ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಸೀಮಿತವಾದ ಉದ್ಘಾಟನೆ ಕಾರ್ಯಕ್ರಮ

Last Updated 3 ಫೆಬ್ರುವರಿ 2018, 8:28 IST
ಅಕ್ಷರ ಗಾತ್ರ

ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆಯಲ್ಲಿ ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಜಿಲ್ಲಾ ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ರಾತ್ರಿ 7.30ರ ಸುಮಾರಿಗೆ ಆರಂಭಗೊಂಡಿತು. ಮೈದಾನದಲ್ಲಿ ಸಾರ್ವಜನಿಕರಿಗಾಗಿ ಹಾಕಿದ ಸಾವಿರಾರು ಕುರ್ಚಿಗಳು ಭಣಗುಟ್ಟವು. ಉದ್ಘಾಟನೆ ಕಾರ್ಯಕ್ರಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸೀಮಿತವಾಗಿತ್ತು.

ಈ ಚಿತ್ರಣ ಕಂಡ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಮ್ಮ ಭಾಷಣದಲ್ಲಿ, ‘ಇಲ್ಲಿನ ಜನರ ಸ್ಪಂದನೆ ನೋಡಿದರೆ ಬೇಸರವಾಗುತ್ತದೆ. ನಮ್ಮ ಶಾಸಕರು ಮನಸು ಮಾಡಿದ್ದರೆ ಇನ್ನಷ್ಟು ಜನರು ಬರುತ್ತಿದ್ದರೇನೋ? ಅಧಿಕಾರಿಗಳು ತಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದಾರೆ. ಅದಕ್ಕೆ ಜನಸ್ಪಂದನೆ ಸಿಗಬೇಕಿತ್ತು. ರಾಜಕಾರಣಿಗಳು ವಾಹನ ಕಳುಹಿಸಿ, ಕೂಲಿ, ಊಟ ಕೊಟ್ಟು ಜನರನ್ನು ಕರೆದುಕೊಂಡು ಬಂದು ಕಲಿಸಿ, ಕಲಿಸಿ ಜನರ ಮನಸ್ಸನ್ನೇ ಹಾಳು ಮಾಡಿದ್ದಾರೆ. ಅದು ಹೋಗಬೇಕು. ಇಂತಹ ಮನಸ್ಥಿತಿ ಬದಲಾಗಬೇಕು. ಜನ ಸಹಜವಾಗಿ ಇಂತಹ ಕಾರ್ಯಕ್ರಮಗಳಿಗೆ ಬರಬೇಕು’ ಎಂದು ಹೇಳಿದರು.

ಗೈರಾದ ಜನಪ್ರತಿನಿಧಿಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಎಂ. ಖರ್ಗೆ, ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ, ಎಸ್.ಎನ್.ಸುಬ್ಬಾರೆಡ್ಡಿ, ಎಂ.ಕೃಷ್ಣಾರೆಡ್ಡಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ಮಳಿಗೆಗಳಲ್ಲಿ ಜನ, ಕುರ್ಚಿಗಳು ಭಣಭಣ

ಒಂದೆಡೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿದ್ದ ಸಾವಿರಾರು ಕುರ್ಚಿಗಳು ಜನರಿಲ್ಲದೆ ಭಣಗುಟ್ಟುತ್ತಿದ್ದರೆ ಇನ್ನೊಂದೆಡೆ ಕ್ರೀಡಾಂಗಣದ ಮೂಲೆಯಲ್ಲಿಯೇ ಇದ್ದ ಆಹಾರ ಮಳಿಗೆಗಳು ಮತ್ತು ಸಮೀಪದಲ್ಲಿಯೇ ಹಾಕಿದ್ದ ವಸ್ತುಪ್ರದರ್ಶನಗಳ ಮಳಿಗೆಗಳಲ್ಲಿ ಜನದಟ್ಟಣೆ ಕಂಡುಬಂತು. ಜನರು ಕುಟುಂಬ ಸಮೇತರಾಗಿ ಬಂದು ಬಗೆ ಬಗೆ ಖಾದ್ಯಗಳನ್ನು ಸವಿಯುವುದು, ಬಟ್ಟೆ, ಕರಕುಶಲವಸ್ತುಗಳು, ಗುಡಿಕೈಗಾರಿಕೆ ಉತ್ಪನ್ನಗಳು, ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT