ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ನ ಆದೇಶ ನಿರ್ಲಕ್ಷಿಸಿ, ಆಧಾರ್‌ ಜೋಡಣೆಗೆ ಪೀಡಿಸುತ್ತಿವೆ ಟೆಲಿಕಾಂ ಸೇವಾ ಸಂಸ್ಥೆಗಳು

Last Updated 27 ಏಪ್ರಿಲ್ 2018, 10:34 IST
ಅಕ್ಷರ ಗಾತ್ರ

ನವದೆಹಲಿ: ‘ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಯಾವತ್ತೂ ಹೇಳಿಲ್ಲ’ ಎಂದು ಬುಧವಾರ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಆದರೂ, ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡುವಂತೆ ಮತ್ತು ಪರಿಶೀಲಿಸಲು ನಿರಂತರವಾಗಿ ತೊಂದರೆ, ಕಿರಿಕಿರಿ ಉಂಟುಮಾಡುವ ಕರೆಗಳು, ಸಂದೇಶಗಳು ಮತ್ತು ಮೇಲ್‌ಗಳನ್ನು ಕಳುಹಿಸುವ ಮೂಲಕ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ಪೀಡಿಸುತ್ತಿವೆ.

ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ, ಮೊಬೈಲ್‌ ಸಂಖ್ಯೆ ಜತೆ ಆಧಾರ್‌ ಸಂಖ್ಯೆಯನ್ನು ಸಂಪರ್ಕಿಸುವಂತೆ ಹೊಸ ಸಂದೇಶಗಳು ಗುರುವಾರ ಗ್ರಾಹಕರಿಗೆ ಬಂದಿವೆ. ಈ ಮೂಲಕ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನ ಆದೇಶವನ್ನು ನಿರ್ಲಕ್ಷ್ಯ ಮಾಡುವುದನ್ನು ರೂಢಿಸಿಕೊಂಡಿವೆ.

ಈ ಸಂಬಂದ ತಿಂಗಳ ಹಿಂದೆಯೇ ಆದೇಶ ನೀಡಿದ್ದ ನ್ಯಾಯಾಲಯ, ಮೊಬೈಲ್‌ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಒತ್ತಡ ಹಾಕಬಾರದು ಎಂದು ಹೇಳಿತ್ತು. ಆದರೆ, ಏರ್‌ಟೆಲ್‌, ವೊಡಾಫೋನ್‌ ಮತ್ತು ಐಡಿಯಾ ಸೆಲ್ಯುಲಾರ್ ಕಂಪನಿಗಳು ಪಟ್ಟುಬಿಡದೆ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಾ ಪೀಡಿಸುತ್ತಿವೆ.

ಈ ವಿಷಯ ಮತ್ತಷ್ಟು ಬಿಗಡಾಯಿಸಿದ್ದು, ಆಧಾರ್‌ ಸಂಖ್ಯೆಯನ್ನು ಹೊದಿರದ ಜನರಿಗೆ ಹೊಸ ಸಿಮ್‌ ಕಾರ್ಡ್‌ಗಳನ್ನು ನೀಡಲು ಚಿಲ್ಲರೆ ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆ. ಈ ಮೂಲಕ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳು ನಿಯಮಗಳನ್ನು ಹಾಗೂ ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ವರದಿಯಾಗಿದೆ.

ಈ ವಿಚಾರದಲ್ಲಿ ದೂರಸಂಪರ್ಕ ಸಚಿವಾಲಯ ಜಾಣ ಕವುಡುತನ ತೋರುತ್ತಿದ್ದು, ಮೌನ ವಹಿಸಿದೆ.

ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡದೇ ಇರುವವರ ಸಂಖ್ಯೆ ಕೋಟಿಗಟ್ಟಲೆ ಇದೆ ಎಂದು ಅಂದಾಜಿಸಲಾಗಿದೆ. ಜತೆಗೆ, ಆಧಾರ್‌ ಜೋಡಣೆ ಮಾಡಿಸಿ ಎಂಬ ಸಂದೇಶಗಳ ಕಿರಿಕಿರಿಯನ್ನೂ ಅನುಭವಿಸಲು ಅವರು ಸಿದ್ಧರಿಲ್ಲ.

'ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಜನರಿಗೆ ಅನಗತ್ಯವಾಗಿ ಒತ್ತಾಯಿಸಲಾಗುತ್ತಿದೆ. ಜತೆಗೆ, ಇದು ಮಾನಸಿಕ ಕಿರಿಕಿರಿಯನ್ನೂ ಉಂಟು ಮಾಡಿದೆ’ ಎಂದು ಈಚೆಗಷ್ಟೇ ಚೆನ್ನೈನಿಂದ ದೆಹಲಿಗೆ ಬಂದು ನೆಲೆಸಿರುವ ಪ್ರವೀಣ್‌ ಹೇಳಿಕೊಂಡಿದ್ದಾರೆ.

