ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಅಸ್ತವ್ಯಸ್ತ; ಪ್ರಯಾಣಿಕರ ಪರದಾಟ

ಐತಿಹಾಸಿಕ ಬಾದಾಮಿ ನಗರದ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Last Updated 3 ಜುಲೈ 2018, 17:35 IST
ಅಕ್ಷರ ಗಾತ್ರ

ಬಾದಾಮಿ: ‘ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಪ್ರವಾಸಿ ತಾಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ವಿವಿಧ ಯೋಜನೆಗಳ ಕಾಮಗಾರಿಗಳು ಗುಣಮಟ್ಟದಿಂದ ಸರಿಯಾಗಿ ಮತ್ತು ತ್ವರಿತಗತಿಯಲ್ಲಿ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ನಗರದ ವಿವಿಧ ಸಂಘಟನೆಯವರು ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು.

ನಗರದ ಹೋರಾಟ ಸಮಿತಿ, ನಿಸರ್ಗ ಬಳಗ, ಉತ್ತರ ಕರ್ನಾಟಕ ರೈತ ಸಂಘ, ವರ್ತಕರ ಸಂಘ, ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಮತ್ತು ಸುದೀಪ ಸೇನಾ ಸಂಘದ ಆಶ್ರಯದಲ್ಲಿ ಅಕ್ಕಮಹಾದೇವಿ ಅನುಭವ ಮಂಪಟದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾಕಾರರು ಭ್ರಷ್ಟ ಹಾಗೂ ನಿಷ್ಕ್ರೀಯ ಅಧಿಕಾರಿಗಳ ಮತ್ತು ಐತಿಹಾಸಿಕ ತಾಣವನ್ನು ನಿರ್ಲಕ್ಷ್ಯ ಧೋರಣೆ ತಾಳಿದ ಸಂಸದ ಮತ್ತು ಶಾಸಕರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಿಂದ ಎರಡು ತಾಸು ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಪ್ರಯಾಣಿಕರು ಮತ್ತು ಪ್ರವಾಸಿಗರು ಪರದಾಡಿದರು. ಪೊಲೀಸರು ಪ್ರತಿಭನೆಕಾರರ ಮನವೊಲಿಸಿದರೂ ಸಹ ಪ್ರತಿಭಟನಾಕಾರರು ವೀರಪುಲಿಕೇಶಿ ವೃತ್ತ, ಟಾಂಗಾ ನಿಲ್ದಾಣ, ಬಸವೇಶ್ವರ ವೃತ್ತ ಮತ್ತು ಹಳೇ ತಹಶೀಲ್ದಾರ್ ಕಾರ್ಯಾಲಯ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ಮಾಡಿದರು.

ನೂತನವಾಗಿ ನಿರ್ಮಿಸಿದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಮಿನಿವಿಧಾನ ಸೌಧದಿಂದ ರೈಲ್ವೆ ಸ್ಟೇಶನ್ ರಸ್ತೆಯ ಎಲ್.ಐ.ಸಿ. ಕಾರ್ಯಾಲಯದ ವರೆಗೆ ರಸ್ತೆ ವಿಭಜಕ ಕಾಮಗಾರಿ, ಕೇಂದ್ರ ಸರ್ಕಾರದ ಹೃದಯ, ಅಮೃತ ಯೋಜನೆ ಹಾಗೂ ರಾಜ್ಯ ಸರ್ಕಾರದ ಕೆಶಿಪ್, ನಗರೋತ್ಥಾನ ಯೋಜನೆಗಳು ಡಿಪಿಆರ್ ಯೋಜನೆಯಂತೆ ಕಾಮಗಾರಿಗಳು ನಡೆಯಬೇಕು ಎಂದು ಒತ್ತಾಯಿಸಿದರು.

ಚರಂಡಿ ಮತ್ತು ಪಾದಚಾರಿ ರಸ್ತೆ ವಿಸ್ತರಣೆ, ಚರಂಡಿಯಲ್ಲಿರುವ ತ್ಯಾಜ್ಯದ ಸ್ವಚ್ಛತೆ, ಓಜಿಎಲ್ ಜಾಗೆಯನ್ನು ಖುಲ್ಲಾ ಮಾಡಬೇಕು ಡಿಪಿಆರ್ ಪ್ರಕಾರ ಒತ್ತುವರಿ ತೆರವು, ಪುರಾತನ ಶೈಲಿಯ ವಿದ್ಯುತ್ ಕಂಬಗಳ ಅಳವಡಿಸಬೇಕು ಮತ್ತು ಪ್ರವಾಸಿಗರಿಗೆ, ಪ್ರಯಾಣಿಕರಿಗೆ ಅನುಕೂಲವಾಗಲು ಬಾದಾಮಿ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳು ನಿಲುಗಡೆಯಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಹಿರೇಹಾಳ, ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ, ಇಷ್ಟಲಿಂಗ ನರೇಗಲ್, ಮಹಾಂತೇಶ ವಡ್ಡರ, ಸೋಮಣ್ಣ ಬಿಂಗೇರಿ, ರಾಘು ಹರ್ತಿ, ಇಮ್ರಾನ್ ಕಲಬುರ್ಗಿ, ಇಸಾರ್ ಮುಲ್ಲಾ , ಸಂಗಮೇಶ ಲೋಕಾಪೂರ, ಸೋಮಶೇಖರ ಬರಗುಂಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT