ಶ್ರಮಬಿಂದು ಸಾಗರ ಇನ್ನು ‘ಸಿದ್ದು ಬ್ಯಾರೇಜ್’

7
ಸಿದ್ದು ನ್ಯಾಮಗೌಡಗೆ ಸರ್ಕಾರದಿಂದ ಗೌರವ ಸಲ್ಲಿಕೆ

ಶ್ರಮಬಿಂದು ಸಾಗರ ಇನ್ನು ‘ಸಿದ್ದು ಬ್ಯಾರೇಜ್’

Published:
Updated:
ಜಮಖಂಡಿ ತಾಲ್ಲೂಕು ಚಿಕ್ಕಪಡಸಲಗಿ ಬ್ಯಾರೇಜ್ (ಸಂಗ್ರಹ ಚಿತ್ರ)

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಸಿದ್ದು ನ್ಯಾಮಗೌಡ ಹೆಸರು ಇಡುವುದಾಗಿ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಪ್ರಕಟಿಸಿದೆ. ಇದು ನ್ಯಾಮಗೌಡರ ಕುಟುಂಬ ವರ್ಗ ಹಾಗೂ ಬೆಂಬಲಿಗರಲ್ಲಿ ಸಂತಸ ಮೂಡಿಸಿದೆ.

ಜಮಖಂಡಿ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಸಿದ್ದು ನ್ಯಾಮಗೌಡರು ಮೇ 28ರಂದು ತಾಲ್ಲೂಕಿನ ತುಳಸಿಗೇರಿ ಬಳಿ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಅವರ ಗೌರವಾರ್ಥ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಬ್ಯಾರೇಜ್‌ಗೆ ಸಿದ್ದು ನ್ಯಾಮಗೌಡ ಅವರ ಹೆಸರು ಇಡುವಂತೆ ಈ ಹಿಂದೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸರ್ಕಾರಕ್ಕೆ ಪತ್ರ ಬರೆದಿದ್ದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ನಂತರ ನಡೆದ ಶ್ರದ್ಧಾಂಜಲಿ ಸಲ್ಲಿಕೆ ವೇಳೆ ಸರ್ಕಾರದ ತೀರ್ಮಾನವನ್ನು ಸ್ವತಃ ಡಿ.ಕೆ.ಶಿವಕುಮಾರ ಪ್ರಕಟಿಸಿದ್ದರು.

ಸಿದ್ದು ಕನಸಿನ ಕೂಸು: ಕೃಷ್ಣಾ ತೀರದ ರೈತರ ಶ್ರಮ ಹಾಗೂ ಸಹಕಾರದ ಭಾವದ ಅಸ್ಮಿತೆ ಎನಿಸಿದ್ದ ಚಿಕ್ಕಪಡಸಲಗಿ ಬ್ಯಾರೇಜನ್ನು 80ರ ದಶಕದ ಕೊನೆಯ ಭಾಗದಲ್ಲಿ ಸಿದ್ದು ನ್ಯಾಮಗೌಡರ ನೇತೃತ್ವದಲ್ಲಿ ಸಂಘಟನೆಯಾಗಿದ್ದ ರೈತರು ವಂತಿಗೆ ಹಾಕಿ ಕಟ್ಟಿದ್ದರು. ಆಗ ಅದು ಇಡೀ ದೇಶದ ಗಮನ ಸೆಳೆದಿತ್ತು, ಕೃಷ್ಣಾ ತೀರದ ರೈತರ ಸಂಘಟನೆಯೂ ಅಸ್ತಿತ್ವಕ್ಕೆ ಬಂದಿತ್ತು. ಮುಂದೆ ಸಿದ್ದು ನ್ಯಾಮಗೌಡರ ರಾಜಕೀಯ ಹಾಗೂ ಔದ್ಯೋಗಿಕ ಬದುಕಿನ ಉನ್ನತಿಗೂ ಬ್ಯಾರೇಜ್ ಮೆಟ್ಟಿಲಾಗಿ ಪರಿಣಮಿಸಿತ್ತು.

1991ರಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದ ಸಿದ್ದು ನ್ಯಾಮಗೌಡ, ಕೆಲ ಕಾಲ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು. ಬ್ಯಾರೇಜ್‌ನ ನೀರು ಬಳಸಿ ಬೆಳೆದ ಕಬ್ಬು ನುರಿಸಲು ಸಹಕಾರಿ ತತ್ವದಲ್ಲಿ ಜಮಖಂಡಿ ಶುಗರ್ಸ್ ಕೂಡ ತಲೆ ಎತ್ತಿತ್ತು. ಅದೇ ಕಾರಣಕ್ಕೆ ಸ್ಥಳೀಯವಾಗಿ ಬ್ಯಾರೇಜ್‌ಗೆ ‘ರೈತರ ಶ್ರಮ ಬಿಂದುಸಾಗರ’ ಎಂದೇ ಕರೆಯಲಾಗುತ್ತಿತ್ತು.

‘ಸರ್ಕಾರದ ನಿರ್ಧಾರ ಸ್ವಾಗತಿಸುತ್ತೇವೆ. ಈ ಭಾಗದ ಜನರ ಭಾವನೆಗಳಿಗೆ ಬೆಲೆ ನೀಡಿ ಬ್ಯಾರೇಜ್‌ಗೆ ಸಿದ್ದು ನ್ಯಾಮಗೌಡರ ಹೆಸರು ಇಡಲು ಮುಂದಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ನಗರಸಭೆ ಅಧ್ಯಕ್ಷ ರಾಜು ಪಿಸಾಳ ಹೇಳುತ್ತಾರೆ.

ಕಟ್ಟೆಕೆರೆ, ಬೈಪಾಸ್‌ಗೂ ಹೆಸರಿಡಲು ನಿರ್ಣಯ

ಜಮಖಂಡಿಯ ಕಟ್ಟೆಕೆರೆ ಹಾಗೂ ನೂತನ ಬೈಪಾಸ್‌ ರಸ್ತೆಗೆ ಸಿದ್ದು ನ್ಯಾಮಗೌಡ ಹೆಸರಿಡಲು ಅಲ್ಲಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕಟ್ಟೆಕೆರೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ಬಾದಾಮಿ, ಪಟ್ಟದಕಲ್ಲಿಗೆ ಬರುವ ವಿದೇಶಿ ಪ್ರವಾಸಿಗರು ಅಲ್ಲಿಗೂ ಬರುವಂತೆ ಮಾಡಬೇಕು ಎಂಬುದು ನ್ಯಾಮಗೌಡರ ಕನಸಾಗಿತ್ತು. ಅದಕ್ಕೆ ಚಾಲನೆ ಕೂಡ ನೀಡಿದ್ದರು. ಅದನ್ನು ಅದೇ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸಿದ್ದು ನ್ಯಾಮಗೌಡ ಸ್ಮೃತಿವನ ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದು ನಗರಸಭೆ ಅಧ್ಯಕ್ಷ ರಾಜು ಪಿಸಾಳ ಹೇಳುತ್ತಾರೆ.

ನ್ಯಾಮಗೌಡ ಕುಟುಂಬಕ್ಕೆ ಟಿಕೆಟ್ ಬೇಡಿಕೆ

ಜಮಖಂಡಿ ಕ್ಷೇತ್ರದಲ್ಲಿ ಶಾಸಕ ಸಿದ್ದು ನ್ಯಾಮಗೌಡ ನಿಧನದ ಹಿನ್ನೆಲೆಯಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವುದು ಸೂಕ್ತ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಎದುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾಸನಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣ ಪರಾಮರ್ಶಿಸಲು ಇತ್ತೀಚೆಗೆ ಬಾಗಲಕೋಟೆಗೆ ಬಂದಿದ್ದ ಡಿ.ಆರ್.ಪಾಟೀಲ ಈ ವೇಳೆ ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕರೆದು ಮಾತಾಡಿಸಿದ್ದಾರೆ. ನ್ಯಾಮಗೌಡ ಕುಟುಂಬದವರಿಗೆ ಟಿಕೆಟ್ ನೀಡಿದಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾಗಿ ವರ್ಧಮಾನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದ ಕಾರ್ಯಕರ್ತರೂ ನ್ಯಾಮಗೌಡ ಕುಟುಂಬದವರ ಬಗ್ಗೆಯೇ ಒಲವು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಮಖಂಡಿ ಹಾಗೂ ಸಾವಳಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಿರ್ಣಯ ಕೂಡ ಕೈಗೊಳ್ಳಲಾಗಿದೆ’ ಎಂದರು.

ರೈತರ ಹಿತಕ್ಕೆ ಏಷ್ಯಾ ಖಂಡದಲ್ಲಿಯೇ ಅದೊಂದು ಯಶಸ್ವಿ ಪ್ರಯೋಗವಾಗಿತ್ತು. ಅಪ್ಪ ಇದ್ದಾಗಲೇ ಅವರ ಹೆಸರು ಇಡಬೇಕಿತ್ತು. ಈಗಲಾದರೂ ಆ ಗೌರವ ನೀಡಲಾಗಿದೆ. ಅದು ಸಂತಸದ ವಿಚಾರ
- ಆನಂದ ನ್ಯಾಮಗೌಡ, ಸಿದ್ದು ನ್ಯಾಮಗೌಡ ಪುತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !