ತಾಯಿ–ಮಗು ಮರಣ ಪ್ರಮಾಣ; ಕೋರೆ ಕಳವಳ

7
ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರ (ಕೆಎಸ್‌ಒಜಿಎ) ಸಂಘದ 29ನೇ ಸಮ್ಮೇಳನ ಉದ್ಘಾಟನೆ

ತಾಯಿ–ಮಗು ಮರಣ ಪ್ರಮಾಣ; ಕೋರೆ ಕಳವಳ

Published:
Updated:
Deccan Herald

ಬಾಗಲಕೋಟೆ: ’ವಿಶ್ವದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಶ್ರೇಯ ನಮ್ಮ ದೇಶದ್ದಾಗಿದ್ದರೂ, ಶಿಶು–ತಾಯಿ ಮರಣದ ವಿಚಾರದಲ್ಲಿ ತಲೆತಗ್ಗಿಸುವ ‍ಪರಿಸ್ಥಿತಿ ಇದೆ’ ಎಂದು ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ನಡೆದ ರಾಜ್ಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರ (ಕೆಎಸ್‌ಒಜಿಎ) ಸಂಘದ 29ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

’ಬೇಟಿ ಬಚಾವೊ, ಪಡಾವೊ ಘೋಷಣೆಯ ರೀತಿಯೇ ಮಾ ಬಾಚಾವೊ (ಅಮ್ಮನ ರಕ್ಷಿಸಿ) ಎಂಬುದು ಮಾರ್ದನಿಸಬೇಕಿದೆ. ಪ್ರತಿ ವರ್ಷ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ನವಜಾತ ಶಿಶುಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ತಾಯಂದಿರು ಹೆರಿಗೆ ವೇಳೆ ಸಾವನ್ನಪ್ಪುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

’ತಾಯಿ–ಮಗುವಿನ ಸಾವು ತಪ್ಪಿಸುವುದು ದೇಶದ ವೈದ್ಯಕೀಯ ಕ್ಷೇತ್ರದ ಮುಂದಿರುವ ದೊಡ್ಡ ಸವಾಲಾಗಿದೆ. ಹೆರಿಗೆ ವೇಳೆ ತಾಯಂದಿರ ಮರಣ ತಪ್ಪಿಸುವ ವಿಚಾರದಲ್ಲಿ ದಕ್ಷಿಣ ಭಾರತದಲ್ಲಿ ಒಂದಷ್ಟು ಆಶಾದಾಯಕ ಯಶಸ್ಸು ದೊರೆತಿದೆ. ಆದರೆ ಉತ್ತರ ಭಾರತದಲ್ಲಿ ಪರಿಸ್ಥಿತಿ ಬಹಳಷ್ಟು ಶೋಚನೀಯವಾಗಿದೆ. ಈ ವಿಷಯದಲ್ಲಿ ಹೆಚ್ಚು ಹೆಚ್ಚು ಸಂಶೋಧನೆ ಆಗಬೇಕಿದೆ. ಯುವ ವೈದ್ಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ಸಲಹೆ ನೀಡಿದರು.

ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರ ಸಂಘದ ಅಧ್ಯಕ್ಷ ಡಾ. ಎಂ.ಬಿ.ಬೆಲ್ಲದ ಮಾತನಾಡಿ, ‘ಹೆರಿಗೆ ಸಮಯದಲ್ಲಿ ತಾಯಂದಿರ ಸಾವಿಗೆ ರಕ್ತಹೀನತೆ (ಅನೀಮಿಯಾ) ಬಹುಮುಖ್ಯ ಕಾರಣ. ತಾಯಂದಿರ ಮರಣ ಪ್ರಮಾಣ ದಕ್ಷಿಣದಲ್ಲಿ ಬೆಂಗಳೂರು ನಗರ ಹಾಗೂ ಚಾಮರಾಜ ನಗರ ಜಿಲ್ಲೆಗಳನ್ನು ಬಿಟ್ಟರೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳೇ ಮುಂಚೂಣಿಯಲ್ಲಿವೆ’ ಎಂದರು.

’ತಾಯಿ–ಮಗು ಸಾವು ತಪ್ಪಿಸುವ ಪ್ರಯತ್ನದಲ್ಲಿ ಸಂಘ ನಿರತವಾಗಿದೆ. ಆ ನಿಟ್ಟಿನಲ್ಲಿ ಹೆರಿಗೆ ವೇಳೆ ಸುರಕ್ಷಾ ಕ್ರಮ, ರಕ್ತಹೀನತೆ ತಪ್ಪಿಸಲು ಅಗತ್ಯ ಮುಂಜಾಗರೂಕತಾ ಕ್ರಮ, ಸುರಕ್ಷಿತ ತಾಯ್ತನ, ಆರೋಗ್ಯವಂತ ಮಗು ಜನನ ಮೊದಲಾದ ವಿಷಯಗಳ ಬಗ್ಗೆ ಜಾಗೃತಿ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

’ಉತ್ತರ ಕರ್ನಾಟಕ ಭಾಗಕ್ಕೆ ವೈದ್ಯಕೀಯ ಸುರಕ್ಷಾ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ಕಲ್ಪಿಸುವ ಮೂಲಕ ಹೆರಿಗೆ ವೇಳೆ ತಾಯಿ–ಮಗು ಸಾವಿನ ಪ್ರಮಾಣ ತಗ್ಗಿಸಲು ಕೈ ಜೋಡಿಸುವಂತೆ’ ಈ ಭಾಗದ ಶಾಸಕರು ಹಾಗೂ ಸಂಸದರಿಗೆ ಡಾ.ಬೆಲ್ಲದ ಮನವಿ ಮಾಡಿದರು.

ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ಕುಲಪತಿ ಡಾ.ಎಸ್.ಸಚ್ಚಿದಾನಂದ, ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಕಾಲೇಜಿನ ಪ್ರಾಚಾರ್ಯ ಡಾ.ಸಿದ್ದಣ್ಣ ಶೆಟ್ಟರ, ಸಂಘದ ಕಾರ್ಯದರ್ಶಿ ಡಾ.ಕಸ್ತೂರಿ ದೋಣಿಮಠ ವಾರ್ಷಿಕ ವರದಿ ಓದಿದರು. ಪೋಷಕರಾದ ಡಾ.ಎಂ.ಜಿ.ಹಿರೇಮಠ ಮಾತನಾಡಿದರು. ಡಾ.ನಾಗರತ್ನಾ ಕುಂಟೋಜಿ, ಡಾ.ಆಶಾಲತಾ ಮಲ್ಲಾಪುರ ಸ್ವಾಗತಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !