ಶುಕ್ರವಾರ, ಡಿಸೆಂಬರ್ 6, 2019
19 °C
5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಧಾರಣೆ

ಬಾಗಲಕೋಟೆ ಎಪಿಎಂಸಿ: ಈರುಳ್ಳಿ; ‘ಕಣ್ಣೀರ’ ಕಥನದ ಆರಂಭವೇ?

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಭಾರಿ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದಾರೆ. (ಜಿಲ್ಲೆಯಲ್ಲಿ ಈ ಬಾರಿ 20,380 ಹೆಕ್ಟೇರ್ ಬಿತ್ತನೆ) ನಿಧಾನವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಆವಕ ಕೂಡ ಹೆಚ್ಚಾಗುತ್ತಿದೆ. ಆದರೆ ಕಳೆದೊಂದು ವಾರದ ಧಾರಣೆ ಗಮನಿಸಿದರೆ ಬೆಳೆಗಾರರಲ್ಲಿ ’ಕಣ್ಣೀರು’ ತರಿಸುವ ಮುನ್ಸೂಚನೆ ಕಾಣುತ್ತಿದೆ.

ಇದಕ್ಕೆ ಪೂರಕವಾಗಿ ಬಾಗಲಕೋಟೆ ಮಾರುಕಟ್ಟೆಗೆ ಸೆಪ್ಟೆಂಬರ್ 21ರಿಂದ 27ರವರೆಗೆ 3213 ಕ್ವಿಂಟಲ್ ಈರುಳ್ಳಿ ಆವಕಗೊಂಡಿದ್ದು, ಕ್ವಿಂಟಲ್‌ಗೆ ಕನಿಷ್ಠ ₹00ರಿಂದ ಗರಿಷ್ಠ ₹1000ದವರೆಗೆ ಬೆಲೆ ದೊರೆತಿದೆ. ಆ ಮೂಲಕ ಧಾರಣೆ ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಎನಿಸಿದೆ. 

ಹುಬ್ಬಳ್ಳಿ, ಗದಗ, ವಿಜಯಪುರ ಬಿಟ್ಟರೆ ಬಾಗಲಕೋಟೆ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಎನಿಸಿದೆ. ತೆಲಗಿ, ಭೀಮಾ ಗೋಲ್ಡ್ ಹೆಸರಿನ ತಳಿಯನ್ನು ಈ ಭಾಗದ ರೈತರು ಹೆಚ್ಚು ಬೆಳೆಯುತ್ತಾರೆ.

ಹಳೆಯ ಮಾಲು ಇನ್ನೂ ಇದೆ

’ಬೇಸಿಗೆಯಲ್ಲಿ ಈರುಳ್ಳಿ ಬೆಳೆದ ರೈತರು ಇನ್ನೂ ಸಂಗ್ರಹಿಸಿಟ್ಟಿದ್ದಾರೆ. ಜೊತೆಗೆ ಕೊಲ್ಹಾರ, ಬಸವನಬಾಗೇವಾಡಿ, ವಿಜಯಪುರದಲ್ಲಿ ಈರುಳ್ಳಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿಡುವ ಘಟಕಗಳು ತಲೆ ಎತ್ತಿವೆ. ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿ ರೈತರು ಹಳೆಯ ಈರುಳ್ಳಿಯನ್ನೇ ಮಾರಾಟ ಮಾಡಿಲ್ಲ. ಇನ್ನೂ ಶೇಖರಿಸಿ ಇಟ್ಟಿದ್ದಾರೆ. ಈಗ ಹೊಸ ಫಸಲು ಶುರುವಾಗಿದೆ. ಹಾಗಾಗಿ ಬೆಲೆ ಕುಸಿದಿದೆ’ ಎಂದು ಬಾಗಲಕೋಟೆ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ.ಮುಕ್ತೇದಾರ ಹೇಳುತ್ತಾರೆ.

ದೀಪಾವಳಿಗೆ ಆಶಾದಾಯಕ ಸ್ಥಿತಿ?

ಮಹಾರಾಷ್ಟ್ರದಲ್ಲಿ ಫೆಬ್ರುವರಿಯಿಂದ ಹಂಗಾಮು ಆರಂಭವಾಗುತ್ತದೆ. ಈಗಲೂ ಅಲ್ಲಿರುವ ಹಳೆಯ ಮಾಲು ಇಲ್ಲಿಗೆ ಬರುತ್ತಿದೆ.  ಅದು ಕಡಿಮೆಯಾಗುತ್ತಿದ್ದಂತೆಯೇ ಇಲ್ಲಿ ಬೆಲೆ ಏರಿಕೆಯಾಗಲಿದೆ. ಜೊತೆಗೆ ಸರ್ಕಾರ ರಫ್ತು ಮಾಡಲು ಅನುಮತಿ ನೀಡಬೇಕು. ರಫ್ತು ಆರಂಭವಾದರೆ ಬೆಲೆ ಏರುತ್ತದೆ. ದೀಪಾವಳಿ ವೇಳೆಗೆ ಬೆಲೆ ಹೆಚ್ಚಳವಾಗಬಹುದು ಎನ್ನುವ ಮುಕ್ತೇದಾರ, ಬಾಗಲಕೋಟೆ ಮಾರುಕಟ್ಟೆಯಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾಗೆ ಈರುಳ್ಳಿ ಕಳುಹಿಸುವುದಾಗಿ ಹೇಳುತ್ತಾರೆ.

ಸರ್ಕಾರದ ಮಟ್ಟದಲ್ಲಿ ತೀರ್ಮಾನ

’ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆ ನಮಗೂ ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಸವಿವರವಾಗಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಆ ನಿಟ್ಟಿನಲ್ಲಿ ಬೆಳೆ ಪ್ರಮಾಣ, ಮಾರುಕಟ್ಟೆಗೆ ಆವಕ–ಖರೀದಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಬೆಂಬಲ ಬೆಲೆಯಲ್ಲಿ ಖರೀದಿಸಿ ರೈತರಿಗೆ ನೆರವಿಗೆ ಬರುವ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲಾಗುತ್ತದೆ’ ಎಂದು ಬಾಗಲಕೋಟೆ ಎಪಿಎಂಸಿ ಕಾರ್ಯದರ್ಶಿ ಶಂಕರ ಎನ್.ಪತ್ತಾರ ಹೇಳುತ್ತಾರೆ.

’ಈ ಬಾರಿ ಬಾಗಲಕೋಟೆ ಸೇರಿದಂತೆ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈಗ ಬೆಂಬಲ ಬೆಲೆ ಕೊಟ್ಟು ಈರುಳ್ಳಿ ಖರೀದಿಸಿ ಎಂದರೆ, ಬರಗಾಲದಲ್ಲಿ ಬೆಳೆ ಎಲ್ಲಿಂದ ಬಂತು ಎಂದು ಕೇಂದ್ರ ಸರ್ಕಾರ ಕೇಳುತ್ತದೆ. ಕಾನೂನಾತ್ಮಕ ತೊಡಕು ಇಲ್ಲಿ ಉದ್ಭವಿಸುತ್ತದೆ. ಇದು ನಮಗೂ ಧರ್ಮಸಂಕಟ. ಆದರೂ ರೈತರ ಪರ ವರದಿ ನೀಡುತ್ತೇವೆ’ ಎಂಬುದು ಅಧಿಕಾರಿಯೊಬ್ಬರ ಅಭಿಮತ.

ಐದು ವರ್ಷಗಳಲ್ಲಿ ಬಾಗಲಕೋಟೆ ಎಪಿಎಂಸಿಗೆ ಈರುಳ್ಳಿ ಆವಕ–ಧಾರಣೆಯ ವಿವರ..

ಸೆಪ್ಟೆಂಬರ್ 21ರಿಂದ 27ರ ಅವಧಿ

ವರ್ಷ           ಪ್ರಮಾಣ (ಕ್ವಿಂಟಲ್)           ಕನಿಷ್ಠ–ಗರಿಷ್ಠ

2013               4140                       500–3500

2014              5354                        100–1550

2015             4918                          500–3200

2016  ಆವಕ ಇರಲಿಲ್ಲ

2017           3489                          250–2000

2018           3213                           300–1000

ಪೂರಕ ಮಾಹಿತಿ: ಕೃಷಿ ಮಾರಾಟ ವಾಹಿನಿ

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು