ಶನಿವಾರ, ಫೆಬ್ರವರಿ 27, 2021
30 °C
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಮತ

'ಖಾಸಗಿ ಶಾಲೆ ಶುಲ್ಕ ಪಾವತಿ: ಶೀಘ್ರ ಪೋಷಕರು, ಶಿಕ್ಷಕರ ಸ್ನೇಹಿ ಸೂತ್ರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ ಎಸ್. ಸುರೇಶ್ ಕುಮಾರ್

ಬಾಗಲಕೋಟೆ: ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಮಕ್ಕಳ ಪೋಷಕರು ಹಾಗೂ ಖಾಸಗಿ ಶಾಲೆ ಶಿಕ್ಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ಸೂತ್ರವೊಂದನ್ನು ರೂಪಿಸಲಾಗುವುದು ಎಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಜಮಖಂಡಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ತಂದಿಟ್ಟಿರುವ ಸಂಕಷ್ಟದಿಂದ ಆರ್ಥಿಕವಾಗಿ ಜರ್ಝರಿತವಾಗಿರುವ ಪೋಷಕರಿಗೆ ಖಾಸಗಿ ಶಾಲೆಗಳಿಗೆ ಸೇರಿಸಿರುವ ಮಕ್ಕಳ ಶುಲ್ಕ ತುಂಬಲು ಆಗುತ್ತಿಲ್ಲ. ಹೀಗಾಗಿ ಶುಲ್ಕ ಕಡಿಮೆ ಮಾಡಿಸುವಂತೆ ಇಲಾಖೆಗೆ ಅಹವಾಲು ಸಲ್ಲಿಸಿದ್ದಾರೆ. ಇನ್ನೊಂದು ಕಡೆ ಖಾಸಗಿ ಶಾಲೆ ಆಡಳಿತ ಮಂಡಳಿಗಳಿಗೆ ಶಿಕ್ಷಕರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಕೆಲವು ಕಡೆ ಸಂಬಳ ಸಿಗದೇ ಶಿಕ್ಷಕರು ತರಕಾರಿ ಮಾರಾಟ ಮಾಡಿ ಬದುಕುತ್ತಿದ್ದಾರೆ. 

ಇದನ್ನು ಮನಗಂಡು ಇಲಾಖೆಯ ಆಯುಕ್ತರು ಇತ್ತೀಚೆಗೆ ಪೋಷಕರು ಹಾಗೂ ಖಾಸಗಿ ಶಾಲೆ ಪ್ರತಿನಿಧಿಗಳ ಸಭೆ ನಡೆಸಿ ಅವರ ಅಭಿಪ್ರಾಯ ಆಲಿಸಿ ಮೂರು ಸೂತ್ರಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಅವುಗಳನ್ನು ಪರಿಶೀಲಿಸಿ, ಶಿಕ್ಷಣ ಹಾಗೂ ಪದವೀಧರ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಪೋಷಕರಿಗೆ ಭಾರ ಆಗದಂತೆ ಖಾಸಗಿ ಶಾಲಾ ಶಿಕ್ಷಕರಿಗೆ ತೊಂದರೆ ಆಗದಂತೆ ಶೀಘ್ರ ಅಂತಿಮ ಸೂತ್ರ ಜಾರಿಗೊಳಿಸಲಾಗುವುದು ಎಂದರು.

ಜೂನ್ ಮೊದಲ ವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಮೇ ಎರಡನೇ ವಾರ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು. ಮಕ್ಕಳಿಗೆ ಹೊರೆ ಆಗುವುದನ್ನು ತಡೆಯಲು ಈ ವರ್ಷ ಶೇ 30ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. ಪರೀಕ್ಷೆಗೆ ಕುಳಿತುಕೊಳ್ಳಲು ಕನಿಷ್ಠ ಹಾಜರಾತಿ ನಿಯಮದಿಂದ ವಿನಾಯ್ತಿ ನೀಡಲಾಗಿದೆ ಎಂದರು.

8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸುವಂತೆ ಪೋಷಕರಿಂದ ಒತ್ತಾಯ ಬಂದಿದ್ದು, ಅದರಲ್ಲೂ ಗ್ರಾಮೀಣ ಭಾಗದ ಪೋಷಕರಿಂದ ಹೆಚ್ಚಿನ ಬೇಡಿಕೆ ಇದ್ದು, ಪರಿಶೀಲಿಸಲಾಗುತ್ತಿದೆ. ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ತಂದಿತ್ತ ಸಂಕಷ್ಟದ ಕಾರಣ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ ಈ ವರ್ಷ ಯಾವುದೇ ಹೊಸ ನೇಮಕಾತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು