ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಚಿಕಿತ್ಸೆಯತ್ತ ಜನರ ಒಲವು: ಗದ್ದಿಗೌಡರ

ಅಂತರರರಾಷ್ಟ್ರೀಯ ಆಯುರ್ವೇದ ದಿನಾಚರಣೆ
Published 10 ನವೆಂಬರ್ 2023, 15:43 IST
Last Updated 10 ನವೆಂಬರ್ 2023, 15:43 IST
ಅಕ್ಷರ ಗಾತ್ರ

ಬಾಗಲಕೋಟೆ: ಅಲೋಪಥಿ ಔಷಧದಿಂದ ಅಡ್ಡ ಪರಿಣಾಮವಾಗಿ ಬೇರೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ, ಹಲವರು ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಪದ್ಧತಿಯ ಮೊರೆ ಹೋಗುತ್ತಿದ್ದಾರೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಆಯುಷ್ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಋಷಿಮುನಿಗಳು ಯೋಗ, ಆಸನ, ಮುದ್ರಾ, ಯುನಾನಿಗಳಂತಹ ಹಾಗೂ ಔಷಧೀಯ ಸಸ್ಯಗಳ ವನಸ್ಪತಿ ಉಪಯೋಗಿಸಿಕೊಂಡು ಆಯುರ್ವೇದ ಪದ್ಧತಿ ಅನುಸರಿಸುತ್ತಾ ಬಂದಿದ್ದಾರೆ ಎಂದು ಸ್ಮರಿಸಿಕೊಂಡರು.

ಇಂದು ಒತ್ತಡದ ಬದುಕು ಹಾಗೂ ಕಲುಷಿತ ಆಹಾರ ಪದ್ಧತಿಯಿಂದ ನೂರಾರು ರೋಗಗಳು ಹುಟ್ಟಿಕೊಳ್ಳುವುದಲ್ಲದೇ ತ್ವರಿತ ಗುಣಮುಖರಾಗುವ ನಿಟ್ಟಿನಲ್ಲಿ ಔಷಧಗಳ ಸೇವನೆಯಿಂದ ಬೇರೆ ತುತ್ತಾಗುತ್ತಿದ್ದಾರೆ. ಆಹಾರವೇ ಔಷಧಿಯಾಗಿದ್ದು, ಜನರು ಇನ್ನಾದರೂ ಆಹಾರ, ವಿಹಾರ, ಜೀವನಶೈಲಿ ಬದಲಾಯಿಸಿಕೊಂಡು ನಿರೋಗಿಗಳಾಗಿ ಬದುಕಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಆಯುರ್ವೇದ ಔಷಧಿಯು ರೋಗ ಗುಣಪಡಿಸಿಕೊಳ್ಳುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂಬ ತಪ್ಪು ನಿರ್ಧಾರದಿಂದ ಈ ಪದ್ಧತಿಗೆ ಹಿನ್ನಡೆಯಾಗಿದೆ ಎಂದರು.

ಇಂದಿನ ಕಲಬೆರಕೆ ಆಹಾರ, ಔಷಧಯುಕ್ತ ಆಹಾರದಿಂದಾಗಿ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗಿ ಆಯುಷ್ಯ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 5,500 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸರ್ಕಾರ ವಿತರಿಸುತ್ತಿರುವ ಪೌಷ್ಟಿಕ ಆಹಾರವನ್ನು ಮಗುವಿಗೆ ತಲುಪಿಸಿ, ಆ ಮಗುವನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಹನಮಂತ ಮಳಲಿ ಮಾತನಾಡಿ, ಸಾಮಾನ್ಯ ಕಾಯಿಲೆಯಿಂದ ಆಸ್ಪತ್ರೆಗೆ ಅಲೆದಾಡಿ ಹಣ ಮತ್ತು ಸಮಯ ಹಾಳು ಮಾಡಿಕೊಳ್ಳದೇ ಮನೆಯಲ್ಲಿ ಸಿಗುವ ವಸ್ತುಗಳಾದ ಕರಿ ಮೆಣಸು, ತುಳಸಿ ಎಲೆ, ಶುಂಢಿ, ಕಲ್ಲುಪ್ಪು, ಬೆಲ್ಲ, ರಾಗಿ, ಜೋಳ ಮುಂತಾದ ವಸ್ತುಗಳನ್ನು ಬಳಸಿಕೊಂಡು ನಿವಾರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಶಾಸಕ ಎಚ್.ವೈ. ಮೇಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಸ್ಪತ್ರೆ, ಔಷಧಗಳು ಇರಲಿಲ್ಲ. ಮನೆಯ ವಸ್ತುಗಳನ್ನು ಬಳಸಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೆವು. ಅಲೋಪಥಿ ಔಷಧಿಗಳಿಂದ ತಾತ್ಕಾಲಿಕ ಶಮನವಾದರೂ ಮತ್ತೇ ರೋಗ ಮರುಕಳಿಸುತ್ತದೆ. ಆಯುರ್ವೇದ ಔಷಧಿಯಿಂದ ನಿಧಾನವಾಗಿಯಾದರೂ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.

ಬಾದಾಮಿ ಕಾಳಿದಾಸ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಸಂಗೀತಾ ಬಳಗಾನೂರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಆಯುರ್ವೇದ ಮಾಹಿತಿಯುಳ್ಳ ಪೊಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಆಯುಷ್ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಇದ್ದರು.

Highlights - ಮನೆಯಲ್ಲಿಯೇ ಔಷಧೀಯ ವಸ್ತುಗಳು ನಿಧಾನವಾಗಿಯಾದರೂ ಶಾಶ್ವತ ಪರಿಹಾರ ಹೆಚ್ಚು ಔಷಧ ಸೇವನೆಯಿಂದ ಅಡ್ಡ ಪರಿಣಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT