ತೇರದಾಳ: ಸತತ ಒಂದು ತಿಂಗಳಿನಿಂದ ರಾಜ್ಯ ಹೆದ್ದಾರಿಯ ಮೇಲೆ ಚರಂಡಿ ನೀರು ನಿಂತು ಒಂದು ಕಡೆ ಸಂಚಾರ ಸ್ಥಗಿತವಾಗಿದೆ. ಆದರೆ ಚರಂಡಿ ನೀರು ಹರಿದು ಹೋಗುವಂತೆ ಮಾಡಲು ಪುರಸಭೆ ಅಧಿಕಾರಿಗಳು ಇನ್ನೂವರೆಗೆ ಕ್ರಮ ಕೈಗೊಂಡಿಲ್ಲ. ಇದರಿಂದ ಹೆದ್ದಾರಿ ಗಬ್ಬೆದ್ದು ನಾರುವಂತಾಗಿದೆ.
ಪಟ್ಟಣದ ಕಿಲ್ಲಾ ಭಾಗದ ಕೋಟೆ ಗೋಡೆ ಬಳಿಯ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಅಡಿಯಲ್ಲಿ ಹಾದು ಹೋಗಿರುವ ಚರಂಡಿ ತಿಂಗಳ ಹಿಂದೆಯೇ ಬ್ಲಾಕ್ ಆಗಿದೆ. ಅಲ್ಲಿ ಚರಂಡಿ ನೀರು ಹಾಗೂ ಆಗಾಗ ಸುರಿದ ಮಳೆ ನೀರು ಸಂಗ್ರಹವಾಗಿ ರಸ್ತೆ ವಿಭಜಕದವರೆಗೂ ಸಂಗ್ರಹವಾಗಿ ನಿಲ್ಲುತ್ತಿದೆ. ಇದರಿಂದ ಒಂದು ಬದಿಯ ಸಂಚಾರ ಸ್ಥಗಿತವಾಗಿದೆ. ಪುರಸಭೆ ಅಧಿಕಾರಿಗಳು ಅಲ್ಲಿ ಹಲವು ಬಾರಿ ಭೇಟಿ ನೀಡಿ ಸಂಗ್ರಹವಾದ ನೀರನ್ನು ಎತ್ತಿ ರಸ್ತೆ ಆಚೆ ಹಾಕಲು ಮೋಟರ್ ಬಳಸುತ್ತಿದ್ದಾರೆಯೇ ವಿನಾ ಚರಂಡಿ ನೀರಿಗೆ ಉಂಟಾಗಿರುವ ಅಡೆತಡೆ ತೆರವುಗೊಳಿಸುವ ಕೆಲಸ ಮಾಡುತ್ತಿಲ್ಲ ಎಂದು ಪುರಸಭೆ ಸದಸ್ಯರು ಆರೋಪಿಸಿದ್ದಾರೆ.
‘ಪುರಸಭೆ ಅಧಿಕಾರಿಗಳು ಮನ ಬಂದಂತೆ ವರ್ತಿಸುತ್ತಿದ್ದಾರೆ. ಮುಖ್ಯವಾಗಿ ಚರಂಡಿಗಳು ತುಂಬಿದಲ್ಲಿ ಅವುಗಳ ಸ್ವಚ್ಛತೆಯೆಡೆ ಗಮನ ಕೊಡುತ್ತಿಲ್ಲ. ಇದರಿಂದ ರಾಜ್ಯ ಹೆದ್ದಾರಿಯ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ತೇರದಾಳದ ಬಗ್ಗೆ ಅಸಡ್ಡೆ ಭಾವನೆ ಬರುವಂತೆ ಆಗಿದೆ. ಆಡಳಿತಾಧಿಕಾರಿ ಪುರಸಭೆಗೆ ಆಗಾಗ ಭೇಟಿ ನೀಡಿ ಇಲ್ಲಿಯ ಅಭಿವೃದ್ಧಿ ಕಡೆ ಗಮನ ಹರಿಸುವುದಾಗಿ ಹೇಳಿ ಹೋದವರು ಇಲ್ಲಿಯವರೆಗೆ ಇತ್ತ ಗಮನ ಹರಿಸಿಲ್ಲ. ಇದೇ ರೀತಿ ಮುಂದುವರಿದರೆ ಮತ್ತೆ ಪುರಸಭೆಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ’ ಎಂದು ಪುರಸಭೆ ಸದಸ್ಯರಾದ ಶೆಟ್ಟೆಪ್ಪ ಸುಣಗಾರ, ಸುರೇಶ ಕಬಾಡಗಿ ‘ಪ್ರಜಾವಾಣಿ’ಗೆ ತಿಳಿಸಿದರು. ಸದಸ್ಯರಾದ ಆದೀನಾಥ ಸಪ್ತಸಾಗರ, ಫಜಲ ಅತಾರಾವುತ ಸಹ ದನಿಗೂಡಿಸಿದರು.
‘ಸಮಸ್ಯೆ ಬಿಗಡಾಯಿಸಿದ್ದರೂ ಅಧಿಕಾರಿಗಳು ಪುರಸಭೆಗೆ ಸಂಬಂಧಿಸಿದ ಜೆಇ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರನ್ನು ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ಮಾಡಿಯೇ ಇಲ್ಲ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶ್ರಾವಣ ಮಾಸವಾದ್ದರಿಂದ ಕೊನೆಯ ಸೋಮವಾರ ಎಂದರೆ ಸೆ. 2ರಂದು ಐತಿಹಾಸಿಕ ಅಲ್ಲಮಪ್ರಭು ಜಾತ್ರೆ ಹಾಗೂ 3ರಂದು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಇದಕ್ಕೆಂದು ರಾಜ್ಯದ ವಿವಿಧೆಡೆಯಿಂದ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ಬರಲಿದ್ದಾರೆ. ಆದರೆ ಈ ಚರಂಡಿ ಸಮಸ್ಯೆ ಬಗೆಹರಿಯುವ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಚರಂಡಿಯಲ್ಲಿ ನೀರು ಹರಿದುಹೋಗಲು ಎಲ್ಲಿ ಅಡೆತಡೆಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದುಆನಂದ ಕೆಸರಗೊಪ್ಪ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.