ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ವೈಯಕ್ತಿಕವಾಗಿ ₹50ಸಾವಿರ ನೆರವು

ಕ್ಷೇತ್ರದ ಜನರಿಂದ ಅಹವಾಲು ಸ್ವೀಕರಿಸಿದ ಶಾಸಕ ಸಿದ್ದರಾಮಯ್ಯ
Last Updated 28 ಜೂನ್ 2019, 14:52 IST
ಅಕ್ಷರ ಗಾತ್ರ

ಬಾದಾಮಿ/ಬಾಗಲಕೋಟೆ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮೊದಲ ಬಾರಿಗೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಶಾಸಕ ಸಿದ್ದರಾಮಯ್ಯ, ಶುಕ್ರವಾರ ಮುಂಜಾನೆ ಜನರ ಅಹವಾಲು ಸ್ವೀಕರಿಸಿ, ಅವರ ಅಳಲಿಗೆ ಸ್ಪಂದಿಸಿದರು.

ಇಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಅಹವಾಲು ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ತಾವೇ ಜನರ ಬಳಿಗೆ ಹೋಗಿ ಅವರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ, ಬೇರೆ ಬೇರೆ ಊರುಗಳಿಂದ ಬಂದು ಸರದಿಯಲ್ಲಿ ನಿಂತಿದ್ದವರಿಂದ ಸಮಾಧಾನವಾಗಿ ಅಳಲು ಆಲಿಸಿ ನಿಮ್ಮ ಸಮಸ್ಯೆ ಪರಿಹರಿಸಿ ಪತ್ರದ ಮೂಲಕ ತಿಳಿಸುವುದಾಗಿ ಭರವಸೆ ನೀಡಿ ಕಳುಹಿಸಿದರು. ಇದರಿಂದ ಬರುವಾಗ ಸಮಸ್ಯೆಯ ಮೂಟೆ ಹೊತ್ತು ಮುಖದಲ್ಲಿ ನೋವು ತುಂಬಿಕೊಂಡು ಬಂದವರು, ಮರಳುವಾಗ ನಿರಾಳ ಭಾವದಲ್ಲಿ ಮರಳಿದರು.

₹50 ಸಾವಿರ ನೆರವು: ನೆಲವಗಿ ಗ್ರಾಮದಲ್ಲಿ ಮೇ 23ರಂದು ಸಿಡಿಲು ಬಡಿದು ಸದಾಶಿವಪ್ಪ ಗಾರವಾಡ ಸಾವಿಗೀಡಾಗಿದ್ದರು. ಅವರ ಪತ್ನಿ ಲಕ್ಕವ್ವ ಶಾಸಕರ ಬಳಿ ನೆರವು ಕೇಳಿಕೊಂಡು ಬಂದಿದ್ದರು. ನನಗೆ ಐದು ವರ್ಷದ ಮಗನಿದ್ದಾನೆ. ಪತಿ ಸಾವಿಗೀಡಾದ ನಂತರ ಮನೆಗೆ ಯಾರೂ ದಿಕ್ಕಿಲ್ಲದಂತಾಗಿದೆ. ನಾವು ಬಡವರು. ಪ್ರಕೃತಿ ವಿಕೋಪ ‍ಪರಿಹಾರ ನಿಧಿ ಅಡಿ ನೆರವು ಕೊಡಿಸಿ ಎಂದು ಲಕ್ಕವ್ವ ಕೋರಿದರು. ಅದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ವೈಯಕ್ತಿಕವಾಗಿ ನೆರವಿನ ರೂಪದಲ್ಲಿ ₹50 ಸಾವಿರ ಕೊಟ್ಟು ಮಾನವೀಯತೆ ಮೆರೆದರು. ಸರ್ಕಾರದಿಂದ ಪರಿಹಾರಕ್ಕೂ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿವೇಶನ ಕೊಡಿಸಿ: ಸ್ಥಳೀಯ ಮಚಿಗಾರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪುರಸಭೆಯಿಂದ ನಿವೇಶನ ಮಂಜೂರಾಗಿದೆ. ಅದನ್ನು ನಮ್ಮ ಸಮಾಜದ ಸುಪರ್ದಿಗೆ ಕೊಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮಚಿಗಾರ ಸಮಾಜದ ಮುಖಂಡ ಪರಶುರಾಮ ರೋಣದ ಮತ್ತು ಸಮಾಜದ ಮುಖಂಡರು, ಶಾಸಕರ ಗಮನಕ್ಕೆ ತಂದರು.

ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಂಡು ನನಗೆ ತಿಳಿಸಬೇಕು ಎಂದು ಬಾಗಲಕೋಟೆ ಉಪವಿಭಾಗಾಧಿಕಾರಿಗೆ ಸಿದ್ದರಾಮಯ್ಯ ಸೂಚಿಸಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧರ ಸಂಗೀತ ಪಾಠಶಾಲೆಯನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಶಾಲೆಯ ಶಿಕ್ಷಕರಾದ ಮುದ್ದಣ್ಣ ಕೊನೆಹೊಲ ಮತ್ತು ಮಂಜುನಾಥ ಭಟ್ಟ ಕೇಳಿದರು.

‘ಅದಕ್ಕೆ ಪ್ರತಿಕ್ರಿಯಿ ಸಿದಸಿದ್ದರಾಮಯ್ಯ ಇನ್ನೂ ವೇತನಾನುದಾನಕ್ಕೆ ಒಳ‍ಪಟ್ಟಿಲ್ಲವೇ ಈ ಶಾಲೆ ಎಂದು ಕೇಳಿದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವೆ’ ಎಂದು ಭರವಸೆ ನೀಡಿದರು.

ಸ್ವಂತ ವ್ಯಾಪಾರ ಮಾಡಲು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ₹1 ಲಕ್ಷ ಸಾಲ ಮಂಜೂರಾಗಿದೆ. ಆದರೆ ನಿಗಮದ ಅಧಿಕಾರಿಗಳು ಬಿಡುಗಡೆ ಮಾಡುತ್ತಿಲ್ಲ. ಬೇಗ ಬಿಡುಗಡೆ ಮಾಡಿಸಿ ಎಂದುಆಡಗಲ್ ಗ್ರಾಮದ ಅಂಗವಿಕಲ ಮಾಗುಂಡಪ್ಪ ಹದ್ದನ್ನವರ ಅವಲತ್ತುಕೊಂಡರು. ತಕ್ಷಣ ಹಣ ಬಿಡುಗಡೆಗೆ ಸೂಚಿಸಿದ ಶಾಸಕರು, ಫಲಾನುಭವಿಗಳಿಗೆ ಅನಗತ್ಯವಾಗಿ ತೊಂದರೆ ಕೊಡದಂತೆ ತಾಕೀತು ಮಾಡಿದರು.

ಬನಶಂಕರಿ ಹರಿದ್ರಾತೀರ್ಥ ಹೊಂಡಕ್ಕೆ ಬಾದಾಮಿ ಪಟ್ಟಣದ ಚರಂಡಿ ನೀರು ಬರುತ್ತದೆ. ಅದು ಬರದಂತೆ ಕ್ರಮ ಕೈಗೊಳ್ಳಿ ಎಂದು ಯಲ್ಲಪ್ಪ ಮುದೇನಗುಡಿ ಮನವಿ ಮಾಡಿದರು.

ಬಾದಾಮಿ ಪಟ್ಟಣದಲ್ಲಿ ರೈತ ಭವನ ನಿರ್ಮಾಣ ಆಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮೇಟಿ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಸಾತನ್ನವರ ಮನವಿ ಸಲ್ಲಿಸಿದರು. ಅದಕ್ಕೂ ಸಿದ್ದರಾಮಯ್ಯ ಅವರಿಂದ ಸ್ಪಂದನೆ ದೊರೆಯಿತು.

’ಮನಸ್ಸು ಮಾಡಿದ್ರೆ ಕೆಲಸ ಆಗುತ್ತೆ’
ನಾನು ಮನಸ್ಸು ಮಾಡಿದ್ರೆ ಅಂದ್ರೇನು?..ನಾನೇನು ಚೀಫ್ ಮಿನಿಸ್ಟರಾ..? ಎಂದು ಶಾಸಕ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ವೇಳೆ ಮುನಿಸು ತೋರಿದ ಪ್ರಸಂಗ ನಡೆಯಿತು.

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ನಿವೃತ್ತಿ ವೇತನ ಸೇರಿದಂತೆ ಎಲ್ಲಾ ಸವಲತ್ತು ಕಲ್ಪಿಸುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ನೌಕರರ ಮುಖಂಡರೊಬ್ಬರು ‘ನೀವು ಮನಸ್ಸು ಮಾಡಿದ್ರೆ ಕೆಲಸ ಆಗುತ್ತೆ’ ಎಂದಾಗ,ಗರಂ ಆದ ಸಿದ್ದರಾಮಯ್ಯ, ಮೇಲಿನಂತೆ ಪ್ರತಿಕ್ರಿಯಿಸಿ ಡೋಂಟ್ ಟಾಕ್ ಲೈಕ್‌ ದಟ್ ಎಂದರು. ‘ನಾನಿದ್ದಾಗ ಆಗಲಿಲ್ಲ. ಬೇಕಿದ್ದರೆ ಈಗ ಸಿಎಂ ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ. ನಿಮ್ಮ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT