ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ

ಬಾಗಲಕೋಟೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ
Last Updated 25 ಫೆಬ್ರುವರಿ 2020, 14:51 IST
ಅಕ್ಷರ ಗಾತ್ರ

ಬಾಗಲಕೋಟೆ: ಸಭೆಗೆ ಅಧಿಕಾರಿಗಳೇ ಬರುತ್ತಿಲ್ಲ. ಅವರಿಲ್ಲದೇ ನಾವು ಬಂದು ಏನು ಪ್ರಯೋಜನ? ಜನರ ಸಮಸ್ಯೆ ಯಾರ ಬಳಿ ಹೇಳಬೇಕು ಎಂಬ ಆಕ್ರೋಶ ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದಪಕ್ಷಾತೀತವಾಗಿ ವ್ಯಕ್ತವಾಯಿತು.

ಇಲ್ಲಿನ ನವನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಗೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಅದು ಗಮನಕ್ಕೆ ಬರುತ್ತಲೇ ಸದಸ್ಯರು ಹರಿಹಾಯ್ದರು.

ಹಿಂದಿನ ಸಭೆಗಳಲ್ಲೂ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು. ಸಭೆ ಇರುವ ಬಗ್ಗೆ ಅವರಿಗೆ ಮೊದಲೇ ತಿಳಿಸಲಾಗಿರುತ್ತದೆ. ಆದರೂ ಅವರು ಬರುತ್ತಿಲ್ಲ. ಮಹತ್ವದ ಕೆಲಸವಿದ್ದರೆ ಮೊದಲೇ ಅಧ್ಯಕ್ಷರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಬೇಕು. ಅದು ಆಗುತ್ತಿಲ್ಲ, ಹೀಗಾದರೆ ಸದಸ್ಯರು ಸಭೆಗಾದರು ಏಕೆ ಬರಬೇಕು ಎಂದು ವಾಗ್ದಾಳಿ ನಡೆಸಿದರು.

ಶಾಸಕರಿಂದ ಕಾಮಗಾರಿಗೆ ಚಾಲನೆ ಕಾರ್ಯಕ್ರಮವಿದೆ. ಅಧಿಕಾರಿಗಳು ಅದರಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದ ನಂತರ ಸಭೆಗೆ ಬರಲಿದ್ದೇವೆ ಎಂದು ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಿ ಅಧ್ಯಕ್ಷ ಚನ್ನನಗೌಡ ಪರನಗೌಡರ ಸದಸ್ಯರನ್ನು ಸಮಾಧಾನಪಡಿಸಲು ಮುಂದಾದರು.

ಬೇಸಿಗೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮೂರು ತಿಂಗಳು ರಜೆ ಇರುತ್ತದೆ. ಈ ಸಂದರ್ಭದಲ್ಲಿ ಬಿಸಿಯೂಟದ ಕಾರ್ಯಕರ್ತೆಯರಿಗೆ ಗೌರವಧನ ನೀಡುವುದಿಲ್ಲ. ಈ ವೇಳೆ ಅವರಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಬೇಸಿಗೆ ರಜೆಯಲ್ಲಿಯೂ ಗೌರವಧನ ನೀಡಬೇಕು ಎಂದು ಅಧ್ಯಕ್ಷ ಚನ್ನನಗೌಡ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ.ಬಸರಿಗಿಡದ ಪ್ರತಿಕ್ರಿಯಿಸಿ, ‘ಬೇಸಿಗೆ ರಜೆ ಸಂದರ್ಭದಲ್ಲಿಯೂ ಅವರಿಗೆ ವೇತನ ನೀಡಲು ಅವಕಾಶವಿರುವ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಒಂದು ವೇಳೆ ಅವಕಾಶವಿದ್ದರೆ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಂಗಣ್ಣ ಮುಧೋಳ, ಸಭಾಪತಿ ಬಸವರಾಜ ಕೆಂಜೋಡಿ, ಸದಸ್ಯರಾದ ಎನ್.ಜಿ.ಮಾಗನೂರ, ರಾಜಶೇಖರ ಅಂಗಡಿ, ಪರಶುರಾಮ ಛಬ್ಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT