ಬಸವರಾಜ ಹವಾಲ್ದಾರ
ಬಾಗಲಕೋಟೆ: ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯದ ಬದಲಾಗಿ ನೀಡುವ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ನೀವು ನ್ಯಾಯಬೆಲೆ ಅಂಗಡಿಯವರಿಗೆ ಮಾಹಿತಿ ನೀಡಿ, ಅಲ್ಲಿಯೇ ಅಂಚೆ ಖಾತೆ ಪಡೆಯುವ ಮೂಲಕ ಮುಂದಿನ ತಿಂಗಳಿನಿಂದ ಹಣ ಪಡೆಯಿರಿ.
ಜಿಲ್ಲೆಯ 4,18,560 ಪಡಿತರ ಚೀಟಿಗಳಿವೆ. ಆ ಪೈಕಿ 2.99 ಲಕ್ಷ ಪಡಿತರ ಕುಟುಂಬಗಳಿಗೆ ಆಹಾರಧಾನ್ಯದ ಬದಲಾಗಿ ನೀಡುವ ಹಣ ಜಮಾ ಮಾಡಲಾಗಿದೆ. ಖಾತೆ ಸಕ್ರಿಯವಾಗಿ ಹೊಂದಿರದ, ಕೆವೈಸಿ ಆಗಿರದ, ಆಧಾರ್ ಸಂಖ್ಯೆ ಸರಿ ಇಲ್ಲದ 67,821 ಖಾತೆಗಳಿಗೆ ಹಣ ಜಮಾ ಆಗಿಲ್ಲ.
ಬಿಪಿಎಲ್ ಪಡಿತರ ಚೀಟಿ ಹೊಂದಿದ ಅನೇಕ ಕುಟುಂಬಗಳು ವಿವಿಧ ಕಾರಣಗಳಿಗಾಗಿ ಬ್ಯಾಂಕ್ ಖಾತೆ ಹೊಂದಿದ್ದರೂ, ಕೆವೈಸಿ ಮಾಡಿಸಿಲ್ಲ. ಆಧಾರ್ ಸಂಖ್ಯೆ ಜೋಡಣೆ ಮಾಡಿಸಿಲ್ಲ. ವಹಿವಾಟು ಮಾಡದ್ದರಿಂದ ಖಾತೆಗಳು ನಿಷ್ಕ್ರಿಯವಾಗಿವೆ. ಇದರಿಂದಾಗಿ ಅವರ ಖಾತೆಗಳಿಗೆ ಹಣ ಜಮಾ ಮಾಡಲು ಸಾಧ್ಯವಾಗುತ್ತಿಲ್ಲ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಜಮಾ ಆಗದವರ ವಿವರ ಪ್ರದರ್ಶಿಸಲು ಸೂಚಿಸಲಾಗಿದೆ. ಅಂಗಡಿಗಳ ಗೋಡೆಗಳ ಮೇಲೆ ಎಷ್ಟು ಜನರಿಗೆ, ಯಾರಿಗೆ ಹಣ ಪಾವತಿಯಾಗಿಲ್ಲ ಎಂಬ ವಿವರವನ್ನೂ ಹಾಕಲಾಗಿದೆ.
ಖಾತೆ ಹೊಂದಿರದವರು, ಅಂಗಡಿಯವರಿಗೆ ಮಾಹಿತಿ ನೀಡಿದರೆ, ಅಂಚೆ ಇಲಾಖೆಯ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲೇ ಖಾತೆ ತೆರೆದುಕೊಡುವ ಅಭಿಯಾನ ಮಾಡಲಾಗುತ್ತಿದೆ.
ಖಾತೆ ಹೊಂದದವರು. ಈ ತಿಂಗಳ 20ರೊಳಗೆ ಖಾತೆ ಮಾಡಿಸಿದರೆ ಮುಂದಿನ ತಿಂಗಳು ಅವರ ಖಾತೆಗೆ ಹಣ ಜಮಾ ಮಾಡಲಾಗುವುದುಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಈಗಾಗಲೇ 100ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಲ್ಲಿ ಖಾತೆ ತೆರೆಯುವ ಅಭಿಯಾನ ನಡೆದಿದೆ. ಆ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರರರಿಗೆ ಹೊಸ ಖಾತೆ ತೆರೆದುಕೊಟ್ಟಿರುವುದಲ್ಲದೇ, ಕೆವೈಸಿ ಕೂಡ ಮಾಡಿಸಿಕೊಡಲಾಗಿದೆ.
ಬ್ಯಾಂಕ್‌ಗಳಿಗೆ ಅಲೆದಾಡುವುದು, ಅರ್ಜಿ ತುಂಬಲು ಪರದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಒಂದೇ ಕಡೆ ಪಡಿತರ ಅಂಗಡಿಗಳಿಗೇ ಬಂದು ಖಾತೆ ತೆರೆದುಕೊಡುವ ವ್ಯವಸ್ಥೆ ಮಾಡಲಾಗಿದೆ. ತಿಂಗಳೊಳಗೆ ಖಾತೆ ಹೊಂದಿರದ ಎಲ್ಲರಿಗೂ ಖಾತೆಗಳನ್ನು ತೆರೆಯುವ ಪ್ರಯತ್ನ ಮಾಡಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಹಣ ಜಮಾ ಆಗದವರ ವಿವರ
ತಾಲ್ಲೂಕು : ಬಾಕಿ ಉಳಿದವರ ಸಂಖ್ಯೆ
ಬಾದಾಮಿ;6805
ಬಾಗಲಕೋಟೆ;9381
ಬೀಳಗಿ;4787
ಹುನಗುಂದ;4081
ಜಮಖಂಡಿ;11927
ಮುಧೋಳ;11135
ಇಳಕಲ್;5263
ಗುಳೇದಗುಡ್ಡ;2775
ರಬಕವಿ ಬನಹಟ್ಟಿ;11667
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.