆಟೊ ಸಂಚಾರ ಸ್ಥಗಿತಗೊಂಡಿದೆ. ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತು ಬದುಕು ನಡೆಸುವುದು ಕಷ್ಟವಾಗಿದೆ. ನಮ್ಮ ಬಿಪಿಎಲ್ ಪಡಿತರ ಚೀಟಿಯಲ್ಲಿ ನಮ್ಮೂರು ನಾಗರಾಳದ ವಿಳಾಸ ಇದೆ. ಹೀಗಾಗಿ ಕೂಡಲಸಂಗಮದಲ್ಲಿ ಪಡಿತರ ನೀಡಲಿಲ್ಲ. ಪಕ್ಕದ ಮನೆಯವರು ಅಕ್ಕಿ, ಬೇಳೆ, ಗೋಧಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸ್ವಲ್ಪ ಕೊಟ್ಟರು. ಒಂದು ವಾರ ಬದುಕು ನಡೆಯಿತು. ಮುಂದೆ ಹೇಗೆ ಎಂಬ ಆಲೋಚನೆಯಲ್ಲಿದ್ದಾಗ, ಕೂಡಲಸಂಗಮದ ಮಹಾಂತೇಶ ಕುರಿ, ಈರಪ್ಪ ಹಡಪದ ಸ್ವಲ್ಪ ಹಣದ ಸಹಾಯ ಮಾಡಿದರು. ಆ ಹಣದಿಂದ ಹುನಗುಂದದಿಂದ ಹಣ್ಣುಗಳನ್ನು ತಂದು ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಾಟ ಆರಂಭಿಸಿದೆ ಎಂದು ಸಂಗಮೇಶ ನಾಗರಾಳ ಹೇಳಿದರು.

ಹಣ್ಣು ಮಾರಾಟದಿಂದ ಖರ್ಚು ಕಳೆದು ₹300 ರಿಂದ 400 ಉಳಿಯುತ್ತಿದೆ. ಬಿಪಿಎಲ್ ಕಾರ್ಡ್‌ಗೆ ಕೂಡಲಸಂಗಮದಲ್ಲಿ ಆಹಾರ ಸಾಮಗ್ರಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಸಂಗಮೇಶ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT