ಸೋಮವಾರ, ಜೂನ್ 21, 2021
20 °C

ಮಲಪ್ರಭಾ ನದಿ ಪ್ರವಾಹ: ಬಾಗಲಕೋಟೆ-ಗದಗ ಜಿಲ್ಲೆ ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದ ನೀರು ಸೇತುವೆ ಮೇಲೆ ಹರಿಯುತ್ತಿರುವ ಕಾರಣ ಬಾದಾಮಿ-ರೋಣ-ಗದಗ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ಮಂಗಳವಾರ ರಾತ್ರಿಯಿಂದ ಸ್ಥಗಿತಗೊಂಡಿದೆ.

ಮಲಪ್ರಭೆಯ ಮುನಿಸಿನ ಪರಿಣಾಮ ಬಾಗಲಕೋಟೆ-ಗದಗ ಜಿಲ್ಲೆಗಳು ನಡುವಿನ ಎರಡು ಪ್ರಮುಖ ಸಂಪರ್ಕ ಮಾರ್ಗಗಳು ಬಂದ್ ಆದಂತಾಗಿದೆ.

ಮಂಗಳವಾರ ಬೆಳಿಗ್ಗೆ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ- ಗದಗ ಜಿಲ್ಲೆ ಕೊಣ್ಣೂರು ಬಳಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಲಪ್ರಭಾ ನದಿ ಸೇತುವೆ ಸಮೀಪ ಹೆದ್ದಾರಿ ಪ್ರವಾಹದ ನೀರಿನಿಂದ ಆವೃತವಾಗಿತ್ತು. ಹೀಗಾಗಿ ಅಲ್ಲಿ ಸಂಚಾರ ಸ್ಥಗಿತಗೊಂಡು ವಾಹನಗಳು ಬಾದಾಮಿ-ರೋಣ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಈಗ ಆ ಮಾರ್ಗದಲ್ಲೂ ಸಂಪರ್ಕ ಕಡಿತಗೊಂಡಿದೆ. ಈಗ ಭಾರಿ ವಾಹನಗಳು ಇಳಕಲ್-ಕುಷ್ಟಗಿ-ಕೊಪ್ಪಳ-ಗದಗ ಮಾರ್ಗವಾಗಿ ಸುತ್ತುಬಳಸಿ ಹುಬ್ಬಳ್ಳಿ ತಲುಪಬೇಕಿದೆ.

ಮಲಪ್ರಭಾ ನದಿಗೆ ಬುಧವಾರ ನವಿಲುತೀರ್ಥ ಜಲಾಶಯದಿಂದ ಬಿಡಲಾದ ನೀರಿನ ಪ್ರಮಾಣ ಅರ್ಧದಷ್ಟು ಇಳಿಕೆಯಾಗಿದೆ. ಮಂಗಳವಾರ ಮುಂಜಾನೆ 21,964  ಕ್ಯೂಸೆಕ್ ನದಿಗೆ ಬಿಟ್ಟಿದ್ದರೆ, ಮರುದಿನ ಆ ಪ್ರಮಾಣ 17,164 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿದೆ. ಹೀಗಾಗಿ ಮುಂದಿನ 24 ಗಂಟೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಗೋವನಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳು ಸಾಲುಗಟ್ಟಿ ನಿಂತಿವೆ.

ಬೆಳೆಗಳು ಜಲಾವೃತ: ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ತಳಕವಾಡ, ಕರ್ಲಕೊಪ್ಪ, ಕಿತ್ತಲಿ, ಹೆಬ್ಬಳ್ಳಿ, ಗೋವನಕೊಪ್ಪ, ಮುಮ್ಮರಡ್ಡಿಕೊಪ್ಪ, ಚೊಳಚಗುಡ್ಡ ಗ್ರಾಮಗಳಲ್ಲಿ ಊರೊಳಗೆ ಮಲಪ್ರಭಾ ನೀರು ನುಗ್ಗಿದೆ. ಸಾವಿರಾರು ಹೆಕ್ಟೇರ್ ಬೆಳೆ ಜಲಾವೃತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.