ಸೋಮವಾರ, ಸೆಪ್ಟೆಂಬರ್ 20, 2021
24 °C

ಕೂಡಲಸಂಗಮ: ಧಾರ್ಮಿಕ ಕಾರ್ಯಗಳಿಗೆ ಅವಕಾಶ; ಭಕ್ತರಿಗೆ ಸಂತಸ

ಶ್ರೀಧರ ಗೌಡರ Updated:

ಅಕ್ಷರ ಗಾತ್ರ : | |

Prajavani

ಕೂಡಲಸಂಗಮ: ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಧಾರ್ಮಿಕ ಕಾರ್ಯಗಳಿಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿಯಮಕ್ಕೆ ಅನುಗುಣವಾಗಿ ಜುಲೈ 19ರಿಂದ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೆ ಅವಕಾಶ ಕಲ್ಪಿಸಿರುವುದು ಭಕ್ತರಿಗೆ ಸಂತಸ ಉಂಟು ಮಾಡಿದೆ.

ಏಪ್ರಿಲ್ 19ರಿಂದ ಜುಲೈ 6ರ ವರೆಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿತ್ತು. ಜುಲೈ 5ರಿಂದ 18ರ ವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಇತ್ತು. ಜುಲೈ 19ರಿಂದ ಪೂಜೆ, ಧಾರ್ಮಿಕ ಕಾರ್ಯಗಳಿಗೆ ಷರತ್ತು ವಿಧಿಸಿ ಅವಕಾಶ ನೀಡಿದ್ದರಿಂದ ಭಕ್ತರ ದಂಡು ಸಂಗಮದತ್ತ ಮುಖ ಮಾಡಿದೆ.

ಜುಲೈ 21ರಿಂದ ಮಂಡಳಿಯು ಸಂಗಮೇಶ್ವರ ದೇವಾಲಯ, ಬಸವಣ್ಣನ ಐಕ್ಯ ಸ್ಥಳದ ದರ್ಶನಕ್ಕೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಅವಕಾಶ ಕಲ್ಪಿಸಿದೆ.

ಸಂಗಮನಾಥನಿಗೆ ಭಕ್ತರು ಬೆಳಿಗ್ಗೆ 6.30, 8.30 ಹಾಗೂ 10.30ಕ್ಕೆ ಅಭಿಷೇಕ ಮಾಡಿಸಲು, ದೀಡ್‌ ನಮಸ್ಕಾರ, ಜವಳ ಕಾರ್ಯಗಳಿಗೆ ಅವಕಾಶ ಕಲ್ಪಿಸಿದೆ. ಮದುವೆ ಕಾರ್ಯಗಳಿಗೂ ಅವಕಾಶ ಕಲ್ಪಿಸಿದ್ದು, 50 ಜನ ಮಾತ್ರ ಭಾಗವಹಿಸಬಹುದು. ಪುಣ್ಯ ಸ್ನಾನ, ನದಿಯ ದಡಕ್ಕೆ ಅವಕಾಶ ನೀಡಿಲ್ಲ.

‘ನಾವು ಪ್ರತಿ ತಿಂಗಳು ಸಂಗಮನಾಥನಿಗೆ ಅಭಿಷೇಕ, ಪೂಜೆ ಮಾಡಿಸುತ್ತಿದ್ದೆವು, ಕೋವಿಡ್‌ ಕಾರಣದಿಂದ ಮೂರು ತಿಂಗಳಿನಿಂದ ಮಾಡಿಸಿರಲಿಲ್ಲ. ಸದ್ಯ ಅವಕಾಶ ಕೊಟ್ಟಿದ್ದರಿಂದ ಮಂಗಳವಾರ ಪೂಜೆ ಅಭಿಷೇಕ ಮಾಡಿಸಿದ್ದೇವೆ’ ಎಂದು ರಾಯಚೂರದ ಭಕ್ತ ಸಂಗಮನಾಥ ಪಾಟೀಲ ಹೇಳಿದರು.

ಎರಡು ದಿನದಲ್ಲಿ ಸಂಗಮನಾಥನಿಗೆ 12 ರುದ್ರಾಭಿಷೇಕ, 3 ಪಂಚಾಮೃತ ಅಭಿಷೇಕಗಳನ್ನು ಭಕ್ತರು ಮಾಡಿಸಿದ್ದಾರೆ. ಸಂಗಮೇಶ್ವರ ದೇವಾಲಯ ಹೊರ ಆವರಣದ ವ್ಯಾಪಾರಿ ಮಳಿಗೆಗಳಲ್ಲೂ ಖರೀದಿ ಜೋರಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು