ಬಾದಾಮಿ: ‘ನಮ್ಮ ಸಂಬಳ ಸರಿಯಾಗಿ ಬಟವಡೆ ಆಗುತ್ತಿಲ್ಲ. ವಾಹನ ಭತ್ಯೆ ಕೊಡುತ್ತಿಲ್ಲ. ನೆರಳು, ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ಸೌಲಭ್ಯ ಇಲ್ಲ’ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.
ಗುಳೇದಗುಡ್ಡ ತಾಲ್ಲೂಕಿನ ಹಳದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳದೂರ ಗ್ರಾಮದ ಪುರುಷ ಮತ್ತು ಮಹಿಳಾ ಕೂಲಿ ಕಾರ್ಮಿಕರು ಕೆಂದೂರ ಗ್ರಾಮದ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿ ಬುಧವಾರ ಹೂಳು ತೆಗೆಯುವ ಕಾಮಗಾರಿ ಆರಂಭಿಸಿದ್ದು, ಈ ಸಂದರ್ಭದಲ್ಲಿ ಸೌಲಭ್ಯಗಳಿಲ್ಲದ ಬಗ್ಗೆ ದೂರಿದರು.
‘ಬಹಳ ದಿವಸದಿಂದ ಇಲ್ಲೇ ಕಾಮಗಾರಿಗೆ ಬರತೀವ್ರಿ. ಇಲ್ಲಿಗೆ ಬರಾಕ ವಾಹನ ಭತ್ಯೆ ಕೊಡೂದಿಲ್ಲ. ದಿನಗೂಲಿ ಮತ್ತು ವಾಹನ ಭತ್ಯೆ ಸೇರಿ ದಿನಕ್ಕ ₹ 210 ಕೊಡತಾರಿ. ಇದರಾಗ ದಿನಾ 30 ರೂಪಾಯಿ ಕೊಟ್ಟು ಟ್ರ್ಯಾಕ್ಟರ್‌ಗೆ ಬರತೀವರಿ. ನಮಗ ವಾಹನದ ಚಾರ್ಜ್ ಬ್ಯಾರೆ ಕೊಡಬೇಕು’ ಎಂದು ಕಾರ್ಮಿಕರು ಒತ್ತಾಯಿಸಿದರು.
‘ಮಣ್ಣಿದ್ದಲ್ಲೇ 10 ಅಡಿ ಅಗಲ 10 ಅಡಿ ಉದ್ದ ಒಂದು ಅಡಿ ಕೆಳಗ ತೆಗ್ಗ ತಗಿತೀವಿ. ಕಲ್ಲಗುಡ್ಡದಾಗ ಹಿಂಗ ಅಳತಿ ಕೊಟ್ಟರ ಹ್ಯಾಂಗ್ ತೆಗಿಬೇಕ್ರಿ ಕೆಲಸ ಸಾಗೂದಿಲ್ಲ. ಕಡಮಿ ಅಳತಿ ಹಚ್ಚತಾರ್ರೀ, ನಮಗ ಕಡಿಮಿ ಕೂಲಿ ಕೊಡತಾರ. ಏಂಜಿನಿಯರ್ ಅಳತಿ ಮಾಡಾಕ ಒಮ್ಮೀ ಇಲ್ಲೇ ಬಂದಿಲ್ಲ’ ಎಂದು ದೂರಿದರು.
ಒಬ್ಬರಿಗೆ ನೂರು ದಿನಗಳ ಕೂಲಿ ಕೊಡುವರು. ಮಳೆಯಾಗದ ಕಾರಣ ಎಲ್ಲಿಯೂ ಕೂಲಿ ಸಿಗದಂತಾಗಿದೆ. ಕೂಲಿ ದಿನಗಳನ್ನು ಹೆಚ್ಚಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
‘ಮಣ್ಣು ಅಗೆಯಲು ಉಪಯೋಗಮಾಡುತ್ತಿರುವ ಸಲಕಿ, ಗುದ್ದಲಿ ಹೆಣಸಾಕ ದಿನಕ್ಕ ₹ 10 ಕೊಡತಿದ್ದರು. ಈಗ ಅದನ್ನೂ ಕೊಡೂದಿಲ್ರಿ’ ಎಂದು ಕಾರ್ಮಿಕ ಹನುಮಪ್ಪ ಹೇಳಿದರು.
ಅಳತೆಯ ಪ್ರಕಾರ ಕೆಲಸವಾದರೆ ಪೂರ್ಣ ಸಂಬಳ ‘ಕೆಲಸದಂತೆ ದಿನಗೂಲಿ ಅವರ ಖಾತೆಗೆ ಜಮೆ ಆಗುತ್ತದೆ. ಕಡಿಮೆ ಕೆಲಸ ಮಾಡಿದಾಗ ಕಡಿಮೆ ಸಂಬಳ ದೊರೆಯುತ್ತದೆ. ಅಳತೆಯ ಪ್ರಕಾರ ಸರಿಯಾಗಿ ಕಾಮಗಾರಿ ಮಾಡಿದರೆ ದಿನಕ್ಕೆ ₹ 316 ಮತ್ತು ₹ 30 ಬಸ್ ಚಾರ್ಜ್ ಜಮೆ ಮಾಡುತ್ತೇವೆ’ ಎಂದು ಹಳದೂರ ಗ್ರಾಮ ಪಂಚಾಯಿತಿ ಪಿಡಿಒ ಮನೋಹರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಡಿಮೆ ಸಂಬಳ ಕೊಡಲು ಬರೋದಿಲ್ಲ. ಅವರ ಕೆಲಸದ ನಿಯಮದಂತೆ ಸಂಬಳ ಬಟಬಡೆ ಮಾಡುತ್ತೇವೆ. ಕಾರ್ಮಿಕರ ಖಾತೆಗೆ ಹಣ ಜಮೆ ಆಗುತ್ತದೆ. ಸಂಬಳ ಏನಾದರೂ ಕಡಿಮೆ ಜಮೆಯಾದರೆ ಕೂಲಿಕಾರರು ನನಗೆ ದೂರವಾಣಿ ಮೂಲಕ ಸಂಪರ್ಕಿಸಬಹುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಕಲಾದಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.