ಜಮಖಂಡಿ: ಉಪಚುನಾವಣೆಗೆ ರಂಗ ಸಜ್ಜು

7
ಸಿದ್ದುನ್ಯಾಮಗೌಡ ಅಕಾಲಿಕ ನಿರ್ಗಮದಿಂದ ತೆರವಾದ ಸ್ಥಾನ: ನವೆಂಬರ್ 3ಕ್ಕೆ ಮತದಾನ

ಜಮಖಂಡಿ: ಉಪಚುನಾವಣೆಗೆ ರಂಗ ಸಜ್ಜು

Published:
Updated:
Deccan Herald

ಬಾಗಲಕೋಟೆ: ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಸಾವಿನಿಂದ ತೆರವಾಗಿದ್ದ ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ನವೆಂಬರ್ 3ರಂದು ಶನಿವಾರ ಮತದಾನ ನಡೆಯಲಿದೆ. ವಿಧಾನಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳಲ್ಲಿಯೇ ಕ್ಷೇತ್ರ ಮತ್ತೊಂದು ಹಣಾಹಣಿಗೆ ಸಜ್ಜಾಗಿದೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ಟೋಬರ್ 9ರಿಂದ ನೀತಿ ಸಂಹಿತೆ ಜಾರಿಯಾಗಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 16 ಕೊನೆಯ ದಿನ. 17ರಂದು ಪರಿಶೀಲನೆ ಕಾರ್ಯ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 20ರವರೆಗೆ ಅವಕಾಶವಿದೆ. ನವೆಂಬರ್ 6ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಎರಡು ದಿನಗಳ ನಂತರ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಅಕಾಲಿಕ ನಿರ್ಗಮನ

ನಾಲ್ಕು ತಿಂಗಳ ಹಿಂದಷ್ಟೇ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಶಾಸಕರಾಗಿ ಸಿದ್ದು ನ್ಯಾಮಗೌಡ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು, ಆ ನಿಟ್ಟಿನಲ್ಲಿ ಪಕ್ಷದ ವರಿಷ್ಠರನ್ನು ದೆಹಲಿಯಲ್ಲಿ ಭೇಟಿಯಾಗಿ ವಾಪಸ್ ಮರಳುವಾಗ ಮೇ 28ರಂದು ಮುಂಜಾನೆ ಕಲಾದಗಿ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಹಾಗಾಗಿ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗಿದೆ.

20 ಮಂದಿ ಕಣದಲ್ಲಿದ್ದರು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಸೇರಿದಂತೆ 20 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು ಚಲಾವಣೆಯಾದ ಮತದಲ್ಲಿ ಶೇ 32.13ರಷ್ಟು ಮತ ಪಡೆದಿದ್ದ ಸಿದ್ದು (49,245) ಗೆಲುವಿನ ನಗೆ ಬೀರಿದ್ದರು. ಬಿಜೆಪಿಯಿಂದ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ 46,450 ಮತಗಳನ್ನು (ಶೇ 30.13) ಪಡೆದಿದ್ದರು.

ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರೂ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ತಾಗಿತ್ತು. ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿದ್ದ ಉದ್ಯಮಿ ಸಂಗಮೇಶ ನಿರಾಣಿ ಮೊದಲ ಪ್ರಯತ್ನದಲ್ಲಿಯೇ 24,461 ಮತ ಪಡೆದರೆ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶ್ರೀಶೈಲ ದಳವಾಯಿ 19.753 ಮತ ಪಡೆದಿದ್ದರು. ಇದರಿಂದ ಸಿದ್ದು ನ್ಯಾಮಗೌಡ ಗೆಲುವಿನ ಅಂತರ ಕಡಿಮೆಯಾಗಿದ್ದರೆ, ಶ್ರೀಕಾಂತ ಕುಲಕರ್ಣಿ ಸೋಲನ್ನಪ್ಪಿದ್ದರು. 

ಜಮಖಂಡಿಗೆ ಚುನಾವಣೆ ಪ್ರಚಾರಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ ಸದ್ದು ಮಾಡಿದ್ದರೆ, ಸಂಗಮೇಶ ನಿರಾಣಿ ಅವರ ಅಬ್ಬರದ ಪ್ರಚಾರ ಗಮನ ಸೆಳೆದಿತ್ತು. ಪ್ರಜಾಪರಿವರ್ತನಾ ಪಕ್ಷ ಮೊದಲ ಬಾರಿಗೆ ಅಭ್ಯರ್ಥಿ ಕಣಕ್ಕಿಳಿಸಿತ್ತು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಕೂಡ ಅದೃಷ್ಟ ಪರೀಕ್ಷೆಗಿಳಿದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !