ಬಾಗಲಕೋಟೆ: ‘ಮುಂದಿನ ಪೀಳಿಗೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಿಳಿಸಿಕೊಡಬೇಕಾಗಿದ್ದು, ಸೆ.15 ರಂದು ಆಚರಿಸಲಾಗುತ್ತಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಯಶಸ್ವಿಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದೇಶದಲ್ಲಿ ಇನ್ನೂ ಅನಕ್ಷರಸ್ಥರು ಇರುವುದರಿಂದ ಪ್ರಜಾಪ್ರಭುತ್ವದ ಬಗ್ಗೆ ತಿಳಿಸಬೇಕಿದೆ. ಭಾರತದ ಮುಂದಿನ ಪೀಳಿಗೆಯು ಪ್ರಜಾಪ್ರಭುತ್ವದ ಮೌಲ್ಯಾನುಸಾರ ಶಕ್ತವಾಗಬೇಕು’ ಎಂದರು.
‘ರಾಜ್ಯದಾದ್ಯಂತ ಮಾನವ ಸರಪಳಿ ನಿರ್ಮಿಸಿ ಏಕಕಾಲಕ್ಕೆ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಭಾಗವಹಿಸಬೇಕು’ ಎಂದು ಹೇಳಿದರು.
ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಉಪಾದ್ಯಕ್ಷೆ ಶೋಭಾ ರಾವ್, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಇದ್ದರು.
‘1.50 ಲಕ್ಷ ಜನ ಭಾಗವಹಿಸುವ ನಿರೀಕ್ಷೆ’
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ ‘ಆಲಮಟ್ಟಿಯಿಂದ ಸೀತಿಮನಿ ಸಂಗಮ ಕ್ರಾಸ್ ಬಾಗಲಕೋಟೆ ಲೋಕಾಪುರ ಮೂಲಕ ಬೆಳಗಾವಿ ಜಿಲ್ಲೆಯ ಸಾಲಹಳ್ಳಿವರೆಗೆ 105 ಕಿ.ಮೀ ವರೆಗೆ ಮಾನವ ಸರಳಿ ರಚಿಸಲು ಉದ್ದೇಶಿಸಲಾಗಿದೆ. 1.50 ಲಕ್ಷ ಜನ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9.30 ರಿಂದ 10.30ರ ವರೆಗೆ ಮಾನವ ಸರಪಳಿ ರಚಿಸಲಾಗುವುದು’ ಎಂದರು. ‘ಮಾನವ ಸರಪಳಿ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು 100 ಮೀಟರ್‌ಗೆ ಒಬ್ಬ ಮೇಲ್ವಿಚಾರಕ 1 ಕಿ.ಮೀಗೆ ಒಬ್ಬ ಜಿಲ್ಲಾ ನೋಡಲ್ ಅಧಿಕಾರಿ 5 ಕಿ.ಮೀಗೆ ಒಬ್ಬ ಕಮಾಂಡರ್ ನೇಮಿಸಲಾಗಿದೆ’ ಎಂದು ತಿಳಿಸಿದರು.