ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬೆಳಗದ ‘ಸೂರ್ಯ’ಕಾಂತಿ; ನೆಲಕ್ಕುರುಳಿದ ಮೆಕ್ಕೆಜೋಳ

ಮಲಪ್ರಭಾ, ಕೃಷ್ಣಾ ನದಿ ಪ್ರವಾಹಕ್ಕೆ ತತ್ತರಿಸಿದ ರೈತರು
Last Updated 15 ಸೆಪ್ಟೆಂಬರ್ 2022, 4:22 IST
ಅಕ್ಷರ ಗಾತ್ರ

ಬಾಗಲಕೋಟೆ: ‘ತುಟ್ಟಿ ಬೀಜ, ಗೊಬ್ಬರ ಹಾಕಿದ್ದೆ. ಹೂವು ಬಿಟ್ಟು, ತೆನೆಕಟ್ಟಿತ್ತು. ಇನ್ನೇನು ಕಟಾವು ಮಾಡಬೇಕು ಎನ್ನುವ ಹೊತ್ತಿಗೆ ಸತತವಾಗಿ ಮಳೆ ಸುರಿದು ಬೆಳೆ ಕೊಳೆತು ಹೋಗಿ, ಕಣ್ಮುಂದೆಯೇ ಬೆಳೆ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಹೀಗೆಂದು ಸಂಕಷ್ಟವನ್ನು ಬಿಚ್ಚಿಟ್ಟವರು ಬಾದಾಮಿ ತಾಲ್ಗೂಕಿನ ಹಂಗರಗಿ ಗ್ರಾಮದ ರೈತ ನಾಗರಾಜ.

ಇದು ಒಬ್ಬರು ಎದುರಿಸುತ್ತಿರುವ ಸಂಕಷ್ಟವಲ್ಲ. ಜಿಲ್ಲೆಯ ಸೂರ್ಯಕಾಂತಿ ಬೆಳೆದ ಬಹಳಷ್ಟು ರೈತರ ಕಥೆಯಿದು. ಕಟಾವಷ್ಟೇ ಬಾಕಿಯುಳಿದಿದ್ದ 4,532 ಹೆಕ್ಟೇರ್‌ ಬೆಳೆ ಸತತ ಮಳೆಯಿಂದ ಹೊಲದಲ್ಲಿಯೇ ನೆಲಕಚ್ಚಿದೆ.

ಹೆಸರುಕಾಳು ಬೆಳೆಯದ್ದೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಾಯಿ ಬಿಡುವ ಹಂತದಲ್ಲಿದ್ದಾಗ ಸತತವಾಗಿ ಸುರಿದ ಮಳೆಯಿಂದಾಗಿ ಹಳದಿ ಬಣ್ಣಕ್ಕೆ ತಿರುಗಿತ್ತು. ಅದರ ನಡುವೆಯೇ ಬಂದಿರುವ ಫಸಲಿನ ಕೊಯ್ಲು ಮಾಡಬೇಕು ಎಂಬ ಸಂದರ್ಭದಲ್ಲಿ ಮಳೆಯಿಂದಾಗಿ ನೀರು ಪಾಲಾಗಿದೆ. ಗಿಡದಲ್ಲಿಯೇ ಕಾಯಿಗಳು ಮೊಳಕೆಯೊಡದವು. 12,017 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದೆ.

ಮುಂಗಾರು ಹಂಗಾಮಿನ ಜುಲೈ ಆರಂಭದಿಂದ ಇಲ್ಲಿಯವರೆಗಿನ 70 ದಿನಗಳಲ್ಲಿ 36,122 ಹೆಕ್ಟೇರ್‌ ‍ಪ್ರದೇಶದಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ, ಕಬ್ಬು, ಸಜ್ಜೆ, ಶೇಂಗಾ ಮುಂತಾದ ಬೆಳೆಗಳು ಮಲಪ್ರಭಾ, ಕೃಷ್ಣಾ ನದಿ ಪ್ರವಾಹಕ್ಕೆ ನೀರು ಪಾಲಾಗಿವೆ.

ಅಧಿಕ ಮಳೆ: ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ 107, ಆಗಸ್ಟ್ ತಿಂಗಳಲ್ಲಿ ಶೇ 32ರಷ್ಟು ಹಾಗೂ ಸೆಪ್ಟೆಂಬರ್ ತಿಂಗಳಿನ ಹತ್ತು ದಿನಗಳಲ್ಲಿಯೇ ವಾಡಿಕೆಗಿಂತ ಶೇ 352ರಷ್ಟು ಮಳೆಯಾಗಿದೆ. ಮಳೆಯಿಂದಾಗಿ ಹಳ್ಳ, ಹೊಂಡಗಳು ತುಂಬಿ ಹರಿಯುತ್ತಿವೆ. ಹೊಲದ ಒಡ್ಡುಗಳು ಒಡೆದು ಹೋಗಿವೆ.

ಉಕ್ಕಿದ ಮಲಪ್ರಭೆ:

ಮಲ‍ಪ್ರಭಾ ನದಿ ನೀರು ಕೆಂಗಲ್, ಕಜಗಲ್, ಹೂವನೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ನುಗ್ಗಿದೆ. 161 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನೀರಿನ ಪ್ರಮಾಣ ತಗ್ಗಿರುವುದರಿಂದ ಕೆಲವರು ಗ್ರಾಮಗಳತ್ತ ಮುಖ ಮಾಡಿದ್ದಾರೆ.

ಬಾಗಲಕೋಟೆ ಸೇರಿದಂತೆ ಮೇಲ್ಭಾಗದಲ್ಲಿರುವ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಲಪ್ರಭಾ ಜಲಾಶಯ ತುಂಬಿರುವುದರಿಂದ ನೀರಿನ ಹರಿವು ಹೆಚ್ಚಳ ಆಗುವ ಸಾಧ್ಯತೆ ಇರುವುದರಿಂದ ಪ್ರವಾಹದ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT