ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಬಳ್ಳಿ ಶೇಂಗಾ ಬಿತ್ತನೆಗೆ ರೈತರ ಸಿದ್ಧತೆ

Last Updated 22 ಮೇ 2018, 11:18 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ಮಸಾರಿ ಭೂಮಿಯಲ್ಲಿ ಮುಂಗಾರಿನಲ್ಲಿ ಬಳ್ಳಿ ಶೇಂಗಾ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ರೋಹಿಣಿ ಮಳೆ ಆರಂಭ ಆಗುತ್ತಿದ್ದಂತೆ ಬಿತ್ತನೆ ನಡೆಯುತ್ತದೆ. ಅದಕ್ಕಾಗಿ ರೈತರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ರೋಹಿಣಿ ಮಳಿಗೆ ಶೇಂಗಾ ಬಿತ್ತಿದರ ಓಣಿ ತುಂಬಾ ಕಾಳು’ ಎಂಬ ನಾಣ್ಣುಡಿ ಈ ಭಾಗದಲ್ಲಿ ಜನಪ್ರಿಯ.

ಗ್ರಾಮೀಣ ಪ್ರದೇಶಗಳಲ್ಲಿ ಶೇಂಗಾ ಒಡೆದು ಬೀಜ ಸಂಗ್ರಹಿಸುವ ಕೆಲಸ ಭರದಿಂದ ನಡೆದಿದೆ. ಸರ್ಕಾರ ಬೀಜ ವಿತರಿಸುವ ಪೂರ್ವದಲ್ಲಿ ರೈತರೇ ಎಲ್ಲ ರೀತಿಯ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ, ಬೀಜ ನಿಗಮ ಅಸ್ತಿತ್ವಕ್ಕೆ ಬಂದ ನಂತರ ಬೀಜ ಸಂಗ್ರಹಣೆಯಿಂದ ರೈತರು ದೂರ ಸರಿದಿದ್ದಾರೆ. ಬಳ್ಳಿ ಶೇಂಗಾದ ಬೀಜವನ್ನು ಮಾತ್ರ ಈಗಲೂ ರೈತರೇ ಸಿದ್ಧ ಮಾಡಿಕೊಳ್ಳುತ್ತಾರೆ. ಈ ವರ್ಷವೂ ಶೇಂಗಾ ಕಾಯಿ ಒಡೆಯುವ ಸುಗ್ಗಿ ತಾಲ್ಲೂಕಿನಾದ್ಯಂತ ಆರಂಭವಾಗಿರುವುದು ಕಂಡು ಬರುತ್ತಿದೆ.‌

‘ಕಾಯಿ ಒಡೆದು ಒಂದು ಪಡಿ ಕಾಳು ಮಾಡಿದರ 25 ರೂಪಾಯಿ ಕೊಡ್ತಾರ್ರೀ. ಹಿಂಗಾಗಿ ನಾವು ದಿನಾ ಶೇಂಗಾ ಒಡ್ಯಾಕತ್ತೇವಿ. ಕಾಯಿ ಗಟ್ಟಿ ಇದ್ರ ಕಾಳು ಭಾಳ ಆಗಂಗಿಲ್ಲ. ಅಲ್ಲದ ಗಟ್ಟಿ ಶೇಂಗಾ ಒಡದರ ಬಳ್ಳು ನೋವು ಅಕ್ಕಾವು’ ಎಂದು ಗ್ರಾಮದ ಮಹಿಳೆ ಸೀತವ್ವ ಹೇಳುತ್ತಾರೆ.‌

‘ಮದ್ಲ ಒಂದು ಪಡಿ ಶೇಂಗಾ ಒಡದರ ₹5 ರಿಂದ ₹10 ರೂಪಾಯಿ ಕೊಡ್ತಿದ್ವಿ. ಆದರ ಈಗ ಶೇಂಗಾ ಒಡ್ಯಾಕ ಭಾಳ ಬೇಡಿಕೆ ಬಂದೈತಿ. ಅಲ್ಲದ ಕಾಯಿ ಒಡ್ಯಾಕ ಮಂದೀನೂ ಬರಂಗಿಲ್ಲ. ಹಿಂಗಾಗಿ ಬಹಳಷ್ಟು ರೈತರು ಮಷಿನ್‌ ಹಾಕಸ್ತಾರ’ ಎಂದು ಗೋವನಾಳ ಗ್ರಾಮದ ಭರಮಣ್ಣ ರೊಟ್ಟಿಗವಾಡ ಹಾಗೂ ಚಂದ್ರ ತಳವಾರ ಹೇಳಿದರು.

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT