ಬುಧವಾರ, ನವೆಂಬರ್ 20, 2019
21 °C

ನೂತನ ಸಕ್ಕರೆ ಕಾರ್ಖಾನೆ ಕಾರ್ಯಾರಂಭ

Published:
Updated:
Prajavani

ಬಾಗಲಕೋಟೆ: ‘ನೀರಾವರಿ, ಶಿಕ್ಷಣ, ಉದ್ಯಮ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಶತಮಾನದ ಹಿಂದೆ ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ್ದ ಸಾಧನೆಯನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಮುಧೋಳದ ನಿರಾಣಿ ಉದ್ಯಮ ಪರಿವಾರ ಮಾಡುತ್ತಿದೆ‘ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

ಬಾದಾಮಿ ತಾಲ್ಲೂಕಿನ ಎಸ್‌.ಕೆ.ಕಲ್ಲಾಪುರದಲ್ಲಿ ನಿರಾಣಿ ಉದ್ಯಮ ಸಮೂಹದಿಂದ ನಿರ್ಮಿಸಿರುವ ನೂತನ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಾಮಾನ್ಯ ರೈತಾಪಿ ಕುಟುಂಬದಿಂದ ಬಂದ ನಮಗೆ ಅಭಿವೃದ್ಧಿ ಕಾರ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸದಾ ಸ್ಫೂರ್ತಿ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ನಿರಾಣಿ ಪರಿವಾರ ಒಂದು ಹೆಜ್ಜೆ ಮುಂದೆ ಹೋಗಿ ಆರೋಗ್ಯ ಹಾಗೂ ವಿಮಾ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸುತ್ತಿದೆ ಎಂದರು.

ಸಕ್ಕರೆ ಕಾರ್ಖಾನೆಗಳು ತಮ್ಮ ಲಾಭಾಂಶದ ಶೇ 70ರಷ್ಟು ಭಾಗ ರೈತರಿಗೆ ಕೊಡಬೇಕು ಎಂದು ರಂಗರಾಜನ್ ವರದಿ ಹೇಳುತ್ತದೆ. ಆದರೆ ಬೆಳಗಾವಿ ವಿಭಾಗದ ಸಕ್ಕರೆ ಕಾರ್ಖಾನೆಗಳು ಇದನ್ನು ಈ ಮೊದಲೇ ಅನುಷ್ಠಾನಕ್ಕೆ ತಂದಿದ್ದು, ಲಾಭಾಂಶದ ಶೇ 80ರಷ್ಟನ್ನು ರೈತರಿಗೆ ಕೊಡುತ್ತಿವೆ ಎಂದರು.

ನಿರಾಣಿ ಉದ್ಯಮ ಸಮೂಹಗಳ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರಿಗೆ ₹25ರಿಂದ 50 ಸಾವಿರದವರೆಗೆ ಆರೋಗ್ಯ ವಿಮಾ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ರೈತರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಆರಂಭಿಸುವ ಯೋಜನೆಯೂ ಇದೆ ಎಂದರು.

‘₹108 ಕೋಟಿ ವೆಚ್ಚದಲ್ಲಿ ಮುಧೋಳ ಹಾಗೂ ಬೀಳಗಿ ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹೆರಕಲ್ ಏತ ನೀರಾವರಿ ಅಡಿ ಇನ್ನೂ ಅಣೆಕಟ್ಟೆಯ ಗೇಟ್‌ನ ಎತ್ತರವನ್ನು ಇನ್ನೂ 9 ಮೀಟರ್ ಎತ್ತರಕ್ಕೆ ಹೆಚ್ಚಿಸಲು ಅವಕಾಶವಿದೆ. ಅದು ಕಾರ್ಯಗತಗೊಂಡರೆ ಇನ್ನಷ್ಟು ಪ್ರದೇಶ ನೀರಾವರಿಗೆ ಒಳಪಡಲಿದೆ‘ ಎಂದರು. 

ನೂತನ ಸಕ್ಕರೆ ಕಾರ್ಖಾನೆ ಬಾಯ್ಲರ್ ಅಗ್ನಿ ಪ್ರದೀಪನ ಮತ್ತು ಕೇನ್ ಕ್ಯಾರಿಯರ್ ಪೂಜಾ ಸಮಾರಂಭಕ್ಕೆ ಸುತ್ತಲಿನ ಹಳ್ಳಿಗಳ ಸಾವಿರಾರು ರೈತರು ಸಾಕ್ಷಿಯಾದರು. ಶಿವಯೋಗ ಮಂದಿರದ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸದಸ್ಯ ಹೂವಪ್ಪ ರಾಠೋಡ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಪ್ರತಿಕ್ರಿಯಿಸಿ (+)