ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಸ್ತಪ್ರತಿಶಾಸ್ತ್ರ ಭಾರತದ ಅಸ್ಮಿತೆ: ವೀರೇಶ ಬಡಿಗೇರ

ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥ ಸಂಪಾದನೆ ಕುರಿತು ಕಾರ್ಯಾಗಾರ
Published 24 ಆಗಸ್ಟ್ 2024, 13:45 IST
Last Updated 24 ಆಗಸ್ಟ್ 2024, 13:45 IST
ಅಕ್ಷರ ಗಾತ್ರ

ಬಾಗಲಕೋಟೆ: ’ಮಾನವನಿಗೆ ಮಾನಸಿಕ ಸ್ಥೈರ್ಯ ತುಂಬುವಶಕ್ತಿ ಭಾರತೀಯ ಶಾಸ್ತ್ರಗಳಲ್ಲಿದ್ದು, ಹಸ್ತಪ್ರತಿಶಾಸ್ತ್ರ ಭಾರತದ ಅಸ್ಮಿತೆ ಪ್ರತೀಕವಾಗಿದೆ‘ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ವೀರೇಶ ಬಡಿಗೇರ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಶನಿವಾರ ನಡೆದ ’ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥ ಸಂಪಾದನೆ‘ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.

’ತಾಳೆಗರಿ ಹಸ್ತಪ್ರತಿಗಳು ರಚಿಸಲ್ಪಡಬೇಕಾದರೆ 13 ತಳ ಸಮುದಾಯಗಳ ಶ್ರಮದ ಅವಶ್ಯಕತೆ ಇತ್ತು, ಅಂದು ಬರವಣಿಗೆ ತಳ ಸಮುದಾಯದಲ್ಲಿತ್ತು ಎಂಬುದನ್ನು ಗಮನಿಸಬಹುದಾಗಿದೆ. ದೇಶದಲ್ಲಿ ಮುದ್ರಣೋದ್ಯಮ ಬಂದದ್ದು 1160ರಲ್ಲಿ. ಮುದ್ರಣ ಪೂರ್ವದಲ್ಲಿ ನಮ್ಮಲ್ಲಿ ಬರವಣಿಗೆ, ಸಾಹಿತ್ಯ, ಸಮುದಾಯ ಪರಂಪರೆಗಳು ಹೇಗಿದ್ದವು ಎಂಬುದನ್ನು ಆಯಾ ಕಾಲದ ಹಸ್ತಪ್ರತಿಗಳು ಒತ್ತಿ ಹೇಳುತ್ತವೆ‘ ಎಂದರು.

’ಜೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಶಾಸನ ಶಾಸ್ತ್ರ ಸೇರಿದಂತೆ ಎಲ್ಲ ಶಾಸ್ತ್ರಗಳು ಮನುಷ್ಯನನ್ನು ಶೋಷಣೆ ಮಾಡುವ ಶಾಸ್ತ್ರಗಳಾಗಿದ್ದಿಲ್ಲ, ನಮ್ಮೆಲ್ಲ ಶಾಸ್ತ್ರಗಳು ಮನುಷ್ಯನಿಗೆ ಮಾನಸಿಕ ಸ್ಥೈರ್ಯ ತುಂಬುವ ಶಾಸ್ತ್ರಗಳಾಗಿದ್ದವು ಹೊರತು ಮನುಷ್ಯನನ್ನು ಸುಲಿದು ತಿನ್ನುವ ಶಾಸ್ತ್ರಗಳಾಗಿರಲಿಲ್ಲ. ಹಸ್ತಪ್ರತಿ ಶಾಸ್ತ್ರದಿಂದ ದೇಶದ ಪರಂಪರೆ ಮತ್ತು ಸಂಸ್ಕೃತಿ ತಿಳಿಯಬಹುದಾಗಿದೆ‘ ಎಂದು ಹೇಳಿದರು.

’ಬಾಗಲಕೋಟೆಯಲ್ಲಿರುವ ಟೀಕೀನಮಠ ವಚನಗಳಿಗೆ ಟೀಕುಗಳ ಮೂಲಕ ವಾಖ್ಯಾನ ಬರೆಯುವ ಮಠವಾಗಿತ್ತು. ಜಮಖಂಡಿಯಲ್ಲಿರುವ ಓಲೆಮಠ, ಓಲೇಗರಿ ಹಾಗೂ ತಾಳೆಗರಿಗಳನ್ನು ಸಂಗ್ರಹಿಸುವ ಮಠವಾಗಿತ್ತು. ನಾಡಿನ ಮಠಗಳು ಜನರಿಗೆ ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟಿವೆ. ಹಿಂದಿನ ಪೂರ್ವಜರಿಗೆ ಆರೋಗ್ಯ, ರಕ್ಷಣೆ ಜೀವನ ನಡೆಸುವುದರ ಬಗ್ಗೆ ಆಳವಾದ ಜ್ಞಾನವಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎನ್.ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹಸ್ತಪ್ರತ್ರಿಗಳಲ್ಲಿ ಜ್ಞಾನಸಂಸ್ಕೃತಿ ಅರಿತು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ವಿಭಾಗದ ಉಪನ್ಯಾಸ ಸಂಗಮೇಶ ಬ್ಯಾಳಿ, ಉಪನ್ಯಾಸಕ ಚಂದ್ರಶೇಖರ ಕಾಳನ್ನವರ, ಐಕ್ಯೂಎಸಿ ಸಂಚಾಲಕ ಬಿ.ಎಂ.ಬಡಿಗೇರ, ಸಾಂಸ್ಕೃತಿಕ ಸಂಚಾಲಕ ಸುನೀಲ ನಡಕಟ್ಟಿ, ಬಿ.ಪಿ.ನಾಯಕ್, ನಂದಾ ಇಟಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT