ಸೋಮವಾರ, ಅಕ್ಟೋಬರ್ 14, 2019
28 °C

ಯುವತಿಯ ಪೀಡಿಸುತ್ತಿದ್ದವನ ಕರೆಸಿ ಹೊಡೆದು ಕೊಂದರು!

Published:
Updated:
Prajavani

ಬಾಗಲಕೋಟೆ: ಯುವತಿಯೊಬ್ಬಳಿಗೆ ಪದೇ ಪದೇ ಫೋನ್ ಮಾಡಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಿ ಬೀಳಗಿ ತಾಲ್ಲೂಕಿನ ಸುನಗ ಗ್ರಾಮದಲ್ಲಿ ಗುರುವಾರ ರಾತ್ರಿ ಯುವಕನನ್ನು ಹೊಡೆದು ಕೊಲೆ ಮಾಡಲಾಗಿದೆ.

ಗ್ರಾಮದ ಬಾಷಾಸಾಬ್ ತಹಶೀಲ್ದಾರ್ ಪುತ್ರ ನಬಿಸಾಬ್ (20) ಕೊಲೆಯಾದವನು. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಹೋದರ ವಿಠ್ಠಲ ಲಕ್ಷ್ಮಣ ವಡವಾಣಿ ಹಾಗೂ ಆತನ ಸ್ನೇಹಿತ ಮಂಜುನಾಥ ನರಿ ಎಂಬವವರನ್ನು ಶುಕ್ರವಾರ ಬೀಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಯುವತಿಗೆ ಪರಿಚಿತನೇ ಆಗಿದ್ದ ನಬಿಸಾಬ್, ಕಳೆದ ಏಳೆಂಟು ತಿಂಗಳಿನಿಂದ ಪದೇ ಪದೇ ಕರೆ ಮಾಡಿ ತನ್ನನ್ನು ಪ್ರೀತಿಸುವಂತೆ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಆತನ ಹಿಂಸೆ ತಾಳಲಾರದೇ ಆಕೆ ಈ ಸಂಗತಿಯನ್ನು ತನ್ನ ತಮ್ಮ ವಿಠ್ಠಲನ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ವಿಠ್ಠಲ ಹಲವು ಬಾರಿ ನಬಿಸಾಬ್‌ಗೆ ಎಚ್ಚರಿಕೆ ನೀಡಿದ್ದನು. ಗುರುವಾರ ಕೂಡ ನಬಿಸಾಬ್ ಯುವತಿಗೆ ಹಲವು ಬಾರಿ ಕರೆ ಮಾಡಿದ್ದನು. ಆಗ ವಿಠ್ಠಲನೇ ಕರೆ ಸ್ವೀಕರಿಸಿದ್ದನು. ಆಕ್ರೋಶಗೊಂಡ ವಿಠ್ಠಲ, ನಬಿಸಾಬ್‌ಗೆ ಬುದ್ಧಿ ಕಲಿಸಲು ತೀರ್ಮಾನಿಸಿದ್ದಾನೆ.

‘ನಬಿ ಸಾಬ್‌ನನ್ನು ರಾತ್ರಿ ಸುನಗ ಕ್ರಾಸ್‌ಗೆ ಬರಲು ವಿಠ್ಠಲ ಹೇಳಿದ್ದನು. ಅಲ್ಲಿ ಸ್ನೇಹಿತ ಮಂಜುನಾಥನೊಂದಿಗೆ ಕಾದು ಕುಳಿತಿದ್ದು, ನಬಿಸಾಬ್ ಬರುತ್ತಲೇ ಅಲ್ಲಿಯೇ ಪಕ್ಕದ ಹೊಲಕ್ಕೆ ಕರೆದೊಯ್ದು ಇಬ್ಬರೂ ಸೇರಿ ಥಳಿಸಿದ್ದಾರೆ. ಈ ವೇಳೆ ಆತ ತೀವ್ರವಾಗಿ ಗಾಯಗೊಂಡಿದ್ದು, ಅಲ್ಲಿಂದ ಊರಿಗೆ ಕರೆತಂದು ಮನೆಯ ಹತ್ತಿರವೇ ಎಸೆದು ಹೋಗಿದ್ದಾರೆ. ಗಾಯಗೊಂಡು ಬಳಲುತ್ತಿದ್ದ ಮಗನಿಗೆ ಉಪಚರಿಸಿದ ಭಾಷಾಸಾಬ್ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಿನ ಜಾವ ಅನಗವಾಡಿ ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಸಾವಿಗೀಡಾಗಿದ್ದಾನೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

Post Comments (+)