ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಆಧ್ಯಾತ್ಮ ಹಬ್ಬದಲ್ಲಿ ಸಿದ್ದೇಶ್ವರ ಸ್ವಾಮೀಜಿ ಪ್ರವಚನ

Last Updated 18 ಜನವರಿ 2020, 13:09 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಮಾಲಿಕೆಯ ಮೂಲಕ ನಗರದಲ್ಲಿ ಇನ್ನೊಂದು ತಿಂಗಳು ಕಾಲ ಆಧ್ಯಾತ್ಮ ಹಬ್ಬ ಗರಿಗೆದರಲಿದೆ. ನವನಗರದ ಕಲಾಭವನದ ಆವರಣದ ಬಯಲು ರಂಗಮಂದಿರದಲ್ಲಿ ಜನವರಿ 20ರ ಮುಂಜಾನೆ 6.30ರಿಂದ 7.30ರವರೆಗೆ ಪ್ರವಚನ ನಡೆಯಲಿದೆ.

ಪ್ರವಚನ ಆಯೋಜಿಸಿರುವ ನಗರದ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಅಧ್ಯಕ್ಷರೂ ಆದ ಶಾಸಕ ವೀರಣ್ಣ ಚರಂತಿಮಠ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಸಿದ್ದೇಶ್ವರ ಸ್ವಾಮೀಜಿ ನಗರದಲ್ಲಿ ಈಗ ನಾಲ್ಕನೇ ಬಾರಿ ಪ್ರವಚನ ನೀಡುತ್ತಿದ್ದಾರೆ. 2008ರಲ್ಲಿ ಕೊನೆಯ ಬಾರಿಗೆ ಪ್ರವಚನ ನೀಡಿದ್ದರು. 12 ಸುದೀರ್ಘ ವರ್ಷಗಳ ನಂತರ ಅವರೊಂದಿಗೆ ಸಂವಾದಿಯಾಗುವ ಅವಕಾಶ ದೊರೆತಿದೆ. ಹೀಗಾಗಿ ಹಬ್ಬದ ರೀತಿಯಲ್ಲಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹಾಗೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಕೂಡ ಇದಕ್ಕೆ ದನಿಗೂಡಿಸಿದರು.

ಪ್ರವಚನ ಕಾರ್ಯಕ್ರಮವನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ರೂಪಿಸಲಾಗುತ್ತಿದೆ. ಇದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ, ಬ್ರಾಹ್ಮಣ ಸಂಘ, ಆರ್ಯವೈಶ್ಯ ಸಮಾಜ, ಕ್ಷತ್ರೀಯ ಸಮಾಜ, ಮರಾಠಾ ಹಿತಚಿಂತಕ ಸಮಾಜ, ಕುರುಬ ಸಮಾಜ, ಬಂಜಾರಾ ಕ್ಷೇಮಾಭಿವೃದ್ಧಿ ಸಂಘ, ಅಂಬೇಡ್ಕರ್ ಯುವಕ ಸಂಘ, ವಿಶ್ವಕರ್ಮ ಸಮಾಜ, ವಾಲ್ಮೀಕಿ ಸಮಾಜ, ದೇವಾಂಗ ಸಮಾಜ, ಮಾರವಾಡಿ ಮಹೇಶ್ವರಿ ಸಮಾಜ, ಜೈನ ಸಮಾಜ, ಗುಜರಾತಿ ಸಮಾಜ, ರಾಜಸ್ತಾನಿ ಕಿಶೋರ ಮಂಡಳ ಸೇರಿದಂತೆ 46 ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.

ಮೊದಲ ದಿನಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಗೌರವಾಧ್ಯಕ್ಷ ಚರಂತಿಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ಎಸ್.‍ಆರ್.ಪಾಟೀಲ ಭಾಗಿಯಾಗಲಿದ್ದಾರೆ ಎಂದರು. ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿ, ಗುಳೇದಗುಡ್ಡ ಮರಡಿ ಮಠದ ಕಾಡಸಿದ್ದೇಶ್ವರ ಶಿವಾಚಾರ್ಯರು, ಗುರುಸಿದ್ದೇಶ್ವರ ಮಠದ ಬಸವರಾಜ ಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ತುಳಸಿಗೇರಿ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮಿಗಳು, ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ, ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ಹುಲ್ಯಾಳ ಗುರುದೇವ ಆಶ್ರಮದ ಹರ್ಷಾನಂದ ಸ್ವಾಮೀಜಿ, ಟೇಕಿನಮಠದ ಮಲ್ಲಿಕಾರ್ಜುನ ದೇವರು, ಮಳೆರಾಜೇಂದ್ರ ಮಠದ ಜಗನ್ನಾಥ ಸ್ವಾಮಿಗಳು ಪಾಲ್ಗೊಳ್ಳುವರು.

ಸುದ್ದಿಗೋಷ್ಠಿಯಲ್ಲಿ ಡಾ.ಎಚ್.ಎಸ್.ಪೂಜಾರ, ಅಪ್ಪಾ ಸಾಹೇಬ ಬುರ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT