ಬುಧವಾರ, ಏಪ್ರಿಲ್ 21, 2021
32 °C
-

ಅನುಸರಣಾ ವರದಿ ಪಾಲಿಸಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ‘ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಕ್ಕೆ ಪ್ರತಿ ತಿಂಗಳು ಜರುಗುವ ವಿಶೇಷ ಘಟಕ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅನುಸರಣಾ ವರದಿಯನ್ನು ತಪ್ಪದೇ ಪಾಲಿಸುವಂತೆ’ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಿಂಗಳು 15 ರಂದು ಜರುಗುವ ಈ ಸಭೆಯ ಅನುಸರಣಾ ವರದಿಯನ್ನು  ಪಾಲಿಸದೇ ಇದ್ದಲ್ಲಿ ಆಯಾ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಾಧಿಕಾರಕ್ಕೆ ವರದಿ ಮಾಡಲಾಗುವುದು ಎಂದು ಎಚ್ಚರಿಸಿದರು. 

ಸಭೆಯಲ್ಲಿ ಸಂಬಂಧಿಸಿದ ಎಲ್ಲಾ 39 ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಗೈರಾದವರ ವಿರುದ್ಧವೂ ಪ್ರಾಧಿಕಾರಕ್ಕೆ ವರದಿ ಮಾಡಲಾಗುವುದು. ಆಯಾ ತಿಂಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ತಪ್ಪದೇ ಸಾಧಿಸತಕ್ಕದ್ದು. ಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣವೇ ಬಾಕಿ ಇರುವ ಟೆಂಡರ್‌ಗಳ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ಸೂಚಿಸಲಾಗಿತ್ತು ಎಂದರು.

ಅಂಕಿ–ಅಂಶ ಸಂಗ್ರಹ ಶೀಘ್ರ 

ಸರ್ಕಾರದ ಯೋಜನೆಗಳನ್ನು ತಳಮಟ್ಟದ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಶೀಘ್ರ ಪರಿಶಿಷ್ಟ ಜಾತಿ ಮತ್ತು ಪಂಗಡದರ ಬಗ್ಗೆ ಗ್ರಾಮ ಪಂಚಾಯತಿವಾರು, ನಗರವಾರು ಅಂಕಿ ಅಂಶಗಳನ್ನು ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ವಿವಿಧ ರೈತರ ಪಟ್ಟಿಯು ಇದರಿಂದ ಲಭ್ಯವಾಗಲಿದೆ. ವಿವಿಧ ಯೋಜನೆಗಳಲ್ಲಿ ಆ ಕುಟುಂಬಗಳು ಪಡೆದ ಸೌಲಭ್ಯಗಳನ್ನು ಇದರಲ್ಲಿ ಕಾಣಬಹುದು ಎಂದರು.

ಅಲ್ಲದೇ ಗ್ರಾಮ ಪಂಚಾಯ್ತಿವಾರು ಅಂಗವಿಕರಲ ಸಂಖ್ಯೆಯ ಬಗ್ಗೆ ಈಗಾಗಲೇ ಸಮೀಕ್ಷೆ ಆರಂಭಗೊಂಡಿದ್ದರೂ ಅದಿನ್ನು ಪೂರ್ಣಗೊಳ್ಳದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಶೀಘ್ರವೇ ಆ ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಎಸ್‌ಸಿಪಿ ಯೋಜನೆಯಡಿ ರಾಜ್ಯ ಮತ್ತು ಜಿಲ್ಲಾ ವಲಯ ಸೇರಿ ಒಟ್ಟು ₹103.26 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಈ ಪೈಕಿ ₹33.30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ₹14.41 ಕೋಟಿ  ಖರ್ಚು ಮಾಡಲಾಗಿದೆ. 

ಅದೇ ರೀತಿ ಟಿಎಸ್‌ಪಿ ರಾಜ್ಯ ಮತ್ತು ಜಿಲ್ಲಾ ವಲಯ ಯೋಜನೆಯಡಿ ₹ 36.09 ಕೋಟಿ ನಿಗದಿಪಡಿಸಿದ್ದು, ₹ 12.52 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ₹5.19 ಕೋಟಿ ಖರ್ಚು ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು