ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಆರ್ಭಟ: ನೆಲಕಚ್ಚಿದ ವಿದ್ಯುತ್ ಕಂಬಗಳು

ಬಾಗಲಕೋಟೆ ಜಿಲ್ಲೆ: ಜೂನ್ ಮೊದಲು ದಿನ ವಾಡಿಕೆಗಿಂತ ಹೆಚ್ಚು ಮಳೆ
Last Updated 2 ಜೂನ್ 2020, 15:15 IST
ಅಕ್ಷರ ಗಾತ್ರ

ಬಾದಾಮಿ : ಮುಂಗಾರು ಹಂಗಾಮಿನ ಮೊದಲ ದಿನ ಸೋಮವಾರ ಬೀಸಿದ ಭಾರಿ ಗಾಳಿ ಮಳೆಗೆ ತಾಲ್ಲೂಕಿನಲ್ಲಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ರಸ್ತೆ ಬದಿಯ, ಹೊಲಗಳಲ್ಲಿನ ಗಿಡ–ಮರಗಳು ಮತ್ತು ಶೆಡ್ಡ್‌ಗಳು ನೆಲಕಚ್ಚಿವೆ. ಇದರಿಂದ ಸುಮಾರು ಎಂಟು ಗಂಟೆಗಳ ಕಾಲ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಭಾರಿ ಗಾಳಿಗೆ ಹೊಲದಲ್ಲಿ ಶೆಡ್ ಕುಸಿದುಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಭಾರಿ ಗಾಳಿಯ ಪರಿಣಾಮ ಕಬ್ಬಲಗೇರಿ ಮತ್ತು ಯರಗೊಪ್ಪ ಗ್ರಾಮಗಳ ರಸ್ತೆ ಮತ್ತು ಹೊಲದಲ್ಲಿದ್ದ 100ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ₹20 ಲಕ್ಷಕ್ಕೂ ಅಧಿಕ ಮೊತ್ತದ ಹಾನಿಯಾಗಿದೆ. ಎರಡು ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿಸುವುದಾಗಿ ಹೆಸ್ಕಾಂ ಶಾಖಾಧಿಕಾರಿ ಚಂದ್ರಶೇಖರ್ ಕಲ್ಲಾಪೂರ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ಹೊಲದಲ್ಲಿನ ಶೆಡ್‌ಗಳ ತಗಡು ಹಾರಿ ಹೋಗಿದ್ದರಿಂದ ಸಂಗ್ರಹಿಸಿಟ್ಟ ಆಹಾರ ಧಾನ್ಯ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾನಿಗೀಡಾಗಿವೆ ಎಂದು ರೈತ ಹನುಮಂತಪ್ಪ ವಾಲಿಕಾರ ಹೇಳಿದರು.

ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಪೂರ್ವದ ಬೆಟ್ಟದ ಮೇಲಿನ ಎರಡು ಜಲಧಾರೆಗಳು ವೈಯ್ಯಾರದಿಂದ ಬಳಕುತ್ತ ಧುಮ್ಮಿಕ್ಕುತ್ತ ಮತ್ತು ಮಹಾಕೂಟೇಶ್ವರ ಬೆಟ್ಟದ ಕಾರಂಜಿಯ ನೀರು ಬೆಟ್ಟದ ಗರ್ಭದಿಂದ ಹಾಲಿನ ಹೊಳೆಯಂತೆ ಹರಿಯುತ್ತಿದೆ. ಅಗಸ್ತ್ಯತೀರ್ಥ ಹೊಂಡದಲ್ಲಿ ಎರಡು ಅಡಿ ನೀರು ಸಂಗ್ರಹವಾಗಿದೆ.

ಮಳೆ ವರದಿ : ಮೂರು ದಿನಗಳಲ್ಲಿ ಬಾದಾಮಿ. ಕೆರೂರ ಮತ್ತು ಕಟಗೇರಿಯಲ್ಲಿ ಉತ್ತಮ ಮಳೆಯಾಗಿದೆ. ಕುಳಗೇರಿ ಮತ್ತು ಬೇಲೂರ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಬಾದಾಮಿ ಪಟ್ಟಣದಲ್ಲಿ 69 ಮಿ.ಮೀ, ಕೆರೂರ 42.8 ಮಿ.ಮೀ, ಕಟಗೇರಿ-31.6 ಮಿ.ಮೀ, ಕುಳಗೇರಿ-18 ಮಿ.ಮೀ, ಬೇಲೂರ-2.4. ಮಿ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್ ಸುಹಾಸ ಇಂಗಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT