ಇಲಾಖೆ ಆಯುಕ್ತರಿಗೆ ಬುಲಾವ್ ನೀಡಿದ ಸಚಿವ!

7
ನವನಗರದ ಜಿಲ್ಲಾಆಸ್ಪತ್ರೆಯಲ್ಲಿನ ಅವ್ಯವಸ್ಥೆ; ಅಧಿಕಾರಿಗಳೊಂದಿಗೆ ಸಭೆ ಇಂದು

ಇಲಾಖೆ ಆಯುಕ್ತರಿಗೆ ಬುಲಾವ್ ನೀಡಿದ ಸಚಿವ!

Published:
Updated:

ಬಾಗಲಕೋಟೆ: ನವನಗರದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮುಂದಾಗಿದ್ದು, ಬುಧವಾರ ಆರೋಗ್ಯ ಇಲಾಖೆ ಆಯುಕ್ತರು ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಇಲ್ಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಅವರು, ’ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಈ ವೇಳೆ ರೋಗಿಗಳ ಅಳಲು ಆಲಿಸಿದರು. ಈ ವೇಳೆ ಕಂಡುಬಂದ ಲೋಪ–ದೋಷ, ದೂರುಗಳನ್ನು ಗಮನಿಸಿ ಅಲ್ಲಿಂದಲೇ ಇಲಾಖೆಯ ಆಯುಕ್ತರಿಗೆ ಕರೆ ಮಾಡಿ ತಕ್ಷಣ ಬಾಗಲಕೋಟೆಗೆ ಹೊರಟುಬರುವಂತೆ ಸೂಚನೆ ನೀಡಿದರು.

ಸಭೆ ಇಂದು: ಮುಂಜಾನೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಜಿಲ್ಲಾ ಆಸ್ಪತ್ರೆಗೆ ಬರಲಿರುವ ಅವರು, ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ಸಭೆ ನಡೆಸಿ ಆಸ್ಪತ್ರೆಯ ಪರಿಪೂರ್ಣ ಸುಧಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.

ಜಿಲ್ಲಾಸ್ಪತ್ರೆಗೆ ಬಂದಾಗ ಬಸವರಾಜ ಎಂಬ ರೋಗಿ, ’ನೀವು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ಕೊಡಿ. ವೈದ್ಯರು ಬರೆದುಕೊಡುವ ಔಷಧಿ ಆಸ್ಪತ್ರೆ ಆವರಣದಲ್ಲಿರುವ ಔಷಧಿ ಅಂಗಡಿಯಲ್ಲಿ ಸಿಗುವುದಿಲ್ಲ. ಹೆಚ್ಚು ಹಣ ಕೊಟ್ಟು ಹೊರಗಿನಿಂದ ಖರೀದಿಸಬೇಕಿದೆ’ ಎಂದು ಅಳಲು ತೋಡಿಕೊಂಡರು. ಅದನ್ನು ಸಚಿವರು ಗಂಭೀರವಾಗಿ ಪರಿಗಣಿಸಿದರು.

ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಂತೆ ಕಟ್ಟಲಾಗುತ್ತಿರುವ 100 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡದ ಕಾಮಗಾರಿ ಪರಿಶೀಲಿಸಿದ ಸಚಿವರು, ಕಾಮಗಾರಿ ಕಳಪೆಯಾಗಿರುವುದು ಹಾಗೂ ವಿಳಂಬವಾಗುತ್ತಿರುವುದಕ್ಕೆ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ಕಳೆದ ಅಕ್ಟೋಬರ್‌ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಕಳೆದ ತಿಂಗಳು ಪರಿಶೀಲನೆ ನಡೆಸಿದ ವೇಳೆ ಆಗಸ್ಟ್ 15ಕ್ಕೆ ಕಟ್ಟಡ ಸಿದ್ಧವಾಗಲಿದೆ ಎಂದು ಗುತ್ತಿಗೆದಾರರು ಹೇಳಿದ್ದರು. ಈಗ ಆಗಸ್ಟ್ 31ಕ್ಕೆ ಎಂದು ಹೇಳುತ್ತಿದ್ದಾರೆ. ಹಿಂದಿನ ಜಿಲ್ಲಾ ಶಸ್ತ್ರಚಿಕಿತ್ಸಕರ ಸಾತ್ವಿಕ ಸ್ವಭಾವವನ್ನು ದುರುಪಯೋಗಪಡಿಸಿಕೊಂಡು ಗುತ್ತಿಗೆದಾರರು ಬಹಳಷ್ಟು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗಿದೆ’ ಎಂದರು.

ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಳೆ ಬಾಗಲಕೋಟೆಯ 50 ಹಾಸಿಗೆ ಆಸ್ಪತ್ರೆ ಅಭಿವೃದ್ಧಿಪಡಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಸ್ತಾವ ಮುಂದಿಟ್ಟಿದ್ದು, ಅವರ ಸಹಕಾರ ಪಡೆದು ಆಸ್ಪತ್ರೆಯನ್ನು ಜನಸ್ನೇಹಿಯಾಗಿ ರೂಪಿಸಲಾಗುವುದು ಎಂದು ಹೇಳಿದರು.

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !