ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್: ಮನೆ, ನಿವೇಶನ ಇನ್ನೂ ಗಗನಕುಸುಮ

ಸ್ವಂತ ಸೂರಿಗೆ ಚಾತಕ ‍ಪಕ್ಷಿಗಳಂತೆ ಕಾಯುತ್ತಿದ್ದಾರೆ ವಸತಿ ರಹಿತರು
Last Updated 9 ನವೆಂಬರ್ 2020, 9:14 IST
ಅಕ್ಷರ ಗಾತ್ರ

ಇಳಕಲ್: ನಗರದಲ್ಲಿ ವಸತಿ ಯೋಜನೆ ಗಳು, ಇಲ್ಲಿನ ಮತರಾಜಕಾರಣ, ರಾಜಕೀಯ ಮೇಲಾಟ, ಆರೋಪ ಪ್ರತ್ಯಾ ರೋಪಗಳ ಪರಿಣಾಮ ಬಹುದಿನಗಳಿಂದ ನನೆಗುದಿಗೆ ಬಿದ್ದಿವೆ. ಬಡವರು, ಆಸರೆ ರಹಿತರು ಮಾತ್ರ ಮುಗಿಲು ನೋಡುತ್ತಾ ಕುಳಿತಿದ್ದಾರೆ.

ನಗರದಲ್ಲಿ ಸುಮಾರು 4,600 ಸೂರು ರಹಿತ ಕುಟುಂಬಗಳಿವೆ ಎಂದು ಮೂರು ವರ್ಷಗಳ ಹಿಂದೆ ನಗರಸಭೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಕಳೆದ 15 ವರ್ಷಗಳಲ್ಲಿ ಕಂದಗಲ್‍ ರಸ್ತೆಯ 360 ಮನೆಗಳ ನೇಕಾರ ಕಾಲೊನಿ ಹಾಗೂ ಹೆದ್ದಾರಿ ಪಕ್ಕದ 500 ಮನೆಗಳ ಆಸರೆ ಕಾಲೊನಿ ಹೊರತುಪಡಿಸಿ ಇಲ್ಲಿಯವರೆಗೆ ಯಾವೊಂದು ವಸತಿ ಯೋಜನೆಯೂ ಸಮರ್ಪಕವಾಗಿ ಜಾರಿಗೊಂಡಿಲ್ಲ

ಪೂರ್ಣಗೊಳ್ಳದ ಮನೆಗಳು : ವಿಜಯ ಮಹಾಂತೇಶ ಕರ್ತೃ ಗದ್ದುಗೆ ಹಿಂಭಾಗದ ನಿಯೋಜಿತ ಆಶ್ರಯ ಕಾಲೊನಿಗೆ ನಿವೇಶನ ಖರೀದಿ ಮಾಡಿ 16 ವರ್ಷ ಗಳೇ ಸಂದಿವೆ. ಮೂರು ವರ್ಷಗಳ ಹಿಂದೆ 280 ಫಲಾನುಭವಿಗಳನ್ನು ಗುರುತಿಸಿ, ಅವರಿಂದ ₹30 ಸಾವಿರ ಹಣ ಕಟ್ಟಿಸಿಕೊಂಡು, ಅಟಲ್ ವಸತಿ ಯೋಜನೆಯಡಿ ಮನೆಗಳನ್ನು ಮಂ ಜೂರು ಮಾಡಲಾಗಿತ್ತು. ಮನೆಗಳ ನಿರ್ಮಾಣ ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಅವರು ಗುತ್ತಿಗೆದಾರ ರೊಬ್ಬರ ನಿಯೋಜಿಸಿದ್ದರು. ಕಟ್ಟುತ್ತಿದ್ದ ಮನೆಗಳಿಗೆ ಪಾಯವೇ ಇಲ್ಲ, ತೀರಾ ಕಳಪೆ ಯಾಗಿವೆ ಎಂಬ ದೂರು ಕೇಳಿ ಬಂದವು.

ಶಾಸಕ ದೊಡ್ಡನಗೌಡ ಪಾಟೀಲ 2018 ಜುಲೈ ತಿಂಗಳಲ್ಲಿ ಸ್ಥಳಕ್ಕೆ ಭೇಟಿ ಪರಿ ಶೀಲಿಸಿದರು. ಕಾಲೊನಿಯ ನೀಲನಕ್ಷೆಯೇ ತಯಾರಿಲ್ಲ, ಫಲಾನುಭವಿಗಳಿಗೆ ತಮ್ಮ ನಿವೇಶನ ಯಾವುದು ಎಂಬುದೇ ತಿಳಿ ದಿಲ್ಲ. ಈಗಾಗಲೇ ಕಟ್ಟಲಾಗುತ್ತಿರುವ 75 ಮನೆಗಳಿಗೆ ಹಾಕಲಾದ ತಳಪಾಯದ ಬೀಮ್ ಸುತ್ತಲು ನೆಲಮಟ್ಟದದಿಂದ 3 ಅಡಿ ಅಡಿಪಾಯ ಹಾಕಬೇಕು. ಮುಂದೆ ಕಟ್ಟಲಿರುವ ಮನೆಗಳಿಗೆ 3 ಅಡಿ ಪಾಯ ಹಾಕಿ, ಕಾಂಕ್ರೀಟ್‍ನ ಬೀಮ್‍ ಹಾಕಬೇಕು. ನೇಕಾರರ ಅಗತ್ಯಕ್ಕೆ ತಕ್ಕಂತೆ ಮನೆಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು. ಮನೆಗಳಿಗೆ ವಿದ್ಯುದೀಕರಣ ಮಾಡಿಕೊಡಬೇಕು ಹಾಗೂ ಐದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ, ಗುತ್ತಿಗೆದಾರನಿಗೆ ತಾಕೀತು ಮಾಡಿದರು.

ಗುತ್ತಿಗೆದಾರ ಕೆಲಸ ನಿಲ್ಲಿಸಿ, ಹೊರಟುಹೋದರು. ಕಳಪೆಯಾಗಿರುವ ಅಪೂರ್ಣ ಮನೆಗಳು ಒಂದೊಂದಾಗಿ ನೆಲಕ್ಕುರುಳುತ್ತಿವೆ. ಫಲಾನುಭವಿಗಳು ತಗಡಿನ ತಾತ್ಕಾಲಿಕ ಶೆಡ್‌ಗಳಲ್ಲಿ ಸೆಖೆ, ಚಳಿಯಲ್ಲಿ ಬಸವಳಿದಿದ್ದಾರೆ. ಕ್ರಿಮಿಕೀಟಗಳ ಭಯದಲ್ಲಿ ಕಾಲ ತಳ್ಳುತ್ತಿದ್ದಾರೆ. ಆಗ ಘೋಷಣೆಯಾದ ವಿಧಾನಸಭೆ ಚುನಾವಣೆ ಹಾಗೂ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‍ ಮುಖಂಡರು ಸೂರು ಒದಗಿಸುವ ಭರವಸೆ ನೀಡಿದರು. ಸಾಕಷ್ಟು ಆರೋಪ, ಪ್ರತ್ಯಾರೋಪಗಳು ನಡೆದವು. ಫಲಾನುಭವಿಗಳು ಮನವಿ ಸಲ್ಲಿಸಿ, ಬೀದಿಗಿಳಿದು ಹೋರಾಟ ಮಾಡಿದರು. ನಂತರ ಎಲ್ಲರೂ ಮರೆತರು.

ನೆನೆಗುದಿಗೆ ಬಿದ್ದಿದೆ 4,500 ಮನೆಗಳ ಯೋಜನೆ: 2018ರಲ್ಲಿ ಕಂದಗಲ್‍ ರಸ್ತೆಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ 42 ಎಕರೆ ಜಮೀನು ಖರೀದಿಸಲಾಯಿತು. ಇಲ್ಲಿ ‘ಜಿ+2’ ಮಾದರಿಯಲ್ಲಿ ಬಡವರಿಗಾಗಿ 4,500 ಮನೆಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಯಿತು. ನಿರ್ಮಿತಿ ಕೇಂದ್ರಕ್ಕೆ 1,560 ನಿವೇಶನಗಳ ಲೇಔಟ್‍ ಕಾಮಗಾರಿ ವಹಿಸಲಾಯಿತು.

ಮೊದಲ ಹಂತವಾಗಿ 1,560 ಫಲಾನುಭವಿಗಳ ಪಟ್ಟಿ ಕೂಡಾ ತಯಾರಿಸಿ ಹಕ್ಕುಪತ್ರ ಕೂಡಾ ಕೊಡಲಾಗಿದೆ.

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ಯೋಜನೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಅಧಿಕೃತವಲ್ಲದ ಕಾಗದವೊಂದನ್ನು ಹಕ್ಕುಪತ್ರ ಎಂದು ನೀಡಿರುವುದು ಬಡವರ ಮೂಗಿಗೆ ತುಪ್ಪ ಸವರುವ ಯತ್ನ ಎಂದು ಬಿಜೆಪಿ ಆರೋಪಿಸಿತು. ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಶಾಸಕರು ಈಗಲಾದರೂ ಈ ಯೋಜನೆಯನ್ನು ಜಾರಿಗೊಳಿಸ ಬೇಕಿತ್ತಲ್ಲ, ಏಕೆ ಇನ್ನೂ ಅನುಷ್ಠಾನಗೊ ಳಿಸುತ್ತಿಲ್ಲ ? ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಾರೆ. ಪಕ್ಷ ರಾಜಕಾರಣ ಹಾಗೂ ಮತಗಳಿಕೆಯ ಹುಸಿ ಭರವಸೆ ನಡುವೆ ಸಿಲುಕಿರುವ ಬಡವರಿಗೆ ಮನೆ ಹೊಂದುವ ಕನಸು ನನಸಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ.

ಗಗನಕ್ಕೇರಿವೆ ನಿವೇಶನ ಬೆಲೆ: ಜಿಲ್ಲೆಯ ಬಹುತೇಕ ನಗರ ಪ್ರದೇಶಗಳ ಸುತ್ತಮುತ್ತಲ ಜಮೀನಿನಲ್ಲಿ ನೂರಾರು ಲೇಔಟ್‌ಗಳು ತಲೆ ಎತ್ತಿವೆ. ಬಹಳಷ್ಟು ಲೇಔಟ್‍ಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಕೆಲವರು ಲೇಔಟ್‍ ಮಾಡಿ ಹತ್ತಾರು ವರ್ಷವಾದರೂ ನಿವೇಶನಗಳ ಮಾರಾಟಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT