ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಭೇಟಿ

ನಿಗದಿಯಂತೆ ಆಶ್ರಯ ನಿವೇಶನಗಳ ಹಂಚಿಕೆಗೆ ಅಧಿಕಾರಿಗಳಿಗೆ ಸೂಚನೆ
Last Updated 20 ಅಕ್ಟೋಬರ್ 2020, 3:10 IST
ಅಕ್ಷರ ಗಾತ್ರ

ಹುನಗುಂದ: ‘ಸಾಹೇಬ್ರಾ ಹತ್ತಾರು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದೇವೆ. ನಮ್ಮ ಕುಟುಂಬ ವೃತ್ತಿಯಾದ ಕಮ್ಮಾರಿಕೆಯನ್ನು ಮಾಡಿಕೊಂಡು ಬದುಕನ್ನು ಕಂಡುಕೊಂಡಿದ್ದೇವೆ. ಈಗ ಜಾಗ ಖಾಲಿ ಮಾಡಿ ಅಂದ್ರ ನಾವು ಬದುಕುದಾದ್ರು ಹೆಂಗ ನೀವ ಹೇಳ್ರಿ’ ಎಂದು ಪಟ್ಟಣದ ಹಿರೇಹಳ್ಳದ ತೀರದಲ್ಲಿ ವಾಸಿಸುತ್ತಿರುವ ಕಮ್ಮಾರ ಕುಟುಂಬಗಳ ನಿವಾಸಿಗಳು ಶಾಸಕ ದೊಡ್ಡನಗೌಡ.ಜಿ ಪಾಟೀಲ ಬಳಿ ತಮ್ಮ ನೋವನ್ನು ತೋಡಿಕೊಂಡರು.

ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿದ್ದ ತಹಶೀಲ್ದಾರೊಂದಿಗೆ ಮಾತನಾಡಿ, ‘ನಿಗದಿಯಂತೆ ಆಶ್ರಯ ನಿವೇಶನಗಳನ್ನು ಹಂಚಿಕೆಮಾಡಿ ಈ ಸ್ಥಳದಲ್ಲಿ ಕೆಲಸ ಮಾಡಲು ಮಾತ್ರ ಅವಕಾಶ ಮಾಡಿಕೊಡಿ. ಕುಟುಂಬಗಳು ‌ನಿಗದಿಪಡಿಸಿದ ಸ್ಥಳಗಳಲ್ಲಿ ವಾಸಮಾಡಲಿ’ ಎಂದರು.

ಪಟ್ಟಣದಲ್ಲಿ ನಾಲ್ಕೈದು ದಿನಗಳ ಹಿಂದೆ ಸುರಿದಿದ್ದ ಧಾರಕಾರ ಮಳೆಯು ಕುಂಬಾರ ಓಣಿ, ಸೂಡಿಯವರ ಓಣಿ, ಕಟುಗರ ಓಣಿ, ತೆಗ್ಗಿನ ಓಣಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು.

ಪಟ್ಟಣದ ಸೂಡಿಯವರ ಓಣಿಯ ಬಂದೇನವಾಜ್ ಬೀಳಗಿ ಎಂಬುವರಿಗೆ ಸೇರಿದ ಮನೆಯಲ್ಲಿ ನೀರಿನ ಪಸೆ ಹೆಚ್ಚಾಗಿದ್ದು ಇವತ್ತಿನವರೆಗೂ 2 ಇಂಚಿನ ಪೈಪ್ ತುಂಬಿ ನೀರು ಹೊರಬರುತ್ತಿದ್ದು ಮನೆಯವರು ಇದೇ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ನೀರನ್ನು ಹೊರಹಾಕುವುದೇ ಒಂದು ಕಾಯಕವಾಗಿದೆ ಎಂದು ಬಂದೇನವಾಜ್‌ ಹೇಳಿದರು. ಇದು ಒಂದು ಮನೆಯ ಸಮಸ್ಯೆಯಲ್ಲ ಇಲ್ಲಿನ ಸುತ್ತಮುತ್ತಲಿನ 50 ಕ್ಕೂ ಹೆಚ್ಚಿನ ಮನೆಗಳಲ್ಲಿ ನೀರಿನ ಪಸೆ ಹರಿಯುತ್ತಿದೆ. ಬಹುತೇಕ ಮನೆಗಳು ಮಣ್ಣಿನ ಮನೆಗಳಾಗಿ ರುವುದರಿಂದ ಹೆಚ್ಚಿನ ತೇವಾಂಶದಿಂದ ಕೂಡಿದ್ದು ಯಾವಾಗ ಬೀಳುತ್ತವೆಯೋ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ನಮಗೆ ಸೂಕ್ತ ಪರಿಹಾರ ಕಲ್ಪಿಸಿಬೇಕೆಂದು ಜನರು ಮನವಿ ಮಾಡಿಕೊಂಡರು. ಶಾಸಕರು ಸ್ಥಳದಲ್ಲಿದ್ದ ತಹಶೀಲ್ದಾರ್ ಅವರ ಜತೆ ಮಾತನಾಡಿ ಎಸ್.ಡಿ.ಆರ್.ಎಫ್ ಅಡಿಯಲ್ಲಿ ನೀರು ನುಗ್ಗಿದ ಮನೆಗಳಿಗೆ ತಕ್ಷಣವೇ 10 ಸಾವಿರ ವಿತರಿಸುವಂತೆ ಸೂಚಿಸಿದರು.

ತಾ.ಪಂ ಇಒ ಸಿ.ಬಿ.ಮ್ಯಾಗೇರಿ, ಸಿಪಿಐ ಅಯ್ಯನಗೌಡ ಪಾಟೀಲ ಪುರುಸಭೆಯ ಮುಖ್ಯಾಧಿಕಾರಿ ಐ.ಕೆ. ಗುಡದಾರಿ, ಪಿಎಸ್ಐ ಶರಣಬಸಪ್ಪ ಸಂಗಳದ, ಪಾಟೀಲ, ಪುರುಸಭೆಯ ಸದಸ್ಯರಾದ ಸಾಂತಪ್ಪ ಹೊಸಮನಿ, ಮಹೇಶ ಬೆಳ್ಳಿಹಾಳ, ಬಸವರಾಜ ಬಂಡಿವಡ್ಡರ, ಸ್ಥಳೀಯ ಮುಖಂಡರಾದ ಲಿಂಬಣ್ಣ ಮುಕ್ಕಣ್ಣವರ, ಮಲ್ಲಪ್ಪ ಚೂರಿ,ಚಂದ್ರು ಗಂಗೂರ, ಮಹಾಂತೇಶ ಚಿತ್ತವಾಡಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT