ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ

Last Updated 13 ಮಾರ್ಚ್ 2020, 12:25 IST
ಅಕ್ಷರ ಗಾತ್ರ

ಬಾಗಲಕೋಟೆ: ಹೋಳಿ ಹುಣ್ಣಿಮೆ ಬೆಳಕು ಚೆಲ್ಲುತ್ತಿದ್ದಂತೆಯೇ ಆಂಧ್ರಪ್ರದೇಶದ ಶ್ರೈಲದ ಮಲ್ಲಿಕಾರ್ಜುನನ ಯುಗಾದಿ ರಥೋತ್ಸವಕ್ಕೆ ಭಕ್ತರ ದಂಡು ಪಾದಯಾತ್ರೆ ಆರಂಭಿಸುತ್ತದೆ. ಪಕ್ಕದ ಬೆಳಗಾವಿ ಜಿಲ್ಲೆಯ ಭಕ್ತರು ಕೃಷ್ಣಾ– ಘಟಪ್ರಭಾ ನದಿಗಳ ತಟದಲ್ಲಿ ಸಾಗಿ ಬಂದು ರಬಕವಿ–ಬನಹಟ್ಟಿ, ಜಮಖಂಡಿ, ಮುಧೋಳದ ಮೂಲಕ ಸಾಗಿ ಬರುತ್ತಾರೆ. ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯೇ ಶ್ರೀಶೈಲ ಯಾತ್ರೆಗೆ ಸಾಗುವ ಪ್ರಮುಖ ರಹದಾರಿ.

ಹರಕೆ ಹೊತ್ತವರು ತಂಡ ತಂಡವಾಗಿ ದಿನಕ್ಕೆ ಕನಿಷ್ಠ 40ರಿಂದ 60 ಕಿ.ಮೀವರೆಗೆ ನಡೆಯುತ್ತಾ ಸಾಗಿ ಬರುತ್ತಾರೆ. ಹಗಲು–ರಾತ್ರಿ ಹೀಗೆ ಬರುವವರ ದೇಖರೇಕಿ ನೋಡಿಕೊಳ್ಳಲು ದಾರಿಯುದ್ಧಕ್ಕೂ ಅರವಟಿಕೆ, ಲಂಗರ್ ಮಾದರಿಯ ಕಾಳಜಿ ಕೇಂದ್ರಗಳು ಕಾಣಸಿಗುತ್ತವೆ. ವಿಶೇಷವೆಂದರೆಪಾದಯಾತ್ರಿಗಳ ಬಗ್ಗೆ ಕಾಳಜಿ ವಹಿಸುವುದು ಶ್ರೀಶೈಲ ಮಲ್ಲಿಕಾರ್ಜುನನಿಗೆ ತೀರಿಸುವ ಹರಕೆಯೇ ಆಗಿದೆ.

ರಾತ್ರಿ ಮಲಗಲು ಬೆಚ್ಚನೆಯ ಆಶ್ರಯ, ಮುಂಜಾನೆ ಚಹಾದಿಂದ ಮೊದಲುಗೊಂಡು, ನಾಷ್ಟಾ (ತಿಂಡಿ), ಮಧ್ಯಾಹ್ನದ ಊಟ, ರಾತ್ರಿ ಊಟದ ಜೊತೆಗೆ ಹಣ್ಣು–ಹಂ‍ಪಲು, ನಡಿಗೆಯ ದಣಿವಾರಿಸಿಕೊಳ್ಳಲು ಮಜ್ಜಿಗೆ, ಜ್ಯೂಸ್, ಎಳನೀರು ಉಚಿತವಾಗಿ ಒದಗಿಸುವುದು ಕಾಣಸಿಗುತ್ತದೆ. ನಡಿಗೆಯಿಂದ ಗಾಯವಾದ ಯಾತ್ರಿಗಳ ಪಾದಗಳಿಗೆ ಮಸಾಜ್ ಮಾಡಿ, ತಿಕ್ಕಿ ನೆರವಾಗುವುದು ಮಲ್ಲಯ್ಯನಿಗೆ ಮಾಡಿಕೊಂಡ ಹರಕೆಯೇ ಆಗಿರುವುದು ವಿಶೇಷ.

ಬರೀ ಕಾಲ್ನಡಿಗೆಯವರು ಮಾತ್ರವಲ್ಲ, ಮರಗಾಲು ಕಟ್ಟಿಕೊಂಡು, 50 ಕೆ.ಜಿಯಷ್ಟು ಭಾರದ ಜೋಳ, ಅಕ್ಕಿಯ ಚೀಲಗಳನ್ನು ಹೆಗಲ ಮೇಲೆ ಹೊತ್ತು ಸಾಗುವುದು, ನಂದಿಕೋಲು, ಮಲ್ಲಯ್ಯನ ಕಂಬಿಗಳನ್ನು ಹಿಡಿದು ಸಾಗುವುದು ಹರಕೆಯ ಪರಿ. ಮಲ್ಲಯ್ಯನ (ಶ್ರೀಶೈಲ ಮಲ್ಲಿಕಾರ್ಜುನ) ಸ್ಮರಣೆ ಮಾಡುತ್ತಾ ಸಾಗುವಾಗ ದಾರಿ ಸವೆಯುವುದು ಗೊತ್ತಾಗುವುದಿಲ್ಲ. ಆತನೇ ನಮ್ಮನ್ನು ಕರೆಸಿಕೊಳ್ಳುತ್ತಾನೆ ಎಂಬುದು ಯಾತ್ರಿಗಳ ಅಭಿಮತ. ಕಳೆದ 20–30 ವರ್ಷಗಳಿಂದಲೂ ಪಾದಯಾತ್ರೆಯಲ್ಲಿಯೇ ಶ್ರೀಶೈಲ ಯಾತ್ರೆ ಕೈಗೊಳ್ಳುತ್ತಿರುವ ಒಬ್ಬಿಬ್ಬರು ಭಕ್ತರು ಕೃಷ್ಣಾ ತೀರದ ಪ್ರತೀ ಗ್ರಾಮದಲ್ಲೂ ಕಾಣಸಿಗುತ್ತಾರೆ.

ಯುವಕರು, ದೊಡ್ಡವರು, ವೃದ್ಧರು, ಮಹಿಳೆಯರು ಹೀಗೆ ಸಾವಿರಾರು ಸಂಖ್ಯೆಯಲ್ಲಿ ಯಾತ್ರಿಗಳು ಪಾದಯಾತ್ರೆಯಲ್ಲಿ ಕಾಣಸಿಗುತ್ತಾರೆ. ಶ್ರೀಶೈಲ, ಮಂತ್ರಾಲಯ ಪಾದಯಾತ್ರೆ ಈ ಭಾಗದಲ್ಲಿ ವಾರ್ಷಿಕ ಧಾರ್ಮಿಕ ಕಾರ್ಯವೂ ಹೌದು. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ 600 ಕಿ.ಮೀಗೂ ಹೆಚ್ಚು ದೂರ ಸಾಗುವ ಈ ಯಾತ್ರೆಯ ವೇಳೆ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ತಕ್ಷಣ ವೈದ್ಯಕೀಯ ನೆರವು ದೊರಕಿಸಿಕೊಡಲಾಗುತ್ತದೆ. ಅದಕ್ಕಾಗಿ ಪಾದಯಾತ್ರೆ ಹೊರಟವರ ತಂಡದ ಬೆಂಗಾವಲಾಗಿ ಊರಿನಿಂದ ವಾಹನವೊಂದು ಸಾಗುತ್ತದೆ. ಜೊತೆಗೆ ದಾರಿ ಮಧ್ಯೆ ಹರಕೆ ಹೊತ್ತ ಭಕ್ತರು ವೈದ್ಯರನ್ನು ನೇಮಕ ಮಾಡಿ ಅವರಿಂದ ಚಿಕಿತ್ಸೆ ಕೊಡಿಸುವುದು ಕಾಣಸಿಗುತ್ತದೆ. ಅನಾರೋಗ್ಯಕ್ಕೀಡಾಗಿ ಪಾದಯಾತ್ರೆ ಮುಂದುವರೆಸಲು ಸಾಧ್ಯವಾಗದವರು ಊರಿನಿಂದ ಸಾಗಿಬಂದ ವಾಹನದಲ್ಲಿ ಕುಳಿತು ಸಾಗಬಹುದು.

ಕರ್ನಾಟಕದ ಗಡಿ ದಾಟಿ ಆಂಧ್ರಪ್ರದೇಶದಲ್ಲಿ ಒಂದು ವಾರದ ದಿನ ಕಳೆದ ನಂತರ, ಅಲ್ಲಿಯ ಸಿದ್ದಪುರಂ ಬಳಿ ಕಡಿಬಾಗಿಲಿನ ವೀರಭಧ್ರೇಶ್ವರ ದರ್ಶನ ಪಡೆದು, ಗಿರಿ ಬೆಟ್ಟ ಏರಬೇಕಾಗುತ್ತದೆ. ಅಂಬಲಿಹಳ್ಳ, ಗಂಗನಹಳ್ಳಿ ನಂತರ ಡೊಂಕ ಮಲ್ಲಯ್ಯನ ಬಾವಿ ನೀರು ಕುಡಿದು ಭೀಮನಕೊಳ್ಳವನ್ನು ದಾಟಿ, ಕೈಲಾಸ ಬಾಗಿಲ ಸಮೀಪಕ್ಕೆ ಹೋದಾಗ ಸಿಗುವುದೇ ಶ್ರೀಶೈಲ ಮಲ್ಲಯ್ಯನ ದೇವಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT