ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ: ಕಬ್ಬು ಬೆಳೆಗಾರರ ಹೋರಾಟ ಇಂದಿನಿಂದ

ದರ ಘೋಷಣೆಯಾಗದೇ, ಬಾಕಿ ಪಾವತಿಸದೇ ಕಾರ್ಖಾನೆ ಆರಂಭಿಸುವಂತಿಲ್ಲ: ರೈತರ ಸಭೆ ನಿರ್ಧಾರ
Last Updated 28 ಅಕ್ಟೋಬರ್ 2020, 11:57 IST
ಅಕ್ಷರ ಗಾತ್ರ

ಮುಧೋಳ: 2018ರಿಂದ 20ರವರೆಗಿನ ಎರಡು ವರ್ಷಗಳ ಬಾಕಿ ಹಣ ಪಾವತಿಸಬೇಕು ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತು ₹2,700 ಘೋಷಿಸಿ ಕಾರ್ಖಾನೆ ಆರಂಭಿಸಲು ಒತ್ತಾಯಿಸಲು ಜಿಲ್ಲೆಯ ಕಬ್ಬು ಬೆಳೆಗಾರರು ಅಕ್ಟೋಬರ್ 28ರಿಂದ ಹೋರಾಟ ಆರಂಭಿಸಲಿದ್ದಾರೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದರೂ ಕೆಲವು ಕಾರ್ಖಾನೆಗಳು ಹಂಗಾಮು ಆರಂಭಿಸಲು ಹವಣಿಸುತ್ತಿವೆ. ಹೀಗಾಗಿ ಹೋರಾಟ ಅನಿವಾರ್ಯ ಎಂದು ಮಂಗಳವಾರ ಸಂಜೆ ಇಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ತೀರ್ಮಾನಿಸಲಾಯಿತು. ಅದರನ್ವಯ ಬುಧವಾರ ಬೆಳಿಗ್ಗೆ 11 ಗಂಟೆಗೆ ಜಿಎಲ್‌ಬಿಸಿ ಆವರಣದಲ್ಲಿ ಸಭೆ ನಡೆಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೋರಾಟ ಆರಂಭಿಸಲಾಗುತ್ತಿದೆ.

ಕಾರ್ಖಾನೆ ಆರಂಭಿಸಲು ಹಲವು ತಿಂಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಖಾನೆಗಳು ಈ ಹಂಗಾಮಿನ ದರ ಘೋಷಿಸಿವೆ. ಆದರೆ ನಮ್ಮ ಜಿಲ್ಲೆಯ ಕಾರ್ಖಾನೆಗಳು ರೈತರಿಗೆ ತೊಂದರೆ ಕೊಡುತ್ತಿವೆ. ಬಾಕಿ ಹಣ ನೀಡದೇ ಸತಾಯಿಸುತ್ತಿವೆ. ದರ ಘೋಷಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರನ್ನು ಕಾರ್ಖಾನೆಗಳ ಆಡಳಿತ ಮಂಡಳಿಯವರು ಒಡೆದು ಆಳುತ್ತಿದ್ದಾರೆ. ನಾವು ಬಾಗಲಕೋಟೆಗೆ ಇಲ್ಲವೇ ಯಾವುದೇ ಕಾರ್ಖಾನೆಗೆ ಹೋಗುವುದಿಲ್ಲ. ಅವರೇ ಹೋರಾಟದ ಸ್ಥಳಕ್ಕೆ ಬಂದು ತಮ್ಮ ತೀರ್ಮಾನ ತಿಳಿಸಬೇಕು. ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ರೈತರ ಭಾವನೆ ಹಾಗೂ ಬವಣೆಯನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರು ಕಾರ್ಖಾನೆಯವರ ಮಾತಿಗೆ ಮರುಳಾಗಿ ಕಬ್ಬು ಕಟಾವು ಹಾಗೂ ಸಾಗಣೆಮಾಡಬಾರದು ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ, ಮುಖಂಡರಾದ ಕೆ.ಟಿ.ಪಾಟೀಲ, ಉದಯ ಸಾರವಾಡ, ವಿಶ್ವನಾಥ ಉದಗಟ್ಟಿ, ಗೋವಿಂದಪ್ಪ ಗುಜ್ಜನ್ನವರ, ಸುಭಾಷ ಶಿರಬೂರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಬಸವಂತ ಕಾಟೆ, ಮಹೇಶಗೌಡ ಪಾಟೀಲ, ಸುಭಾಷ ಕೊರಡ್ಡಿ, ಸಂಗಪ್ಪ ನಾಗರಡ್ಡಿ, ಸುರೇಶ ಚಿಂಚಲಿ, ರಾಚಪ್ಪ ಕಲ್ಲೊಳ್ಳಿ, ಮಲ್ಲಪ್ಪ ಹುಲ್ಯಾಳ, ದುಂಡಪ್ಪ ಲಿಂಗರಡ್ಡಿ, ಯಲ್ಲಪ್ಪ ಹೆಗಡೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT