ಸೋಮವಾರ, ಮಾರ್ಚ್ 30, 2020
19 °C

ಬಿಡದ ಮಳೆ, ಸಂಕಷ್ಟದಲ್ಲಿ ಬೆಳೆ!

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ತಾಲ್ಲೂಕಿನಲ್ಲಿ ಸತತ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳು ರೋಗ ಬಾಧೆಗೆ ತುತ್ತಾಗುತ್ತಿವೆ. ಹೀಗಾಗಿ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬುದು ಅನ್ನದಾತರ ಕೊರಗು.

ಆಗಸ್ಟ್‌ನಲ್ಲಿ ನೆರೆ ಹಾಗೂ ಅತಿವೃಷ್ಟಿ ಉಂಟಾದರೆ, ನಂತರದ ಎರಡು ತಿಂಗಳು ಸತತವಾಗಿ ಮಳೆ ಬೀಳುತ್ತಿದೆ. ಬೆಳೆಗಳು ಸದಾ ನೀರು ನಿಂತ ಪರಿಣಾಮ ಜಮೀನುಗಳು ಕೆಸರು ಗದ್ದೆಯಾಗಿವೆ. ಶೀತ ಹೆಚ್ಚಳಗೊಂಡು ರೋಗಗಳು ಬರುತ್ತಿವೆ. ಹೆಚ್ಚು ತೇವಾಂಶ ಬಯಸುವ ಕಬ್ಬು ನೀರಿನಲ್ಲಿ ನಿಂತು ಕೊಳೆತು ದುರ್ವಾಸನೆ ಬೀರುತ್ತಿದೆ.

ಇನ್ನೊಂದೆಡೆ ಬಿತ್ತಿದ ಬೀಜ ಮೊಳಕೆಯಲ್ಲೇ ಕಮರುತ್ತಿವೆ. ಕೆಲವು ಕಡೆ ಸಸಿಗಳು ಬೆಳೆದರೂ ಅವು ರೋಗಗಳಿಗೆ ತುತ್ತಾಗಿವೆ ಎಂದು ಕೃಷ್ಣಾ ನದಿ ತೀರದ ರೈತರು ‘ಪ್ರಜಾವಾಣಿ’ ಎದುರು ಸಂಕಷ್ಟ ತೋಡಿಕೊಂಡರು. ಯಾವ ರೋಗಕ್ಕೆ ಯಾವ ಔಷಧಿ ಸಿಂಪಡಿಬೇಕು ಎಂದು ಇಲ್ಲಿಯವರೆಗೆ ಯಾರೊಬ್ಬರು ಅಧಿಕಾರಿಗಳು ಬಂದು ನಮಗೆ ಮಾಹಿತಿ ನೀಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. 

ಕಟಾವಿಗೆ ಬಂದಿರುವ ಮೆಕ್ಕೆಜೋಳವನ್ನು ಮಳೆ ಬರುವ ಸಂದರ್ಭದಲ್ಲಿ ಕಿತ್ತರೆ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ರೈತರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಜೊತೆಗೆ ತೊಗರಿ ಹೂ ಬಿಟ್ಟು ಕಾಯಿ ಹಿಡಿಯುವ ಸಂದರ್ಭ ಇದಾಗಿದ್ದು, ಮಳೆಗೆ ಎಲ್ಲ ಹೂ ನೆಲಕಚ್ಚಿವೆ. ಜೊತೆಗೆ ಅರಿಷಿಣ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ.

‘ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿದ ರೈತರಿಗೆ ಈ ಬಾರಿ ಅತಿವೃಷ್ಟಿಯಿಂದ ಅನೇಕ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ, ನೀಡದಿದ್ದರೇ ನಮ್ಮ ಜೀವನ ನಡೆಸಲು ಹೇಗೆ ಸಾಧ್ಯ‘ ಎಂದು ರೈತರು ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು