ಜಮಖಂಡಿ: ‘ನಮ್ಮ ಸರ್ಕಾರವಿದ್ದಾಗ ಪಂಚಮಸಾಲಿ ಸಮಾಜವನ್ನು ಜಾತಿ ಕಾಲಂನಲ್ಲಿ ಸೇರಿಸುವ ಕೆಲಸ ಮಾಡಿ, 2ಡಿ ನೀಡಿದ್ದೇವೆ. ನಮ್ಮ ಸರ್ಕಾರವಿದ್ದಾಗ 2ಎ ಸಲುವಾಗಿ ಹೋರಾಟ ಮಾಡುತ್ತಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಮೀಸಲಾತಿ ನೀಡುವದಾಗಿ ಹೇಳಿದ್ದರು, ಆದರೆ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದರೂ 2ಎ ಮೀಸಲಾತಿ ನೆನಪಿಸುತ್ತಿಲ್ಲ’ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.
ಇಲ್ಲಿನ ಪಂಚಮಸಾಲಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಪಂಚಮಸಾಲಿ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ರಾಣಿಚನ್ನಮ್ಮ ಬ್ಯಾಂಕಿನ 21ನೇ ವಾರ್ಷಿಕ ಸಭೆ ಉದ್ಘಾಟನೆ ಮಾಡಿ ಮಾತನಾಡಿದರು.
ಪಂಚಮಸಾಲಿ ಸಮಾಜ ಕೃಷಿಯನ್ನು ಅವಲಂಭಿಸಿರುವದರಿಂದ ಶಿಕ್ಷಣದಲ್ಲಿ ಹಿಂದೆ ಉಳಿಯುತ್ತಿದೆ, ಆದರೆ ಸಮಾಜದ ಬಾಂಧವರು ಮಕ್ಕಳಿಗೆ ಶಿಕ್ಷಣ ನೀಡಿ ಅವರಿಗೆ ಆಸಕ್ತಿ ಇರುವ ಕಡೆಗೆ ಕರೆದೊಯ್ಯಲು ಪ್ರೋತ್ಸಾಹ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಬಸವರಾಜ ಸಿಂಧೂರ ಮಾತನಾಡಿ ನಿಸ್ವಾರ್ಥದಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕು, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಮಾಜ ನೇರವಾಗಬೇಕು, ಸಮಾಜದ ವ್ಯಕ್ತಿಗಳನ್ನು ಬೆಳೆಸಲು ಪ್ರತಿಯೊಬ್ಬರು ಕೈಜೊಡಿಸಬೇಕು ಎಂದರು.
ಕುಂಚನೂರ ಕಮರಿಮಠದ ಸಿದ್ಧಲಿಂಗ ದೇವದು, ಆಲಗೂರು ಧರಿದೇವರ ಮಠದ ಲಕ್ಷ್ಮಣಮುತ್ಯಾ ಸಾನಿಧ್ಯವನ್ನು ವಹಿಸಿದ್ದರು. ಸಮಾಜದ ಅಧ್ಯಕ್ಷ ಪಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ವೇದಿಕೆ ಮೇಲೆ ನೌಕರ ಸಂಘದ ಅಧ್ಯಕ್ಷ ಮಹಾಂತೇಶ ನರಸನಗೌಡರ, ಸಿ.ಪಿ.ಜನವಾಡ, ಸಂಗಪ್ಪ ಸಂತಿ, ಬಸಗೌಡ ಪಾಟೀಲ,ಈಶ್ವರ ನ್ಯಾಮಗೌಡ, ರಾಜಶೇಖರ ಕೋವಳ್ಳಿ, ಬಸವರಾಜ ಬಳಿಗಾರ, ಪ್ರಭು ಜನವಾಡ, ಸಂಗಮೇಶ ಕೌಜಲಗಿ, ಕಾಡು ಗಡಾದ, ಹಣಮಂತ ಬಿರಾದಾರ ಸೇರಿದಂತೆ ಇತರರು ಇದ್ದರು.
ಬ್ಯಾಂಕಿನ ಅಧ್ಯಕ್ಷ ಸದಾಶಿವ ಬಾಲಪ್ಪನವರ ಸ್ವಾಗತಿಸಿದರು, ಪಿ.ಎಂ.ಝುಲಫಿ ಪ್ರಾತ್ಸಾವಿಕವಾಗಿ ಮಾತನಾಡಿದರು, ಚಂದ್ರಶೇಖರ ಆಲೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.