ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರದ್ದೇ ಪಾರುಪತ್ಯ, ಮಹಿಳೆಗಿಲ್ಲ ಮನ್ನಣೆ

ನಾಲ್ವರು ಮಹಿಳೆಯರಷ್ಟೇ ಶಾಸನ ಸಭೆಗೆ ಆಯ್ಕೆಯಾದವರು
Last Updated 10 ಏಪ್ರಿಲ್ 2018, 6:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಉಳಿದಂತೆ, ಪುರುಷರ ಪಾರುಪತ್ಯವೇ ಈಗಲೂ ಮುಂದುವರಿದಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಆಯ್ಕೆಯಾಗಿರುವ 14 ಶಾಸಕರಲ್ಲಿ ಒಬ್ಬರೂ ಮಹಿಳೆಯರಿಲ್ಲ. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಪುಟ್ಟಸ್ವಾಮಿ ಅವರ ಪುತ್ರಿ ಡಾ.ಬಿ.ಪಿ.ಮಂಜುಳಾ ಸ್ಪರ್ಧಿಸಿ ಸೋತಿದ್ದರು. ಅವರು ವಾಟಾಳ್ ನಾಗರಾಜ್ ಎದುರು 26,589 ಮತಗಳನ್ನು ಪಡೆದು ಪ್ರಬಲ ಸ್ಪರ್ಧೆಯನ್ನೇ ಒಡ್ಡಿದ್ದರು. ಇಷ್ಟಾದರೂ ಅವರಿಗೆ ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ದೊರೆಯಲಿಲ್ಲ. ಇದೊಂದೇ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಣಸಿಗುವ ಮಹಿಳಾ ಹೆಜ್ಜೆಗಳು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 2004ರಲ್ಲಿ ಪರಿಮಳಾ ನಾಗಪ್ಪ ಗೆಲುವು ಕಂಡಿದ್ದರು. ನಂತರ ನಡೆದ 2 ಚುನಾವಣೆಗಳಲ್ಲಿಯೂ ಅವರು ಸೋಲು ಕಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 44,135 ಮತಗಳನ್ನು ಪಡೆಯುವ ಮೂಲಕ ಹಾಲಿ ಶಾಸಕ ಆರ್.ನರೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.

1957ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆಂಪಮ್ಮ 6 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.  ಅವರು ಜಿಲ್ಲೆಯ ಮೊದಲ ದಲಿತ ಶಾಸಕಿ ಎಂಬ ಶ್ರೇಯಕ್ಕೂ ಪಾತ್ರರಾದರು. ಇವರು ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದವರು. ಒಮ್ಮೆ ಶಾಸಕಿಯಾದ ನಂತರ ಇವರು ಪುರುಷರ ಪಾರುಪತ್ಯದ ನಡುವೆ ಟಿಕೆಟ್ ಪಡೆಯಲು ಬರೋಬರಿ 32 ವರ್ಷಗಳಷ್ಟು ಕಾಲ ಕಾಯಬೇಕಾಯಿತು. 1994ರಲ್ಲಿ ಸ್ಪರ್ಧಿಸಿದ್ದ ಅವರಿಗೆ ಮತ್ತೆ ಜಯ ಲಭಿಸಲಿಲ್ಲ. ಸದ್ಯ, ಇಲ್ಲಿವರೆಗೆ ಕೊಳ್ಳೇಗಾಲದಲ್ಲಿ ಏಕಮಾತ್ರ ಶಾಸಕಿ ಎಂಬ ಹೆಸರು ಪಡೆದಿದ್ದಾರೆ.

ಶಾಸಕಿಯರ ಕ್ಷೇತ್ರ ಗುಂಡ್ಲುಪೇಟೆ!

ಜಿಲ್ಲೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರ ಪ್ರಾಬಲ್ಯ ಮುಂದುವರಿದಿದೆ. ಇದು ಮೇಲ್ನೋಟಕ್ಕೆ ನಿಜ ಎನಿಸಿದರೂ ವಾಸ್ತವದಲ್ಲಿ ಮಹಿಳೆಯರ ಸಂಖ್ಯೆ ಇಲ್ಲಿ ಹೆಚ್ಚಿಲ್ಲ. ಕೇವಲ ಇಬ್ಬರೇ ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಒಬ್ಬರು ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ. ಸಂಖ್ಯೆ ದೃಷ್ಟಿಯಿಂದ ಕ್ಷೇತ್ರದ ರಾಜಕೀಯದಲ್ಲಿ ಮಹಿಳೆಯ ಪ್ರಾತಿನಿಧ್ಯ ಕಡಿಮೆ ಎಂದೇ ಹೇಳಬಹುದು.

‘ಗುಂಡ್ಲುಪೇಟೆಯ ಇಂದಿರಾಗಾಂಧಿ’ ಎಂದೇ ಹೆಸರಾದ ಕೆ.ಎಸ್.ನಾಗರತ್ನಮ್ಮ ಬರೋಬರಿ 7 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. 1957ರಿಂದ ಸತತವಾಗಿ 1972ರವರೆಗೆ 4 ಬಾರಿ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದರು. ನಂತರ, 1978ರಲ್ಲಿ ಕೇವಲ 271 ಮತಗಳಿಂದ ಇವರು ಸೋಲು ಕಂಡರು. ಆದರೆ, ನಂತರ 3 ಚುನಾವಣೆಗಳಲ್ಲಿ ಸತತವಾಗಿ ಆಯ್ಕೆಯಾಗುವ ಮೂಲಕ ನಾಡಿನ ಗಮನ ಸೆಳೆದರು. ಅವರು ಇರುವವರೆಗೂ ಬೇರೆ ಯಾರೂ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

ನಾಲ್ಕು ಬಾರಿ ಅಜೇಯರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಸಹ ಇವರ ಎದುರು 2 ಬಾರಿ ಸೋತಿದ್ದರು. ನಾಗರತ್ನಮ್ಮ ಮೊದಲ ಮಹಿಳಾ ಸ್ಪೀಕರ್ ಆಗಿ, ವಿರೋಧ ಪಕ್ಷದ ನಾಯಕಿಯಾಗಿಯೂ ಅನನ್ಯ ಸೇವೆ ಸಲ್ಲಿಸಿದ್ದರು. ಮಹದೇವಪ್ರಸಾದ್ ನಿಧನದ ನಂತರ ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಉಪಚುನಾವಣೆಯಲ್ಲಿ ಗೆದ್ದು ಸಚಿವೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕೆ.ಎಸ್.ಗಿರೀಶ / ಎಸ್.ಪ್ರತಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT