ಬುಧವಾರ, ಜೂನ್ 29, 2022
25 °C
ಗ್ರಾಮದ ಯುವಕರ ಸ್ವಂತ ಹಣದಲ್ಲಿ ಜೀರ್ಣೋದ್ಧಾರ

ಶತಮಾನದ ಶಾಲೆಗೆ ಹೊಸ ಸ್ಪರ್ಶ

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ಶತಮಾನ ಕಂಡ ಶಾಲೆ, ಹಲವಾರು ಭಾರಿ ಕೃಷ್ಣೆಯ ಪ್ರವಾಹಕ್ಕೆ ಸಿಲುಕಿ ಇನ್ನೇನು ಬೀಳುವ ಹಂತ ತಲುಪಿದೆ ಎನ್ನುವಾಗಲೇ ಗ್ರಾಮದ ಯುವಕರು ಸೇರಿ ಸ್ವಂತ ಹಣದಲ್ಲಿ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ.

ಸಮೀಪದ ಹಿಪ್ಪರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದೇ ಶಾಲೆಯಲ್ಲಿ ಓದಿದ ಗ್ರಾಮದ 10 ಜನ ಸಮಾನ ಮನಸ್ಕರು ಸೇರಿಕೊಂಡು ಶಾಲೆಯ ಅಭಿವೃದ್ಧಿಗೆ ಟೊಂಕ ಕಟ್ಟಿದ್ದಾರೆ. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಮಾಡಿದ್ದಾರೆ. ಈ ಮೊದಲು ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆ ಮಾತ್ರ ಇತ್ತು. ಅದನ್ನು ಬದಲಾವಣೆ ಮಾಡಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರವೇಶಾತಿ ಪಡೆಯುವಂತೆ ಮಾಡಿದ್ದಾರೆ.

ಪ್ರಸಕ್ತ ವರ್ಷದಿಂದಲೇ ಯುಕೆಜಿ, ಎಲ್‌ಕೆಜಿ ಪ್ರಾರಂಭ ಮಾಡಿದ್ದು, ಕಾರವಾರದ ಇಬ್ಬರು ಜನ ಶಿಕ್ಷಕಿಯರನ್ನು ಯುವಕರು ಸ್ವಂತ ಹಣದಲ್ಲಿ ಇಲ್ಲಿಗೆ ನಿಯೋಜನೆ ಮಾಡಿಸಿದ್ದಾರೆ. ಎಲ್.ಕೆಜಿ ಯು.ಕೆಜಿ ಸೇರಿ 60 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ದುರಸ್ತಿಗೆ ಅನುದಾನವಿಲ್ಲದೇ ಬಳಲುತ್ತಿದ್ದ ಈ ಸರ್ಕಾರಿ ಶಾಲೆಯಲ್ಲಿನ 16 ಕೊಠಡಿಗಳಲ್ಲಿ ಚಾವಣಿ ಉದುರಿ ಬೀಳುತ್ತಿತ್ತು. ಅದನ್ನು ಒಡೆದು ತೆಗೆದು ಹೊಸ ರೂಪ ನೀಡಿದ್ದಾರೆ. ಕಿಟಕಿ, ಬಾಗಿಲು ತೆಗೆದು ಬೇರೆ ಹಾಕಿದ್ದಾರೆ. ಗೋಡೆ ಸೀಳಿರುವುದನ್ನು ಗಿಲಾವ್ ಮೂಲಕ ಮುಚ್ಚಿದ್ದಾರೆ. ಶಾಲೆ ಹಲವಾರು ವರ್ಷದಿಂದ ಸುಣ್ಣ ಬಣ್ಣ ಕಂಡಿರಲಿಲ್ಲ. ಆ ಕೊರತೆ ನೀಗಿಸಿ ಕಂಗೊಳಿಸುವಂತೆ ಮಾಡಿದ್ದಾರೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ, ಶೌಚಾಲಯ ದುರಸ್ತಿ, ಸಿಸಿ ಟಿವಿ ಕ್ಯಾಮೆರಾ ಜೋಡಣೆ, ಮಕ್ಕಳಿಗೆ ಊಟಕ್ಕೆ ಪ್ರತ್ಯೇಕ ಪ್ಲೇಟ್ ನೀಡಿ ಏಕಕಾಲದಲ್ಲಿ ಎಲ್ಲ ಮಕ್ಕಳಿಗೆ ಊಟದ ವ್ಯವಸ್ಥೆ, ಕೈ ತೊಳೆದುಕೊಳ್ಳಲು ಪ್ರತ್ಯೆಕ ವ್ಯವಸ್ಥೆ ಮಾಡಿದ್ದಾರೆ.

1918ರಲ್ಲಿ ನಿರ್ಮಾಣವಾಗಿರುವ ಈ ಶಾಲೆಯನ್ನು ಗತವೈಭವಕ್ಕೆ ಮರಳುವಂತೆ ಮಾಡುವ ಜೊತೆಗೆ ಶಾಲೆಯ ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಹೆಚ್ಚಿದ ದಾಖಲಾತಿ:‌ ಈ ಹಿಂದೆ 150 ರಿಂದ 170 ವಿದ್ಯಾರ್ಥಿಗಳ ಹಾಜರಾತಿ ಮಾತ್ರ ಇರುತ್ತಿತ್ತು. ಶಾಲೆಯನ್ನು ಅಭಿವೃದ್ಧಿ ಮಾಡಿರುವುದರಿಂದ ಈಗಾಗಲೇ 200 ಕ್ಕೂ ವಿದ್ಯಾರ್ಥಿಗಳು ಹೆಸರು ಹಚ್ಚಿದ್ದಾರೆ.

ಆ ಶಾಲೆಯಲ್ಲಿ ಕಲಿತ ಹಲವಾರು ಜನರು ನೌಕರಿ ಮಾಡುತ್ತಿದ್ದಾರೆ. ಅವರನ್ನು ಸಂಪರ್ಕಿಸಿರುವ ಶಾಲಾ ಅಭಿವೃದ್ಧಿ ತಂಡ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೂ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ. ಗ್ರಾಮಸ್ಥರಿಂದ ಒಳ್ಳೆಯ ಸ್ಪಂದನೆ ದೊರೆತಿದೆ. ನಮ್ಮ ಹೆಸರು ಹೇಳಿ ಈ ಕಾರ್ಯವನ್ನು ಮಾಡುವುದಿಲ್ಲ ಎನ್ನುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು