ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕರ್ತವ್ಯಕ್ಕೆ ತಾಳ್ಮೆಯ ಸೂತ್ರ

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚುನಾವಣಾ ಕಾರ್ಯದ ಸಮಯದಲ್ಲಿ ನಿಮ್ಮ ದಿನಚರಿ ಹೇಗಿದೆ?

28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಬಿಎಂಪಿ, ನಾಲ್ಕು– ಐದು ಜಿಲ್ಲೆಗಳಿಗೆ ಸಮನಾದಷ್ಟು ವ್ಯಾಪ್ತಿಯನ್ನು ಹೊಂದಿದೆ. ಹಾಗಾಗಿ ದಿನದ 24 ಗಂಟೆಗಳೂ ಸಾಲದು. ಮೊನ್ನೆ ಮನೆಗೆ ಬಂದಾಗ ಮಧ್ಯರಾತ್ರಿ 2 ಗಂಟೆಯಾಗಿತ್ತು. ಬೆಳಿಗ್ಗೆ 6.30ಕ್ಕೆ ಹೊರಡಬೇಕಾಯಿತು. ಚುನಾವಣಾ ದಿನ ಸಮೀಪಿಸಿದಂತೆ ಮನೆಗೆ ಹೋಗುವುದೇ ಕಡಿಮೆಯಾಗುತ್ತದೆ.

ಎಂದಿನಂತೆ ಬೆಳಿಗ್ಗೆಯಿಂದಲೇ ನಗರದ ಸ್ವಚ್ಛತೆ, ಮಳೆ ಹಾನಿ ಕುರಿತು ತಪಾಸಣೆ ನಡೆಸುತ್ತೇನೆ. ನಂತರ ಪೂರ್ವ ನಿಗದಿಯಂತೆ ಚುನಾವಣಾ ಕೆಲಸಗಳಲ್ಲಿ ಭಾಗಿಯಾಗುತ್ತೇನೆ. ಅಧಿಕಾರಿಗಳ, ಎಂಜಿನಿಯರ್‌ಗಳ ಸಭೆ, ಭದ್ರತಾ ಕೊಠಡಿ ಮತ್ತು ಇವಿಎಂಗಳ ಸುರಕ್ಷೆಯ ಪರಿಶೀಲನೆ, ಚುನಾವಣಾ ಸಿಬ್ಬಂದಿಗೆ ತರಬೇತಿ ಸೇರಿದಂತೆ ಸಾಕಷ್ಟು ಕೆಲಸಗಳಿರುತ್ತವೆ. ಚುನಾವಣಾ ಕರ್ತವ್ಯದಲ್ಲಿ ಸ್ವಲ್ಪ ಲೋಪವಾದರೂ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸುತ್ತದೆ. ಹಾಗಾಗಿ ಮೈಯೆಲ್ಲಾ ಕಣ್ಣಾಗಿಸಿಕೊಂಡು, ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇನೆ.

ಚುನಾವಣಾ ಕಾರ್ಯದ ಜತೆಗೆ ಬಿಬಿಎಂಪಿ ಕಾರ್ಯವನ್ನು ಹೇಗೆ ನಡೆಸಿಕೊಂಡು ಹೋಗುತ್ತಿದ್ದೀರಿ?

ಬಿಬಿಎಂಪಿಯಲ್ಲಿ ಬಹುತೇಕ ತುರ್ತು ಕೆಲಸಗಳೇ ಆಗಿರುತ್ತವೆ. ಮಳೆ, ಗಾಳಿ, ಪ್ರವಾಹ ಬಂದಾಗ ಎದುರಾಗುವ ದಿಢೀರ್‌ ಸಮಸ್ಯೆ, ರಸ್ತೆ ದುರಸ್ತಿ ಮತ್ತಿತರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲೇಬೇಕು. ಕೆಲದಿನಗಳ ಹಿಂದಿನ ಮಳೆ, ಗಾಳಿಗೆ ಹಲವಾರು ಮರಗಳು ರಸ್ತೆಯ ಮೇಲೆ ಬಿದ್ದಿದ್ದವು. ರಾತ್ರಿಯೆಲ್ಲಾ ಮರಗಳ ತೆರವು ಕಾರ್ಯ ಮಾಡಿಸಿದೆ. ಪಾಲಿಕೆಯ ದೈನಂದಿನ ಚಟುವಟಿಕೆಗೆ ಧಕ್ಕೆಯಾಗದಂತೆ ಚುನಾವಣಾ ಕರ್ತವ್ಯವನ್ನೂ ನಿರ್ವಹಿಸಿಕೊಂಡು ಸಾಗಿದ್ದೇನೆ. ನಾನು ಬಿಬಿಪಿಎಂ ಆಯುಕ್ತನಾಗಿ ಏಪ್ರಿಲ್‌ 25ಕ್ಕೆ ಎರಡು ವರ್ಷಗಳಾಗಿವೆ. ನಗರದ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕ ಭಾಗ್ಯ.

ಕುಟುಂಬದೊಂದಿಗೆ ಕಾಲ ಕಳೆಯಲು ಆಗುತ್ತಿದೆಯಾ?

ನಾನು ಐಎಎಸ್‌ ಅಧಿಕಾರಿಯಾಗಿ 24 ವರ್ಷವಾಗಿದೆ. ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ, ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನೊಡನೆ ನನ್ನ ಕುಟುಂಬವೂ ಅಲ್ಲೆಲ್ಲ ಇತ್ತು. ಪತ್ನಿ ಮತ್ತು ಇಬ್ಬರು ಪುತ್ರಿಯರಿಗೆ ನನ್ನ ಕೆಲಸ ಎಂಥದ್ದು ಎಂಬುದರ ಪರಿಚಯ ಇದೆ. ಬಿಬಿಎಂಪಿ ಆಯುಕ್ತನಾದ ಮೇಲಂತೂ ರಾತ್ರಿ 10.30ಕ್ಕೆ ಮುನ್ನ ಮನೆಗೆ ಹೋದದ್ದಿಲ್ಲ. ಬೆಳಿಗ್ಗೆ 7.30ಕ್ಕೆ ಮನೆ ಬಿಡುವುದನ್ನು ರೂಢಿಸಿಕೊಂಡಿದ್ದೇನೆ. ಒಂದು ದಿನ ರಾತ್ರಿ 10 ಗಂಟೆಗೆ ಮನೆಗೆ ಹೋಗಿದ್ದೆ. ಆಗ ಮನೆಯವರೆಲ್ಲ ಆಶ್ಚರ್ಯದಿಂದ ನೋಡಿದ್ದರು.

‘ಏನು ಇವತ್ತು ಇಷ್ಟು ಬೇಗ ಬಂದಿದ್ದೀರಾ’ ಎಂದು ಪ್ರಶ್ನಿಸಿದ್ದರು. ಎರಡು ದಿನಗಳ ಹಿಂದೆಯಷ್ಟೇ, ‘ನಾವೆಲ್ಲಾ ಸಿನಿಮಾಕ್ಕೆ ಹೊರಟಿದ್ದೇವೆ ಬರುತ್ತೀರಾ’ ಎಂದು ನನ್ನ ಪತ್ನಿ ಕರೆ ಮಾಡಿ ಕೇಳಿದ್ದರು. ನಾನು ಆಗುವುದಿಲ್ಲ ಎಂದೆ. ಅದಕ್ಕೆ ಸಿಟ್ಟು ಮಾಡಿಕೊಂಡು, ‘ನೀವು ಬರದೇ ಇದ್ದರೇ ಅಷ್ಟೇ ಹೋಯಿತು, ನಾವೇ ಹೋಗುತ್ತೇವೆ. ಮನೆಗೆ ನಾವೂ ತಡವಾಗಿಯೇ ಬರುತ್ತೇವೆ’ ಎಂದು ಹೇಳಿ ನನ್ನನ್ನು ಬಿಟ್ಟೇ ಹೋದರು.

ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಆಗುತ್ತಿದೆಯಾ?

ಬೆಳಿಗ್ಗೆ ‘ಕಾರ್ನ್‌ಫ್ಲೆಕ್ಸ್‌’ ಅಥವಾ ಮೊಟ್ಟೆ ತಿಂದು ಮನೆ ಬಿಡುತ್ತೇನೆ. ನಂತರ ಸರಿಯಾದ ಸಮಯಕ್ಕೆ ತಿಂಡಿ, ಊಟ ಆಗುವುದಿಲ್ಲ. ಎಷ್ಟೊ ಸಂದರ್ಭಗಳಲ್ಲಿ ವಿವಿಧ ಸಭೆಗಳಲ್ಲಿನ ಕಾಫಿ, ಟೀ, ಬಿಸ್ಕತ್ತುಗಳೇ ನಮ್ಮ ಹಸಿವನ್ನು ಮರೆಸುತ್ತವೆ.

ಒತ್ತಡ ನಿರ್ವಹಣೆಗೆ ಏನು ಮಾಡುತ್ತೀರಿ?

ಯಾವುದನ್ನೂ ಒತ್ತಡದ ಕೆಲಸ ಎಂದುಕೊಳ್ಳಬಾರದು. ತಾಳ್ಮೆ, ಸಂಯಮ ಇರಬೇಕಷ್ಟೆ. 1994ರಿಂದ 2006ರವರೆಗೆ ಪಶ್ಚಿಮ ಬಂಗಾಳದ ಮಿಡ್ನಾಪುರ, ಬರ್ಧಮಾನ್‌, ಮುರ್ಷಿದಾಬಾದ್‌ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ನಾನು ಕಲಿತದ್ದು ತಾಳ್ಮೆಯ ಪಾಠ. ಅದು ಈಗಲೂ ನನ್ನ ಕೈ ಹಿಡಿದಿದೆ. ಸಾಮಾನ್ಯವಾಗಿ ನಾನು ರಾತ್ರಿ ಮಲಗುವಾಗ ಸಂಗೀತ ಕೇಳುತ್ತೇನೆ ಅಥವಾ ಟಿ.ವಿ. ನೋಡುತ್ತೇನೆ. ಬೆಳಿಗ್ಗೆ ಯೋಗಾಭ್ಯಾಸದಲ್ಲಿ ತೊಡಗುತ್ತೇನೆ. ಆದರೆ ಚುನಾವಣಾ ಕಾರ್ಯದಿಂದ ಇವುಗಳಿಗೆ ಬ್ರೇಕ್‌ ನೀಡಿದ್ದೇನೆ.

ನೀವು ಕಾರ್ಯ ನಿರ್ವಹಿಸುತ್ತಿರುವ ಎಷ್ಟನೇ ಚುನಾವಣೆಯಿದು?

ಆರೇಳು ಸಾರ್ವತ್ರಿಕ ಚುನಾವಣೆಗಳಲ್ಲಿ (ಲೋಕಸಭೆ, ವಿಧಾನಸಭೆ) ಕೆಲಸ ಮಾಡಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಮೂರು ಚುನಾವಣೆಗಳನ್ನು ಮಾಡಿದ್ದೇನೆ. 2016ರಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆಯ ವೀಕ್ಷಕನಾಗಿ ಕೆಲಸ ಮಾಡಿದ್ದೇನೆ. ಅಲ್ಲದೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ನಗರಸಭೆ, ಪುರಸಭೆಗಳ ಸಾಕಷ್ಟು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ.

ಈ ಬಾರಿ ನಿಮ್ಮೊಂದಿಗೆ ಎಷ್ಟು ಜನ ಚುನಾವಣಾ ಕೆಲಸದಲ್ಲಿ ತೊಡಗಿದ್ದಾರೆ? ಅವರಿಗೆ ನಿಮ್ಮ ಕಿವಿಮಾತೇನು?

ನನ್ನೊಂದಿಗೆ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ನಾಲ್ವರು ವಿಶೇಷ ಆಯುಕ್ತರು (ಐಎಎಸ್‌), ನಾಲ್ವರು ಹೆಚ್ಚುವರಿ ಚುನಾವಣಾ ಅಧಿಕಾರಿ (ಐಎಎಸ್‌), 28 ರಿಟರ್ನಿಂಗ್‌ ಆಫೀಸರ್‌, ವಿಚಕ್ಷಣಾ ದಳದಲ್ಲಿ 1000 ಅಧಿಕಾರಿಗಳು, 700 ಸೆಕ್ಟರಲ್‌ ಮ್ಯಾಜಿಸ್ಟ್ರೇಟರ್‌ಗಳು, ಅಲ್ಲದೆ ಮತಗಟ್ಟೆ ಅಧಿಕಾರಿಗಳಾಗಿ 55,000 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹು ಮುಖ್ಯವಾದ ಕೆಲಸ ನಿರ್ವಹಣೆಯ ಅವಕಾಶ ನಮಗೆ ಸಿಕ್ಕಿದೆ. ಈ ಕಾರ್ಯವನ್ನು ತಂಡವಾಗಿ ಮಾಡೋಣ.

ಮತದಾನ ಹೆಚ್ಚಳಕ್ಕೆ ಯಾವ ಹೊಸ ಪ್ರಯೋಗ ಕೈಗೊಂಡಿದ್ದೀರಿ?

ಮತದಾರರ ಮನೆಗೆ ಮತದಾರರ ಚೀಟಿಗಳನ್ನು ಕೊಡಲಿದ್ದೇವೆ. ಅದರಲ್ಲಿ ಮತಗಟ್ಟೆ ಸಂಖ್ಯೆ, ಸೀರಿಯಲ್‌ ನಂಬರ್‌, ಮತಗಟ್ಟೆಯ ವಿಳಾಸ ಇರುತ್ತದೆ. ಮತದಾರರ ಕೈಪಿಡಿಯನ್ನೂ ಕೊಡಲಿದ್ದೇವೆ. ಅಲ್ಲದೆ ಬಿಬಿಎಂಪಿ ಚುನಾವಣಾ ಆ್ಯಪ್‌ಗೆ ಚಾಲನೆ ನೀಡಿದ್ದೇವೆ. ಮತದಾರರು ಇದನ್ನು ‘ಡೌನ್‌ಲೋಡ್‌’ ಮಾಡಿಕೊಂಡು ತಮ್ಮ ಮತಗಟ್ಟೆ ಎಲ್ಲಿದೆ ಎಂಬುದನ್ನು ಗೂಗಲ್‌ ಮ್ಯಾಪಿಂಗ್‌ ಮೂಲಕ ತಿಳಿಯಬಹುದು. ಅಲ್ಲದೆ ಮತದಾನದ ಹೆಚ್ಚಳಕ್ಕೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ನಡೆಸುತ್ತಿದ್ದೇವೆ.

**

ಸದಾ ನೆನಪಿನಲ್ಲಿರುವ ಚುನಾವಣೆ ಯಾವುದು?

ದಾವಣಗೆರೆಯಲ್ಲಿ 2009ರಲ್ಲಿ ನಡೆದ ಲೋಕಸಭಾ ಚುನಾವಣೆ ಸವಾಲಿನದ್ದಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್‌.ಎಸ್‌. ಮಲ್ಲಿಕಾರ್ಜನ್‌, ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಅವರ ನಡುವೆ ಪೈಪೋಟಿಯಿತ್ತು. ಮತ ಎಣಿಕೆ ಪೂರ್ಣಗೊಳ್ಳುವ ಮುನ್ನವೇ ಮಲ್ಲಿಕಾರ್ಜುನ್‌ ಅವರು ನನ್ನ ಬಳಿ ಬಂದು 2,000 ಮತಗಳ ಅಂತರದಿಂದ ಗೆಲುವಾಗಿದ್ದು, ಪ್ರಮಾಣ ಪತ್ರ ನೀಡಿ ಎಂದರು.

ಎಣಿಕೆಯೇ ಪೂರ್ಣವಾಗದೆ ಪ್ರಮಾಣ ಪತ್ರ ಹೇಗೆ ನೀಡಲಿ ಎಂದು ಅವರಿಗೆ ಹೇಳಿದೆ. ಅಷ್ಟರಲ್ಲೇ ಅವರ ಬೆಂಬಲಿಗರು ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ವಿಜಯದ ಘೋಷಣೆಗಳೊಂದಿಗೆ ಸಾಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೂಡಲೇ ಅಲ್ಲಿಗೆ ಮಾಧ್ಯಮದವರೂ ಬಂದು ಮಲ್ಲಿಕಾರ್ಜುನ್‌ ಅವರು ಗೆದ್ದಿರುವ ಕುರಿತು ‘ಬೈಟ್‌’ ನೀಡುವಂತೆ ಒತ್ತಾಯಿಸಿದರು ಕೇಳಿದರು. ಅದಕ್ಕೆ ನಾನು ಫಲಿತಾಂಶ ಬಾರದೇ ಕೊಡುವುದಿಲ್ಲ ಎಂದೆ.

ಇದಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿಯ ಸಿದ್ದೇಶ್ವರ ಅವರೂ ಬಂದು ‘ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ. ಫಲಿತಾಂಶ ಘೋಷಿಸಿ, ಪ್ರಮಾಣ ಪತ್ರ ಕೊಡಿ’ ಎಂದರು. ಆಗಲೂ ಇನ್ನೂ ಪೂರ್ಣ ಫಲಿತಾಂಶ ಬಂದಿರಲಿಲ್ಲ. ಸ್ವಲ್ಪ ಹೊತ್ತು ಕಾಯಿರಿ ಫಲಿತಾಂಶದ ಪೂರ್ಣ ಮಾಹಿತಿ ಬಂದಿಲ್ಲ ಎಂದು ಅವರಿಗೆ ಹೇಳಿದೆ. ಕೆಲ ಹೊತ್ತಿನಲ್ಲಿ ಪೂರ್ಣ ಮಾಹಿತಿ ಬಂದಿತು. ಸಿದ್ದೇಶ್ವರ ಜಯಗಳಿಸಿದ್ದರು.

ಒಟ್ಟಾರೆ ಈ ಸಂದರ್ಭವನ್ನು ನಿಭಾಯಿಸುವುದು ಬಹಳ ಕಷ್ಟಕರ ಮತ್ತು ತೀವ್ರ ಸವಾಲಿನಿಂದ ಕೂಡಿತ್ತು. ಆದರೆ ತಾಳ್ಮೆ, ಸಂಯಮ ನನ್ನನ್ನು ಕೈಹಿಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT