ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೇರದಾಳ: ಕೊಲೆ ಪ್ರಕರಣ ಭೇದಿಸಿದ ಪೊಲೀಸರು

Published 21 ಆಗಸ್ಟ್ 2024, 15:49 IST
Last Updated 21 ಆಗಸ್ಟ್ 2024, 15:49 IST
ಅಕ್ಷರ ಗಾತ್ರ

ತೇರದಾಳ: ಹನಗಂಡಿ ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ದೊರೆತಿದ್ದ ಅಪರಿಚಿತ ಶವದ ಪ್ರಕರಣವನ್ನು ಬೆನ್ನಟ್ಟಿದ ತೇರದಾಳ ಹಾಗೂ ಬನಹಟ್ಟಿ ಪೊಲೀಸರು, ಪ್ರಕರಣವನ್ನು ಭೇದಿಸಿದ್ದು, ಕೊಲೆ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

ಶವ ಗೋಕಾಕ ತಾಲ್ಲೂಕಿನ ರಾಜಾಪುರದ ಕುಮಾರ ಯಲ್ಲಪ್ಪ ಕಿಲಾರಿ (20) ಎಂಬವರದ್ದು ಎಂಬುದು ಖಚಿತವಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಕುಮಾರನ ಪತ್ನಿಯ ತಂದೆ ಸಿದ್ದರಾಯ ಪೂಜಾರಿ ಪೊಲೀಸರಿಗೆ ಶರಣಾಗತನಾಗಿದ್ದಾನೆ.

ಆ. 11ರಂದು ಹನಗಂಡಿ ಗ್ರಾಮದ ಕರೆಪ್ಪ ಕಲ್ಲೊಳಿ ಅವರ ಜಮೀನಿನ ಹತ್ತಿರದ ಕಾಲುವೆಯಲ್ಲಿ ತೇಲಿ ಬಂದ ಶವವನ್ನು ಕಂಡ ಕರೆಪ್ಪ ಅವರು ತೇರದಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ಸ್ಥಳಕ್ಕೆ ತೆರಳಿದ ಪಿಎಸ್ಐ ಅಪ್ಪಣ್ಣ ಐಗಳಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಶವದ ಮೈಮೇಲೆ ಸಾಕಷ್ಟು ಗಾಯಗಳು ಆಗಿರುವುದನ್ನು ಗಮನಿಸಿದ ಪೊಲೀಸರು ತನಿಖೆಗೆ ಮುಂದಾದರು.

ಜಮಖಂಡಿ ಡಿಎಸ್‌ಪಿ ಶಾಂತವೀರ ಈ., ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಹಾಗೂ ಪಿಎಸ್ಐ ಅಪ್ಪಣ್ಣ ಐಗಳಿ ಕಾರ್ಯಾಚರಣೆ ನಡೆಸಿದರು. ಘಟಪ್ರಭಾ ಎಡದಂಡೆ ಕಾಲುವೆ ಬೆಳಗಾವಿ ಜಿಲ್ಲೆಯಿಂದ ಬರುವುದರಿಂದ ಮೃತನ ಫೋಟೊವನ್ನು ತೆಗೆದುಕೊಂಡು ಬೆಳಗಾವಿ ಜಿಲ್ಲೆಯಲ್ಲಿ ಸುತ್ತಾಡಿ ಅಲ್ಲಿಯ ಕೆಲ ಪೊಲೀಸ್ ಠಾಣೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿ ಸಂಗ್ರಹಿಸಿದರು.

ಘಟನೆಯ ಹಿನ್ನೆಲೆ: ಕುಮಾರ ಕಿಲಾರಿ ಮೂಡಲಗಿ ತಾಲ್ಲೂಕಿನ ಇಟ್ನಾಳ ಗ್ರಾಮದ ಭಾಗ್ಯಶ್ರೀ ಅವರನ್ನು ವಿವಾಹವಾಗಿದ್ದರು. ಪತ್ನಿಗೆ ತವರು ಮನೆಯಿಂದ ಆಸ್ತಿ ತೆಗೆದುಕೊಂಡು ಬರುವಂತೆ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆ. 10ರಂದು ಇಟ್ನಾಳ ಗ್ರಾಮದ ಪತ್ನಿಯ ಮನೆಗೆ ಗಲಾಟೆ ಮಾಡಲು ಹೋಗಿದ್ದ. ಪತ್ನಿಯ ತಂದೆ ಹಾಗೂ ಅಣ್ಣ-ತಮ್ಮಂದಿರ ಜೊತೆಗೆ ಆಸ್ತಿಗಾಗಿ ಜಗಳ ಆರಂಭಿಸಿದ. ಆತನ ಕಿರುಕುಳದಿಂದ ಸಾಕಷ್ಟು ರೋಸಿ ಹೋಗಿದ್ದ ಪತ್ನಿಯ ತಂದೆ ಸಿದ್ದರಾಯ ಪೂಜಾರಿ ಹಾಗೂ ಆತನ ಮಕ್ಕಳಾದ ಶ್ರೀಶೈಲ ಮತ್ತು ಬೂತಾಳಿ ಸೇರಿ ಮಾರಕಾಸ್ತ್ರಗಳಿಂದ ಕುಮಾರನನ್ನು ಕೊಲೆ ಮಾಡಿ ಕಾಲುವೆಗೆ ಎಸೆದರು ಎನ್ನುವುದನ್ನು ತನಿಖೆಯ ವೇಳೆ ಸಿದ್ದರಾಯ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಪೊಲೀಸ್‌ ಸಿಬ್ಬಂದಿಗಳಾದ ವಿವೇಕ ಸುವರ್ಣಖಂಡಿ, ದುಂಡಪ್ಪ ಹಡದಪ, ಅಶೋಕ ಸವದಿ, ಸೈಪನ್ ನಾಟಿಕಾರ, ಶಂಕರ ಸವದಿ, ರಮೇಶ ಪಾಟೀಲ, ಪಿ.ಪಿ. ಭಸ್ಮೆ, ಮಹೇಶ ಹನಗಂಡಿ, ಸಂಗಮೇಶ ಸೋನೂನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT