ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 12–4–1968

Last Updated 11 ಏಪ್ರಿಲ್ 2018, 20:07 IST
ಅಕ್ಷರ ಗಾತ್ರ

ಮುಖ್ಯಮಂತ್ರಿ, ಸಚಿವರೊಬ್ಬರ ವಿರುದ್ಧ ಹಕ್ಕುಲೋಪ ಪ್ರಶ್ನೆ

ಬೆಂಗಳೂರು, ಏ. 11– ಮುಖ್ಯಮಂತ್ರಿಯಾಗಿ ಮುಂದುವರಿಯುವುದರ ಸಂಬಂಧದಲ್ಲಿ ಶ್ರೀ ನಿಜಲಿಂಗಪ್ಪನವರು ನಿನ್ನೆ ಮುಂಬೈಯಲ್ಲಿ ಮಾಡಿದರೆನ್ನಲಾದ ‘ದ್ವಂದ್ವ ಭಾಷಣ’. ನಗರದ ‘ರಾಮಪ್ರಿಯ’ ಭವನವನ್ನು ಕೊಳ್ಳುವ ಸಂಬಂಧದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರು ‘ವಾಸ್ತವಾಂಶಗಳನ್ನು ಮುಚ್ಚಿಟ್ಟು’ ಮಾಡಿದ ಹೇಳಿಕೆ.

ಈ ಹೇಳಿಕೆಗಳಿಂದ ವ್ಯಗ್ರರಾದ ವಿರೋಧಪಕ್ಷಗಳ ಸದಸ್ಯರು ಇಂದು ವಿಧಾನಸಭೆಯಲ್ಲಿ ಈ ಇಬ್ಬರ ವಿರುದ್ಧವೂ ಹಕ್ಕುಲೋಪ ಸೂಚನೆಗಳನ್ನು ಮಂಡಿಸಲು ಪ್ರಯತ್ನಿಸಿದರು.

ಒಂದಾದ ಮೇಲೆ ಒಂದರಂತೆ, ಇಬ್ಬರು ಜನತಾ ಪಕ್ಷದ ಸದಸ್ಯರು ಸಭೆಯ ಮುಂದೆ ತಂದ ಸೂಚನೆಗಳನ್ನು, ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸುವ ಸಂಬಂಧದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ನಡೆದ ಬಿಸಿ ಚರ್ಚೆಯ ಬಳಿಕ ಉಪಾಧ್ಯಕ್ಷ ಶ್ರೀ ಡಿ. ಮಂಜುನಾಥ್ ಅವರು ಪರಿಶೀಲನೆಯನ್ನು ಸೋಮವಾರಕ್ಕೆ ಮುಂದಕ್ಕೆ ಹಾಕಿದರು.

ಎಸ್ಸೆನ್ ಮುಂಬೈ ಹೇಳಿಕೆ: ದೆಹಲಿಯಲ್ಲಿ ಕಿರಿಕಿರಿ

ನವದೆಹಲಿ, ಏ. 11– ತಾವು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬುದೇ ಮೈಸೂರಿನ ಜನಾಭಿಪ್ರಾಯವೆಂದೂ ಇನ್ನು ಆರು ವಾರಗಳಲ್ಲಿ ತಾವು ಒಂದು ನಿರ್ಧಾರಕ್ಕೆ ಬರುವುದಾಗಿಯೂ ಶ್ರೀ ನಿಜಲಿಂಗಪ್ಪನವರು ನಿನ್ನೆ ಮುಂಬಯಿಯಲ್ಲಿ ಹೇಳಿದರೆಂಬ ವರದಿ ಇಲ್ಲಿ ಕಾಂಗ್ರೆಸ್ ವಲಯಗಳಲ್ಲಿ ಕಿರಿಕಿರಿ ಮತ್ತು ದಿಗ್ಭ್ರಮೆಗೆ ಎಡೆಕೊಟ್ಟಿದೆ.

ರಾಷ್ಟ್ರಧ್ವಜವೇ ಅಕ್ಕಿ ತರುವ ಕೈಚೀಲ

ಮಂಗಳೂರು, ಏ. 11– ರಾಷ್ಟ್ರಧ್ವಜವನ್ನು ಕೈಚೀಲವಾಗಿ ಹೊಲಿಸಿ ‘ಅಕ್ಕಿ ತರಲು ಉಪಯೋಗಿಸಿದ’ ಪ್ರಕರಣ ಒಂದನ್ನು ಕಮ್ಯುನಿಸ್ಟ್ (ಬಲ) ಸದಸ್ಯ ಶ್ರೀ ವಿ.ಎನ್. ಪಾಟೀಲರು ಇಂದು ವಿಧಾನಸಭೆಯಲ್ಲಿ ಎತ್ತಿದಾಗ ಸಭೆ ಚಕಿತಗೊಂಡಿತು.