ನಾನು ಆಧಾರ್‌ ಸಂಖ್ಯೆಯನ್ನು ನೀಡಿಲ್ಲ ಎಂಬ ಕಾರಣಕ್ಕೆ ಏರ್‌ಟೆಲ್‌ನ ಪ್ರತಿನಿಧಿ ನನಗೆ ಹೊಸ ಸಿಮ್‌ ನೀಡಲು ನಿರಾಕರಿಸಿದರು. ಆದರೆ, ನಾನು ಚುನಾವಣಾ ಗುರುತಿನ ಚೀಟಿ, ಪಾಸ್‌ಪೋರ್ಟ್‌ ಅಥವಾ ಬ್ಯಾಂಕ್‌ನ ದಾಖಲೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದರೂ ಅವರು ಅದನ್ನು ಒಪ್ಪದೆ ನಿರಾಕರಿಸಿದರು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಸ್ತಾಪಿಸಿ ಮಾತನಾಡಿದ ಬಳಿಕವೂ ಪ್ರತಿನಿಧಿ ಸಿಮ್‌ ನೀಡದೆ ನನ್ನನ್ನು ಹಿಂದಕ್ಕೆ ಕಳುಹಿಸಿದ ಎಂದು ಪ್ರವೀಣ್‌ ಅವರು ಹೊಸ ಸಿಮ್‌ ಪಡೆಯುವ ವೇಳೆ ಅನುಭವಿಸಿದ ಕಿರಿಕಿರಿಯನ್ನು ಹೇಳಿಕೊಂಡರು ಎಂದು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. 

ಇದೇ ಪರಿಸ್ಥಿತಿಯನ್ನು ಬೆಂಗಳೂರಿನ ಕಾರ್ಪೊರೇಟರ್‌ ಎಕ್ಸಿಕ್ಯೂಟಿವ್ ಜಸ್ಲೀನ್‌ ಎದುರಿಸಿದ್ದಾರೆ.

ನನ್ನ ಮಗನಿಗೆ ಬಳಸಲು ಹೊಸ ಸಿಮ್‌ ಬೇಕಿತ್ತು. ಆದರೆ, ಆಧಾರ್‌ ಇಲ್ಲದ ಕಾರಣ ಏರ್‌ಟೆಲ್‌ನ ಸೇವಾ ಮಳಿಗೆಯಲ್ಲಿ ನಿರಾಕರಿಸಿದರು. ಇದರಿಂದ ನಾನು ಅನಿವಾರ್ಯವಾಗಿ ಸಿಮ್‌ ಇಲ್ಲದೆ ಹಿಂದಿರುಗಬೇಕಾಯಿತು ಎಂದು ಅವರು ತಮಗಾದ ಅನುಭವನ್ನು ಜಸ್ಲೀನ್‌ ಹೇಳಿಕೊಂಡಿದ್ದಾರೆ. 

ಈ ಸಂಬಂಧ ದೂರಸಂಪರ್ಕ ಸಚಿವಾಲಯಕ್ಕೆ ವಿವರವಾದ ಪ್ರಶ್ನಾವಳಿಯನ್ನು ಕಳುಹಿಸಿದರೂ ಉತ್ತರ ನೀಡಿಲ್ಲ. ಜತಗೆ, ದೂರವಾಣಿ ಕರೆಯನ್ನೂ ಸ್ವೀಕರಿಸಿಲ್ಲ, ಕನಿಷ್ಠ ಸಂದೇಶದ ಮೂಲಕವೂ ಟೆಲಿಕಾಂನ ಕಾರ್ಯದರ್ಶಿ ಅರುಣ್‌ ಸುಂದರ್‌ರಾಜನ್‌ ಅವರು ಪ್ರತಿಕ್ರಿಯಿಸಿಲ್ಲ. ಈ ಕುರಿತು ಆಂತರಿಕವಾಗಿ ಪರಿಶೀಲಿಸುತ್ತಿದ್ದೇವೆ ಎಂದಷ್ಟೇ ಹೇಳಿದ ಸಚಿವಾಲಯದ ಅಧಿಕಾರಿಗಳು, ಹೆಚ್ಚಿನ ವಿವರಣೆ ಮತ್ತು ಸ್ಪಷ್ಟನೆ ನೀಡಲಿಲ್ಲ ಎಂದು ವರದಿ ಮಾಡಿದೆ.

ಈ ವಿಷಯವಾಗಿ ಟೆಲಿಕಾಂ ನಿರ್ವಾಹಕರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕುರಿತು ಸರ್ಕಾರ ಹಿಂದೆ ನೀಡಿದ ನಿರ್ದೇಶನದಂತೆ ಕಂಪನಿಗಳು ‘ಸರಳವಾಗಿ ಅನುಸರಿಸುತ್ತಿವೆ’ ಎಂದು ಸಿಒಎಐ ಸಮೂಹದ ಲಾಬ್ಬಿ ಸಂಸ್ಥೆ ಹೇಳಿದೆ.

ಸುಪ್ರೀಂ ಕೋರ್ಟ್‌ ಏನು ಹೇಳಿತ್ತು?
ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

‘ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಯಾವತ್ತೂ ಹೇಳಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಸ್ಪಷ್ಟಪಡಿಸಿತ್ತು.

ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಮೊಬೈಲ್‌ ಬಳಕೆದಾರರ ಪರಿಶೀಲನೆ ಅಗತ್ಯ ಎಂದು ಹೇಳಿರುವುದನ್ನೇ ಸರ್ಕಾರ ಅಸ್ತ್ರದಂತೆ ಬಳಸಿಕೊಳ್ಳುತ್ತಿದೆ ಎಂದು ಪೀಠವು ತರಾಟೆಗೆ ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT