ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನವೂ ಇಲ್ಲ... ಸಿಬ್ಬಂದಿಯೂ ಇಲ್ಲ: ರಾಜ್ಯದ ಏಳು ವಿಶ್ವವಿದ್ಯಾಲಯಗಳ ಸ್ಥಿತಿ ಅತಂತ್ರ

Published 30 ಮೇ 2023, 23:30 IST
Last Updated 30 ಮೇ 2023, 23:30 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಆದರೆ, ಅನುದಾನ ಬಿಡುಗಡೆ ಮಾಡದೆ, ಮಾತೃ ವಿಶ್ವವಿದ್ಯಾಲಯದಿಂದ ಸಿಬ್ಬಂದಿ ವರ್ಗಾವಣೆ ಮಾಡದ್ದರಿಂದಾಗಿ ವಿ.ವಿ.ಗಳು ಅತಂತ್ರವಾಗಿವೆ.

2022–23ನೇ ಸಾಲಿನ ಬಜೆಟ್‌ನಲ್ಲಿ ಏಳು ವಿಶ್ವವಿದ್ಯಾಲಯಗಳ ಆರಂಭದ ಘೋಷಣೆ ಮಾಡಿದ್ದ ಬಿಜೆಪಿ ಸರ್ಕಾರವು, ಅಧಿಕಾರದ ಕೊನೆ ಗಳಿಗೆಯಲ್ಲಿ ಮಾರ್ಚ್‌ನಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಈಗಾಗಲೇ ಇದ್ದ ಸ್ನಾತಕೋತ್ತರ ಕೇಂದ್ರಗಳಲ್ಲಿಯೇ ವಿಶ್ವವಿದ್ಯಾಲಯ ಆರಂಭಿಸಿತು. ಆದರೆ, ಅನುದಾನ ಬಿಡುಗಡೆ ಮಾಡಲಿಲ್ಲ.

ಬೀದರ್‌, ಹಾವೇರಿ, ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ಮಾಡಲಾಗಿದೆ. ಅವುಗಳು ಮೂಲ ಸೌಲಭ್ಯಗಳಿಂದ ಬಳಲುತ್ತಿವೆ. ಮಾತೃ ವಿಶ್ವವಿದ್ಯಾಲಯದಿಂದ ಅವುಗಳನ್ನು ಬೇರ್ಪಡಿಸುವ ಆದೇಶ ಹೊರಡಿಸದ್ದರಿಂದ ಹಲವಾರು ತೊಂದರೆಗಳನ್ನು ಎದುರಿಸುತ್ತಿವೆ.

‘ತಂತ್ರಜ್ಞಾನ ಆಧಾರಿತ ವಿಶ್ವವಿದ್ಯಾಲಯ ಆಗಿರುವುದರಿಂದ ಹೆಚ್ಚಿನ ಸಿಬ್ಬಂದಿ ಬೇಕಾಗುವುದಿಲ್ಲ. ಮಾತೃ ವಿಶ್ವವಿದ್ಯಾಲಯದ ಸಿಬ್ಬಂದಿಯನ್ನೇ ಬಳಸಿಕೊಳ್ಳಬೇಕು’ ಎಂದು ಸೂಚಿಸಲಾಗಿತ್ತು. ಎಲ್ಲ ಮಾತೃ ವಿಶ್ವವಿದ್ಯಾಲಯದಿಂದ ಹೊಸ ವಿಶ್ವವಿದ್ಯಾಲಯಕ್ಕೆ ಹೋಗ ಬಯಸುವ ಬೋಧಕ, ಬೋಧಕೇತರ ನೌಕರರಿಂದ ಅರ್ಜಿಯನ್ನೂ ಪಡೆಯಲಾಯಿತು. ವರ್ಗಾವಣೆ ಮಾಡಲಿಲ್ಲ. ನಂತರ ಚುನಾವಣೆ ನೀತಿ ಸಂಹಿತೆಯಿಂದಾಗಿ ವರ್ಗಾವಣೆ ನನೆಗುದಿಗೆ ಬಿದ್ದಿತು.

ಸ್ನಾತಕೋತ್ತರ ಕೇಂದ್ರಗಳಲ್ಲಿಯೂ ಪೂರ್ಣ ಪ್ರಮಾಣದ ಬೋಧಕ, ಬೋಧಕೇತರ ಸಿಬ್ಬಂದಿ ಇಲ್ಲ. ಗುತ್ತಿಗೆ ಸಿಬ್ಬಂದಿ ಮೇಲೆಯೇ ನಡೆಸಲಾಗುತ್ತಿದೆ. ಜಮಖಂಡಿಯಲ್ಲಿ ಆರಂಭವಾಗಿರುವ ವಿಶ್ವವಿದ್ಯಾಲಯದಲ್ಲಿ ಈಗಿರುವ ವಿವಿಧ ವಿಷಯಗಳ ಸ್ನಾತಕೋತ್ತರ ಪದವಿಗೆ ಬೋಧಿಸಲು ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಈಗ ಮತ್ತಷ್ಟು ಹೊಸ ಕೋರ್ಸ್‌ಗಳನ್ನು ಆರಂಭಿಸಬೇಕಿದೆ. ಹೊಸ ಸಿಬ್ಬಂದಿ ನೇಮಕಕ್ಕೆ ನಿರ್ಬಂಧ ಹಾಕಿದ್ದರಿಂದ ಅತಿಥಿ ಸಿಬ್ಬಂದಿ ಮೇಲೆಯೇ ವಿಶ್ವವಿದ್ಯಾಲಯ ನಡೆಸಬೇಕಿದೆ. ಅದಕ್ಕೂ ಅನುದಾನ ಬೇಕಿದೆ.

ಪ್ರತಿ ವಿಶ್ವವಿದ್ಯಾಲಯಕ್ಕೆ ತಲಾ ₹2 ಕೋಟಿ ಅನುದಾನ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ಇಂದಿನವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಹಿಂದಿನ ವರ್ಷ ಕಾಲೇಜುಗಳ ಸಂಯೋಜನೆ, ಪ್ರವೇಶ ಶುಲ್ಕ ಎಲ್ಲವನ್ನೂ ಮಾತೃ ವಿಶ್ವವಿದ್ಯಾಲಯವೇ ನಿರ್ವಹಿಸಿರುವುದರಿಂದ ಯಾವುದೇ ಮೊತ್ತವೂ ಇಲ್ಲ. ನಿತ್ಯದ ಖರ್ಚುಗಳ ನಿರ್ವಹಣೆಗೂ ಪರದಾಡಬೇಕಿದೆ.

ಸ್ನಾತಕೋತ್ತರ ಕೇಂದ್ರಗಳಲ್ಲಿಯೇ ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿರುವುದರಿಂದ ಹೊಸದಾಗಿ ಆರಂಭಿಸುವ ಹತ್ತಾರು ಕೋರ್ಸ್‌ಗಳಿಗೆ ಕೊಠಡಿಗಳ ಕೊರತೆ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್‌, ಓದಲು ಗ್ರಂಥಾಲಯ, ಅದಕ್ಕೆ ಬೇಕಾದ ಪುಸ್ತಕಗಳ ಖರೀದಿ ಸೇರಿದಂತೆ ಹಲವು ವೆಚ್ಚಗಳನ್ನು ನಿಭಾಯಿಸಬೇಕಾದ ಸವಾಲು ಹೊಸ ವಿಶ್ವವಿದ್ಯಾಲಯಗಳ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT