ಗುರುವಾರ , ಫೆಬ್ರವರಿ 20, 2020
30 °C
ಬಾದಾಮಿ, ಕೆರೂರು ಪಟ್ಟಣ, 18 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ

‘ಮನೆ ಮನೆಗೆ ಶುದ್ಧ ನೀರು; ಕೇಂದ್ರದ ಧ್ಯೇಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಭೂಮಿಯೊಳಗಿನ ಫ್ಲೊರೈಡ್‌ಯುಕ್ತ ನೀರು ಕುಡಿದು ದೇಶದ ಜನರು ಆರೋಗ್ಯ ಹಾಳುಮಾಡಿಕೊಳ್ಳುವುದನ್ನು ತಡೆದು ಮನೆ ಮನೆಗೆ ಶುದ್ಧ ನೀರು ಪೂರೈಸಲು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ₹3.60 ಲಕ್ಷ ಕೋಟಿ ಮೀಸಲಿಟ್ಟಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಬಾದಾಮಿಯಲ್ಲಿ ಸೋಮವಾರ ಬಾದಾಮಿ–ಕೆರೂರು ಪಟ್ಟಣಗಳು ಹಾಗೂ ಮಾರ್ಗ ಮಧ್ಯದ 18 ಹಳ್ಳಿಗಳಿಗೆ ₹227.80 ಕೋಟಿ ವೆಚ್ಚದಲ್ಲಿ ಆಲಮಟ್ಟಿ ಜಲಾಶಯದಿಂದ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ಇಷ್ಟೊಂದು ದೊಡ್ಡಮೊತ್ತದ ಹಣ ಕುಡಿಯುವ ನೀರಿಗೆ ಮೀಸಲಿಡುವ ಜೊತೆಗೆ ಪರಿಶಿಷ್ಟ ಜಾತಿ–ಪಂಗಡದವರು ಹಾಗೂ ಆದಿವಾಸಿಗಳ ಕಲ್ಯಾಣ ಕಾರ್ಯಕ್ಕೂ ‍ಪ್ರಧಾನಿ ನರೇಂದ್ರ ಮೋದಿ ಹಣ ಕೊಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿಗೆ ಕೇಂದ್ರ ಸರ್ಕಾರ ₹1.23 ಲಕ್ಷ ಕೋಟಿ ಇಡಲಾಗಿದೆ ಎಂದರು.

ಬಜೆಟ್‌ನಲ್ಲೂ ಹೆಚ್ಚು ಹಣ: ಕುಡಿಯುವ ನೀರಿನ ಯೋಜನೆಗಳಿಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲೂ ಅನುದಾನ ಮೀಸಲಿಟ್ಟು ಅದನ್ನು ಕೇಂದ್ರದ ಹಣದೊಂದಿಗೆ ಹೊಂದಾಣಿಕೆ ಮಾಡಲಾಗುವುದು. ನೀರಾವರಿ, ಆರೋಗ್ಯ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಗಳಿಗೂ ಹಣ ಹೊಂದಿಸಲಾಗುವುದು ಎಂದು ಹೇಳಿದರು.

ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಶಾಸಕ ಆನಂದ ನ್ಯಾಮಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗಂಗೂಬಾಯಿ ಮೇಟಿ, ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸದಸ್ಯೆ ಸರಸ್ವತಿ ಮೇಟಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಪ್ರೊಬೆಷನರಿ ಐಎಎಸ್ ಆಧಿಕಾರಿ ಗರಿಮಾ ಪನ್ವಾರ್ ಪಾಲ್ಗೊಂಡಿದ್ದರು.

ಇದೇ ವೇಳೆ ಬಾದಾಮಿ ಪುರಸಭೆ ಪರವಾಗಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಸಿದ್ದರಾಮಯ್ಯ ಹಾಗೂ ಎಸ್.ಆರ್.ಪಾಟೀಲ ಅವರಿಗೆ ಜಿಲ್ಲಾಧಿಕಾರಿ ಪೌರಸನ್ಮಾನ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು