ಮಂಗಳವಾರ, ನವೆಂಬರ್ 19, 2019
28 °C
ಕುಳಗೇರಿ ಕ್ರಾಸ್ ಪಿಕೆಪಿಎಸ್: ಇಬ್ಬರು ಸಿಬ್ಬಂದಿ ಅಮಾನತು

ಸಾಲಮನ್ನಾ ಯೋಜನೆ ದುರ್ಬಳಕೆ: ತನಿಖೆ ಆರಂಭ

Published:
Updated:

ಬಾಗಲಕೋಟೆ: ಸಾಲದ ಮನ್ನಾ ಯೋಜನೆಯಡಿ ರೈತರು ವಾಸ್ತವವಾಗಿ ಪಡೆದ ಸಾಲದ ಮೊತ್ತಕ್ಕಿಂತಲೂ ಹೆಚ್ಚು ಹಣ ನಮೂದಿಸಿ ಸರ್ಕಾರದಿಂದ ಪಡೆದ ಆರೋಪದ ಮೇಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಮುಂದಾಗಿದೆ. ಅದಕ್ಕಾಗಿ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅಜಯಕುಮಾರ ಸರನಾಯಕ ’ಪ್ರಜಾವಾಣಿ’ಗೆ ತಿಳಿಸಿದರು.

’ರೈತರು ₹50 ಸಾಲ ಮಾಡಿದ್ದರೆ ಮನ್ನಾ ಮಾಡುವಾಗ ಅವರ ಹೆಸರಿನಲ್ಲಿ ಸರ್ಕಾರದಿಂದ ₹1 ಲಕ್ಷ ಕ್ಲೇಮು ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗೆ ನೂರಾರು ಖಾತೆಗಳಲ್ಲಿ ಈ ರೀತಿ ಕ್ಲೇಮು ಮಾಡಿರುವುದರಿಂದ ಇದೊಂದು ಆಕಸ್ಮಿಕ ತಪ್ಪು ಅಲ್ಲ. ಬದಲಿಗೆ ಉದ್ದೇಶಪೂರ್ವಕ ಕೆಲಸ ಆಗಿರಬಹುದು ಎಂಬ ಕಾರಣಕ್ಕೆ ತನಿಖೆಗೆ ಆದೇಶಿಸಲಾಗಿದೆ’ ಎಂದರು.

’ಸರ್ಕಾರಕ್ಕೆ ಕ್ಲೇಮು ಮಾಡಿದ ಹೆಚ್ಚುವರಿ ಮೊತ್ತ ಇನ್ನೂ ಸಾಲ ಪಡೆದ ರೈತರ ಖಾತೆಯಲ್ಲಿಯೇ ಇದೆ. ಹೀಗಾಗಿ ಹಣ ಸೊಸೈಟಿಯಿಂದ ಹೊರಗೆ ಹೋಗಿಲ್ಲ. ಬದಲಿಗೆ ಬೇರೆ ಬೇರೆ ರೈತರ ಹೆಸರಿಗೆ ಖರ್ಚು ಹಾಕಿ ಮುಂದೆ ಹಣ ಬಳಕೆ ಮಾಡಿಕೊಳ್ಳುವ ಸಂಭವ ಇತ್ತು’ ಎನ್ನುವ ಸರನಾಯಕ, ’ಇನ್ನೊಂದ ವಾರದಲ್ಲಿ ತನಿಖೆ ಪೂರ್ಣಗೊಳ್ಳಲಿದೆ. ದುರುಪಯೋಗವಾಗಲಿದ್ದ ಹಣದ ಪ್ರಮಾಣದ ಗೊತ್ತಾಗಲಿದೆ’ ಎಂದು ತಿಳಿಸಿದರು. 

 

ಪ್ರತಿಕ್ರಿಯಿಸಿ (+)