ರಾಷ್ಟ್ರಧ್ವಜದಿಂದ ಮಾಡಲಾಗಿದ್ದ, ಹಿಡಿ ಇದ್ದ ಚೀಲವನ್ನು ಶ್ರೀ ಪಾಟೀಲರು ಸಭೆಯಲ್ಲಿ ಪ್ರದರ್ಶಿಸಿದರು.

‘ನಾಲ್ಕು ನೂರು ರೂ. ಸಂಬಳ ಬರುವ ಅಧಿಕಾರಿಯೊಬ್ಬರು ಅಕ್ಕಿತರಲು ತಮ್ಮ ಆಳಿಗೆ ಕೊಟ್ಟಿದ್ದ’ ಚೀಲ ಇದೆಂದು ಹೇಳಿ ಶ್ರೀ ಪಾಟೀಲರು, ಸಹಿಸಲಾರದೆ ಆಳಿನಿಂದ ತಾವು ಕಿತ್ತುಕೊಂಡುದಾಗಿ ತಿಳಿಸಿದರು.

ಅಶ್ಲೀಲದ ವಿರುದ್ಧ ಬಿಗಿಯಾದ ಶಾಸನಕ್ಕೆ ಲೋಕಸಭೆ ಒತ್ತಾಯ

ನವದೆಹಲಿ, ಏ. 11– ಅಶ್ಲೀಲದ ವಿರುದ್ಧ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಕೆಲವು ಸದಸ್ಯರು ಇಂದು ಒತ್ತಾಯ ಮಾಡಿದರು.

ಪಾನನಿರೋಧ ರದ್ದು ಸುಮಾರು ಎಂಟು ಕೋಟಿ ರೂಪಾಯಿ ವರಮಾನ

ಬೆಂಗಳೂರು, ಏ. 11– ಪಾನ ನಿರೋಧವನ್ನು ಸಡಿಲಗೊಳಿಸುವುದರಿಂದ 14 ತಿಂಗಳಿಗೆ ಬಾಡಿಗೆ, ತೆರಿಗೆ ಮತ್ತು ಲೈಸೆನ್ಸ್ ಶುಲ್ಕ ಇತ್ಯಾದಿಗಳಿಂದ ಬೊಕ್ಕಸಕ್ಕೆ ಸುಮಾರು ಏಳೂ ಮುಕ್ಕಾಲು ಕೋಟಿ ರೂ.ಗಳ ವರಮಾನ ಬಂದಿದೆ.

ಸ್ವೀಕರ್ ಬಾಳಿಗ ಅವರಿಗೆ ಶಸ್ತ್ರಚಿಕಿತ್ಸೆ

ಮದ್ರಾಸ್, ಏ. 11– ಮೈಸೂರು ವಿಧಾನಸಭೆ ಅಧ್ಯಕ್ಷ ಶ್ರೀ ಬಿ. ವೈಕುಂಠ ಬಾಳಿಗ ಅವರಿಗೆ ಇಂದು ಬೆಳಿಗ್ಗೆ ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ನ್ಯೂರೊ ಸರ್ಜನ್ ಡಾ. ಬಿ. ರಾಮಮೂರ್ತಿ ಅವರು ಮಿದುಳಿನ ದುರ್ಮಾಂಸದ (ಟ್ಯೂಮರ್) ಶಸ್ತ್ರ ಚಿಕಿತ್ಸೆ ನಡೆಸಿದರು. ಅವರ ಆರೋಗ್ಯ ಪರಿಸ್ಥಿತಿ ತೃಪ್ತಿಕರವಾಗಿದೆ.

ವರ್ಣಭೇದ ಕುರಿತ ಚಿತ್ರಕ್ಕೆ ಐದು ಆಸ್ಕರ್ ಪ್ರಶಸ್ತಿ

ಸಂತಮೋನಿಕಾ (ಕ್ಯಾಲಿಫೋರ್ನಿಯಾ), ಏ. 11– ‘ಇನ್ ದಿ ಹೀತ್ ಆಫ್ ದಿ ನೈಟ್’ ಹೃದಯಂಗಮ ಚಲನಚಿತ್ರ ಐದು ಆಸ್ಕರ್ ಪ್ರಶಸ್ತಿಗಳನ್ನು ಪಡೆಯಿತು.

ವರ್ಣಭೇದ ವಿರುದ್ಧ ಹೋರಾಟ ಅದರ ಕಥಾವಸ್ತು.

ಇದರಲ್ಲಿ ಬಿಳಿಯ ಪೋಲೀಸನ ಪಾತ್ರ ವಹಿಸಿದ ರಾತ್ ಸ್ಟೈಗರ್ ಪ್ರಶಸ್ತಿ ಸ್ವೀಕರಿಸುತ್ತಾ  ‘ವರ್ಣ ವೈಷಮ್ಯದ ಇಂಗಿತ ಅರಿಯಲು ಈ ಚಿತ್ರ ಸಹಾಯಕವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT