ಮಂಗಳವಾರ, ನವೆಂಬರ್ 12, 2019
27 °C
ಮಾದರಿ ನಗರಕ್ಕೆ ಕಪ್ಪು ಚುಕ್ಕೆ, ಸಾರ್ವಜನಿಕರ ಆಕ್ರೋಶ; ಮೂಗು ಮುಚ್ಚಿಕೊಂಡು ಸಂಚರಿಸುವ ಗ್ರಾಹಕರು

ನವನಗರ ತರಕಾರಿ ಮಾರುಕಟ್ಟೆ; ಸಮಸ್ಯೆಗಳ ಕಂತೆ

Published:
Updated:
Prajavani

ಬಾಗಲಕೋಟೆ: ಹೆಜ್ಜೆ ಹೆಜ್ಜೆಗೂ ಎದುರಾಗುವ ತಳ್ಳುವ ಗಾಡಿ, ಹಣ್ಣು–ತರಕಾರಿ ಬುಟ್ಟಿ, ಎಡಬಲಕ್ಕೆ ಸ್ವಲ್ಪ ವಾಲಿದರೂ ಸೀದಾ ಕೆಸರಿನ ಗುಂಡಿಗೆ ಬೀಳುವ ಆತಂಕ. ಜೇಬಿನೊಳಗಿನ ಪರ್ಸ್, ಮೊಬೈಲ್‌ಫೋನ್, ಕೊರಳಲ್ಲಿನ ಚಿನ್ನದ ಚೈನ್ ಕಳ್ಳರಿಂದ ಕಾಪಾಡಿಕೊಳ್ಳುವ ಸವಾಲು.. ಬೇಕಿದ್ದನ್ನು ಕೊಂಡು ಹೊರಗೆ ಬರುವ ಹೊತ್ತಿಗೆ ಬೆವರು–ಆಯಾಸದ ನಿಟ್ಟುಸಿರು.. ಕುಡಿಯಲು ಹನಿ ನೀರು ಸಿಗದ ಸ್ಥಿತಿ..

ಇದು ಇಲ್ಲಿನ ನವನಗರದ ಸೆಕ್ಟರ್ ನಂ. 4ರ ಸಂಡೆ ಬಜಾರ್‌(ತರಕಾರಿ ಮಾರುಕಟ್ಟೆ) ಚಿತ್ರಣ. ವ್ಯಾಪಾರಸ್ಥರು, ಹಳ್ಳಿಯಿಂದ ಸಂತೆಗೆ ತರಕಾರಿ ಮಾರಲು ಬರುವ ರೈತರ ಪಾಡು ಇದಕ್ಕಿಂತ ಭಿನ್ನವೇನೂ ಇಲ್ಲ.

ಸೆಕ್ಟರ್ ನಂ 31ರಲ್ಲಿ ಗುರುವಾರ ಹಾಗೂ 4ರಲ್ಲಿ ಭಾನುವಾರ ಸಂತೆ ನಡೆಯುತ್ತವೆ. ಆದರೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿಟಿಡಿಎ) ದಿವ್ಯ ನಿರ್ಲಕ್ಷ್ಯದಿಂದ ಇವೆರಡೂ ಗ್ರಾಹಕರು, ವ್ಯಾಪಾರಸ್ಥರ ಸ್ನೇಹಿಯಾಗಿ ಉಳಿದಿಲ್ಲ.

ನವನಗರದ ಯುನಿಟ್ 1 ನಿರ್ಮಾಣದ ವೇಳೆ ಈ ತರಕಾರಿ ಮಾರುಕಟ್ಟೆಗಳನನ್ನು (ಸಂತೆ ಮೈದಾನ) ಕಟ್ಟಲಾಗಿದೆ. ಆದರೆ, ಅವೀಗ ಹಾಳುಕೊಂಪೆಯಾಗಿ ಬದಲಾಗಿವೆ.

ಸೌಲಭ್ಯ ಕೊರತೆ: ಈ ಎರಡೂ ಮಾರುಕಟ್ಟೆಗಳ ನಿರ್ವಹಣೆ ಜವಾಬ್ದಾರಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಹೊತ್ತಿದೆ. ಆದರೆ, ಹಗಲು ಹೊತ್ತು ಬಿಡಾಡಿದನ, ಹಂದಿಗಳಿಗೆ ಆವಾಸ ಸ್ಥಾನವಾಗುವ ಈ ಮಾರುಕಟ್ಟೆ ಪ್ರಾಂಗಣಗಳು, ರಾತ್ರಿಯಾಗುತ್ತಿದ್ದಂತೆಯೇ ಕುಡುಕರ ಸ್ವರ್ಗವಾಗಿ ಬದಲಾಗುತ್ತಿವೆ. ಬೀದಿದೀಪಗಳು ಇಲ್ಲದೇ ಕತ್ತಲು ಆವರಿಸುವುದರಿಂದ ಕುಡುಕರ ಹರಟೆಗೆ ಹಾದಿ ಮಾಡಿಕೊ ಡುತ್ತಿವೆ. ಭಾನುವಾರ ಹೊರ ತುಪಡಿಸಿ ಉಳಿದ ದಿನ ಮಧ್ಯಾಹ್ನದ ಸಮಯ ಈ ಮಾರು ಕಟ್ಟೆ ಪ್ರದೇಶ ನಿರ್ಜ ನವಾಗಿರುತ್ತದೆ. ಆಗಲೂ ಬಾಟಲಿ ಹರಡಿಕೊಂಡು ಗುಂಪಾಗಿ ಕುಳಿತವರು ಕಾಣಸಿಗುತ್ತಾರೆ. ಅಕ್ಕಪಕ್ಕದ ಖಾಲಿ ಮಳಿಗೆಗಳಲ್ಲಿ ಕುಳಿತು ಕುಡಿದು ಖಾಲಿ ಬಾಟಲಿ ಹಾಗೂ ಪ್ಲಾಸ್ಟಿಕ್‌ ಕಪ್‌ಗಳನ್ನು ಚರಂಡಿಯಲ್ಲಿ ಬಿಸಾಡುತ್ತಿದ್ದಾರೆ.

ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೆಕ್ಟರ್ ನಂ 4ರ ಭಾನುವಾರ ಮಾರುಕಟ್ಟೆಯ ಪ್ರದೇಶದಲ್ಲಿ ಸ್ವಲ್ಪ ಮಳೆಯಾದರೆ ಸಾಕು ನೀರು ಸಂಗ್ರಹಗೊಳ್ಳುತ್ತದೆ.

ಜತೆಗೆ ಇದರ ಪಕ್ಕದಲ್ಲಿರುವ ಖಾಲಿ ನಿವೇಶಗಳಲ್ಲೂ ನೀರು ಶೇಖರಣೆಗೊಳ್ಳುತ್ತಿದೆ. ಹೀಗಾಗಿ ವ್ಯಾಪಾರಸ್ಥರು ಕುಳಿತು ತರಕಾರಿ ಮಾರಲು ಜಾಗವೇ ಇಲ್ಲವಾಗಿದೆ. ಇದು ದೊಡ್ಡ ಸಂತೆಯಾಗುವುದರಿಂದ ವ್ಯಾಪಾರಿಗಳು, ಗ್ರಾಹಕರು ಇಬ್ಬರೂ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಬಿಟಿಡಿಎಗೆ ಹಿಡಿಶಾಪ ಹಾಕುತ್ತಾ ತೆರಳುತ್ತಾರೆ. ಪಾರ್ಕಿಂಗ್ ಸ್ಥಳದಲ್ಲೂ ನೀರು ನಿಂತು ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲ. ಹೀಗಾಗಿ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಜತೆಗೆ ವ್ಯಾಪಾರಿಗಳು ಅಲ್ಲಿಯೇ ಕುಳಿತು ತರಕಾರಿ ಮಾರುತ್ತಾರೆ. ಇದರಿಂದ ಸರಾಗ ಓಡಾಟಕ್ಕೆ ತೊಂದರೆ ಆಗುತ್ತಿದೆ. 

ಬೆಳಿಗ್ಗೆ ಸವಾಲು ವೇಳೆಗೆ ಜಿಲ್ಲೆಯ ಎಲ್ಲ ಭಾಗದಿಂದಲೂ ರೈತರು ತರಕಾರಿ, ಹಣ್ಣು ಮಾರಾಟಕ್ಕೆ ತರುತ್ತಾರೆ. ಅವರಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯವೂ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಒಂದು ಕುಡಿಯುವ ನೀರಿನ ಟ್ಯಾಂಕ್‌ ಇದ್ದು, ಇದನ್ನು ಸ್ವಚ್ಛಗೊಳಿಸದೇ ಹಲವು ತಿಂಗಳು ಕಳೆದಿದೆ. ಅದಕ್ಕೆ ನೀರು ಪೂರೈಸುವ ಪೈಪ್‌ಲೈನ್‌ ಕಿತ್ತು ಹೋಗಿದೆ. 

ಸಂಚಾರ ಸಮಸ್ಯೆ: ಮಾರುಕಟ್ಟೆಗೆ ಆಗಮಿಸುವ ಜನರು ರಸ್ತೆಯ ಪಕ್ಕದಲ್ಲಿ ದ್ವಿಚಕ್ರ ಹಾಗೂ ಕಾರಗಳನ್ನು ನಿಲ್ಲಿಸುತ್ತಾರೆ ಜತೆಗೆ ಟಂಟಂ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬೇಕಾ ಬಿಟ್ಟಿಯಾಗಿ ವಾಹನ ನಿಲ್ಲಿಸುವುದರಿಂದ ತುಂಬಾ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಕಾರಣ ಪೊಲೀಸ್ ಇಲಾಖೆ ಬೇರೆಡೆಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸುತ್ತಾರೆ.

₹ 5 ಕೋಟಿ ವೆಚ್ಚದ ಯೋಜನೆ ಸಿದ್ಧ..

ನವನಗರದ ಸಂತೆ ಮೈದಾನಗಳ ಸಮಸ್ಯೆ ಶಾಶ್ವತ ಪರಿಹಾರಕ್ಕೆ ರೂಪುರೇಷೆ ಸಿದ್ಧಗೊಂಡಿದೆ. ನವನಗರ ಯುನಿಟ್ 1ರ ನಿರ್ವಹಣೆ ಜವಾಬ್ದಾರಿ ನಗರಸಭೆ ವ್ಯಾಪ್ತಿಯಿಂದ ಬಿಟಿಡಿಎಗೆ ವರ್ಗಾಯಿಸಿ ಅಭಿವೃದ್ಧಿ ಕಾರ್ಯಗಳ ಕೈಗೊಳ್ಳಲು ಸರ್ಕಾರ ₹133 ಕೋಟಿ ಬಿಡುಗಡೆ ಮಾಡಿದೆ. ಹಣಕಾಸು ಇಲಾಖೆಯ ಅನುಮತಿ ಬೇಕಿದೆ. ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಬಿಟಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಎಚ್.ಇದ್ದಲಗಿ ಹೇಳುತ್ತಾರೆ.

‘ಸರ್ಕಾರದ ಮಟ್ಟದಲ್ಲಿ ಮಾತನಾಡಿ ಶಾಸಕರು ಅನುಮತಿ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿಂದ ಅನುಮೋದನೆ ದೊರೆತ ನಂತರ ಮಾರುಕಟ್ಟೆಯ ಎತ್ತರ ಹೆಚ್ಚಿಸಿ, ಕಾಂಕ್ರಿಟ್ ರಸ್ತೆ ಜೊತೆಗೆ ಸುತ್ತಲೂ ಫುಟ್‌ಪಾತ್ ನಿರ್ಮಿಸಲು ₹ 5 ಕೋಟಿಯ ಯೋಜನೆ ಸಿದ್ಧಪಡಿಸಲಾಗಿದೆ‘ ಎಂದು ತಿಳಿಸಿದರು.

‘ನಗರಸಭೆ ಹೊಣೆಗೇಡಿತನ’

ಮಾರುಕಟ್ಟೆಯ ಅವ್ಯವಸ್ಥೆ ಸರಿಪಡಿಸಲು ಹೇಳಿದರೆ ನಮ್ಮಲ್ಲಿ ಹಣದ ಕೊರತೆ ಇದೆ. ನಗರಸಭೆಯಿಂದ ₹ 130 ಕೋಟಿ ಬಂದ ನಂತರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ಸಿ.ಎಸ್.ಹಿರೇಮಠ ಹೇಳುತ್ತಾರೆ.

ಕಾರ್ಪಸ್ ಫಂಡ್‌ ಸಾಕಾಗೊಲ್ಲ..

‘ಬಿಟಿಡಿಎಯಲ್ಲಿ ₹ 100 ಕೋಟಿ ಕಾರ್ಪಸ್ ಫಂಡ್‌ ಇದೆ. ಇದಕ್ಕೆ ₹ 6 ಕೋಟಿ ಬಡ್ಡಿ ಬರುತ್ತಿದೆ. ಅದನ್ನು ನವನಗರ ಯುನಿಟ್‌ 1 ಹಾಗೂ 2ರ ನಿರ್ವಹಣೆಗೆ ಬಳಕೆ ಮಾಡುತ್ತಿದ್ದೇವೆ. ಇದು ಸಾಕಾಗದ ಕಾರಣ ಈ ಹಣದಿಂದ ಸಂತೆ ಮೈದಾನ ಅಭಿವೃದ್ಧಿಯಂತಹ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಎಇಇ ವೈ.ಎಚ್.ಇದ್ದಲಗಿ ಹೇಳುತ್ತಾರೆ.

****

ಜಿಲ್ಲೆಗೆ ಬಂದಾಗಿನಿಂದ ಈ ಮಾರುಕಟ್ಟೆ ಪ್ರದೇಶಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಕುಡುಕರ ಹಾವಳಿ ಕೇಳಿ ಬರುತ್ತಿದ್ದು, ಅದನ್ನು ತಡೆಗಟ್ಟಲು ಬೇಕಾದ ಕ್ರಮ ಕೈಗೊಳ್ಳುವೆ.

-ಲೋಕೇಶ ಜಗಲಾಸರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

***

'ಮಳೆಗಾಲ ಪ್ರಾರಂಭವಾದಾಗಿನಿಂದ ಇಲ್ಲಿ ನೀರು ನಿಲ್ಲುತ್ತಿದೆ. ಸೊಳ್ಳೆಗಳು ಹೆಚ್ಚಿದ್ದು ಡೆಂಗಿ, ಮಲೇರಿಯಾದಂತಹ ರೋಗಗಳಿಗೆ ವ್ಯಾಪಾರಸ್ಥರು ತುತ್ತಾಗುವ ಮುಂಚೆ ಬಿಟಿಡಿಎ ಮಳೆ ನೀರು ಹೊರಗೆ ಹರಿಸಲು ಕ್ರಮ ಕೈಗೊಳ್ಳಲಿ.

-ಸಿಕಂದರ್ ಕಲಾದಗಿ, ಸೆಕ್ಟರ್ ಸಂಖ್ಯೆ4ರ ವ್ಯಾಪಾರಿ

***

ನವನಗರದಲ್ಲಿ ಮನೆ ನಿರ್ಮಿಸುವವರು ನಿವೇಶನದಲ್ಲಿ ಅಗೆದ ಮಣ್ಣು ತಂದು ತಗ್ಗು ‍ಪ್ರದೇಶಗಳಲ್ಲಿ ಸುರಿಯುತ್ತಿದ್ದರು. ಆಗ ಇಷ್ಟೊಂದು ನೀರು ನಿಲ್ಲುತ್ತಿರಲಿಲ್ಲ. ಆದರೆ, ಮಣ್ಣು ಸುರಿಯದಂತೆ ಬಿಟಿಡಿಎ ಅಧಿಕಾರಿಗೆ ತಡೆಯೊಡ್ಡಿದ್ದಾರೆ. 
-ಯಾಸಿನ್ ಗೌಂಡಿ, ವ್ಯಾಪಾರಿ

***

'ಭಾನುವಾರದ ಮಾರುಕಟ್ಟೆಗೆ ಹೋಗುವ ರಸ್ತೆಗಳಲ್ಲಿ ತಗ್ಗು ಬಿದ್ದು ಅಪಾರ ಪ್ರಮಾಣದ ನೀರು ನಿಂತಿದೆ. ಇದರಿಂದ ಸಾರ್ವಜನಿಕರು ಮಾರುಕಟ್ಟೆ ಒಳಗೂ ಹೋಗಲು ತೊಂದರೆ ಅನುಭವಿಸುವಂತಾಗಿದೆ. 

-ರವಿಕಿರಣ ಬಾದಾಮಿ, ವ್ಯಾಪಾರಿ

***

'ಮಾರುಕಟ್ಟೆಯ ಅವ್ಯವಸ್ಥೆ ಸರಿಪಡಿಸಲು ಹೇಳಿದರೆ ನಮ್ಮಲ್ಲಿ ಹಣದ ಕೊರತೆ ಇದೆ. ನಗರಸಭೆಯಿಂದ ₹130 ಕೋಟಿ ಬಂದ ನಂತರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂಬ ಬೇಜವ್ದಾರಿ ಹೇಳಿಕೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ.

-ಸಿ.ಎಸ್.ಹಿರೇಮಠ, ನಗರಸಭೆ ಸದಸ್ಯ

ಪ್ರತಿಕ್ರಿಯಿಸಿ (+)